ನಿಗದಿತ ಅವಧಿಯಲ್ಲಿ ಪ್ರಗತಿ ಸಾಧಿಸಲು ಸೂಚನೆ: ಮೊಹಿಸಿನ್

KannadaprabhaNewsNetwork |  
Published : Dec 23, 2024, 01:02 AM IST
ಜಿಪಂ ನೂತನ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ ಮೊಹಿಸಿನ್ ಮಾತನಾಡಿದರು. | Kannada Prabha

ಸಾರಾಂಶ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಿಗದಿಪಡಿಸಿದ ಅನುದಾನವನ್ನು ನಿಗದಿತ ಅವಧಿಯಲ್ಲಿ ಖರ್ಚು ಮಾಡುವ ಮೂಲಕ ಪ್ರಗತಿ ಸಾಧಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್‌ ಮೊಹಿಸಿನ್ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಿಗದಿಪಡಿಸಿದ ಅನುದಾನವನ್ನು ನಿಗದಿತ ಅವಧಿಯಲ್ಲಿ ಖರ್ಚು ಮಾಡುವ ಮೂಲಕ ಪ್ರಗತಿ ಸಾಧಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್‌ ಮೊಹಿಸಿನ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ನೂತನ ಸಭಾ ಭವನದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಕ್ರಮವಹಿಸಬೇಕು. ಫಲಾನುಭವಿಗಳ ಆಯ್ಕೆಯಿದ್ದಲ್ಲಿ ಶೀಘ್ರವಾಗಿ ಅಂತಿಮ ಪಟ್ಟಿ ತಯಾರಿಸಿ ಫಲಾನುಭವಿಗಳು ಯೋಜನೆ ಲಾಭ ಪಡೆಯುವಂತೆ ಮಾಡಬೇಕು. ಇನ್ನು ಕೆಲವು ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದ್ದರೆ, ಇನ್ನು ಕೆಲವು ಕ್ರೀಯಾಯೋಜನೆತಯಾರಿಸಲು ಬಾಕಿ ಉಳಿದಿವೆ. ಇವೆಲ್ಲವುಗಳ ಕಾರ್ಯ ಬೇಗನೆ ಪೂರ್ಣಗೊಂಡು ಯೋಜನೆಗಳು ಸಫಲಗೊಳ್ಳುವಂತೆ ಮಾಡಬೇಕೆಂದು ಸೂಚನೆ ನೀಡಿದರು.

ಜಿಲ್ಲಾ, ರಾಜ್ಯ ಹಾಗೂ ಕೇಂದ್ರ ವಲಯದಡಿ ಕೃಷಿ ಇಲಾಖೆಗೆ ಬಿಡುಗಡೆಯಾದ ₹76.11 ಕೋಟಿ ಪೈಕಿ ₹59.83 ಕೋಟಿ ಖರ್ಚು ಮಾಡುವ ಮೂಲಕ ಶೇ.78ರಷ್ಟು, ತೋಟಗಾರಿಕೆ ಶೇ.91ರಷ್ಟು, ಅರಣ್ಯ ಇಲಾಖೆ ಶೇ.100ರಷ್ಟು, ರೆಷ್ಮೆ ಇಲಾಖೆ ಶೇ.69ರಷ್ಟು ಪ್ರಗತಿ ಸಾಧಿಸಿವೆ. ನರೇಗಾ ಯೋಜನೆಯಡಿ ಮಾನವ ದಿನಗಳ ಸೃಜನೆಯಲ್ಲಿ ಶೇ.86ರಷ್ಟು ಪ್ರಗತಿ ಸಾಧಿಸಿದ್ದು, ಮೂರು ತಿಂಗಳಲ್ಲಿ ಸಂಪೂರ್ಣ ಅನುದಾನ ಖರ್ಚು ಮಾಡಬೇಕೆಂದು ಸೂಚಿಸಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ತುರ್ತಾಗಿ ಪೂರ್ಣಗೊಳಿಸಬೇಕು. ಕೆಲವೊಂದು ಕಡೆಗಳಲ್ಲಿ ಓವರ್ ನೀರಿನ ಟ್ಯಾಂಕ್ ನಿರ್ಮಿಸಲು ಅರಣ್ಯಇಲಾಖೆಯಿಂದ ಎನ್.ಓ.ಸಿ ವಿಳಂಬದಿಂದ ಕಾಮಗಾರಿಯಲ್ಲಿ ವಿಳಂಬವಾಗಿರುವುದಾಗಿ ಸಭೆಗೆ ತಿಳಿಸಿದಾಗ ಸಂಬಂಧಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ರೂಪಾ ಈ ಬಗ್ಗೆ ಮೇಲಾಧಿಕಾರಿಗಳ ಮೂಲಕ ಬೇಗನೆ ಎನ್.ಓ.ಸಿ ನೀಡಲು ಕ್ರಮವಹಿಸಲು ಸೂಚಿಸಿದರು. ಆರೋಗ್ಯಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಕ್ಲಿನಿಕ್‌ನಲ್ಲಿ ವೈದ್ಯಾಧಿಕಾರಿಗಳ ಕೊರತೆಯಿದ್ದು ಭರ್ತಿಗೆ ಕ್ರಮಕೈಗೊಳ್ಳಲು ತಿಳಿಸಿದರು.

ಜಿಲ್ಲಾಆರೋಗ್ಯ ಇಲಾಖೆ ಕಟ್ಟಡ ನಿರ್ವಹಣೆಗೆ ₹13 ಲಕ್ಷ ಅನುದಾನವಿದ್ದು, ಈ ಬಗ್ಗೆ ಇನ್ನು ಕ್ರಿಯಾಯೋಜನೆ ರೂಪಿಸಿಲ್ಲ ಏಕೆ ಎಂದು ಪ್ರಶ್ನಿಸಿದರು. ಪಿಆರ್‌ಇಡಿ ಅವರು ಎಸ್ಟಿಮೇಟ್ ಮಾಡಲು ಆರೋಗ್ಯಇಲಾಖೆಯಿಂದ ಮಾಹಿತಿ ಪಡೆಯಲು ಸೂಚಿಸಿದರು. ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇದ್ದರೂ ಸಮಸ್ಯೆ ಇರುವದಿಲ್ಲವೆಂದು ಹೇಳುವುದು ಸರಿಯಿಲ್ಲ. ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಔಷಧಿ ಲಭ್ಯತೆ ಬಗ್ಗೆ ಪರಿಶೀಲನೆ ನಡೆಸಲು ತಿಳಿಸಿದರು. ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ನಿಗದಿತ ವೇಳೆಯಲ್ಲಿ ವೇತನ ಪಾವತಿಗೆಕ್ರಮವಹಿಸಲು ತಿಳಿಸಿದರು.

ವಿವಿಧ ನಿಗಮಗಳಲ್ಲಿರುವ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ ಅನುಮೋದನೆ ಕಳುಹಿಸುವ ಕೆಲಸವಾಗಬೇಕು. ಗಂಗಾ ಕಲ್ಯಾಣಯೊಜನೆಯಡಿ ವಿದ್ಯುದೀಕರಣಕ್ಕೆ 383 ಪೈಕಿ 313 ಪ್ರಗತಿ ಸಾಧಿಸಿದ್ದು, ಬಾಕಿ ವಿದ್ಯುದೀಕರಣಕ್ಕೆ ಕ್ರಮಕೈಗೊಳ್ಳಲು ಸೂಚಿಸಿದರು. ನಿಗದಿತ ವೇಳೆಯಲ್ಲಿ ಹಾಲಿನ ಪುಡಿ ಶಾಲೆಗಳಿಗೆ ವಿತರಣೆಯಾಗದ ಕುರಿತು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ವಿವೇಕಾನಂದ ಸಭೆಗೆ ತಿಳಿಸಿದಾಗ ಸಂಬಂಧಿಸಿದ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧಿಕಾರಿಗಳಿಗೆ ಯಾವುದೇ ಸಬೂಬು ಹೇಳದೇ ನಿಗಿದಿತ ಅವಧಿಯಲ್ಲಿ ಹಾಲಿನ ಪುಡಿ ವಿತರಣೆಗೆ ಕ್ರಮವಹಿಸಲು ಸೂಚಿಸಿದರು. ಜಿಲ್ಲಾ ಮಟ್ಟದ ಇತರೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಮುಖ್ಯಯೋಜನಾಧಿಕಾರಿ ಪುನಿತ್‌ ಆರ್, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ