ಕುಡಿಯಲು ಬಳಸುವ ನೀರನ್ನು ಪರೀಕ್ಷೆ ಮಾಡಿಸಿ: ಮಲ್ಲಿಕಾರ್ಜುನ ತೊದಲಬಾಗಿ

KannadaprabhaNewsNetwork |  
Published : Jun 23, 2024, 02:03 AM IST
ಪೋಟೊ20ಕೆಎಸಟಿ2: ಕುಷ್ಟಗಿ ಪಟ್ಟಣದ ತಾಪಂ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು. | Kannada Prabha

ಸಾರಾಂಶ

ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕುಡಿಯಲು ಬಳಸುವ ನೀರನ್ನು ಪರೀಕ್ಷೆ ಮಾಡಿಸಿ ವರದಿ ಕೊಡಬೇಕು.

ತಾಪಂ ಸಾಮಾನ್ಯ ಸಭೆಯಲ್ಲಿ ಪಿಡಿಒಗಳಿಗೆ ಜಿಪಂ ಉಪಕಾರ್ಯದರ್ಶಿ ಸೂಚನೆ

ಕನ್ನಡಪ್ರಭ ವಾರ್ತೆ ಕುಷ್ಟಗಿ

ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕುಡಿಯಲು ಬಳಸುವ ನೀರನ್ನು ಪರೀಕ್ಷೆ ಮಾಡಿಸಿ ವರದಿ ಕೊಡಬೇಕು ಎಂದು ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಸೂಚಿಸಿದರು.ಪಟ್ಟಣದ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿಯ ಆದೇಶದಂತೆ ಎಲ್ಲ ಗ್ರಾಮಗಳಲ್ಲಿರುವ ಕುಡಿಯಲು ಬಳಸುವ ನೀರನ್ನು ಪರೀಕ್ಷೆ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಸುಮಾರು 90 ಹಳ್ಳಿಗಳು ಇನ್ನೂ ಹರ್ ಘರ್ ಜಲ್‌ ಘೋಷಣೆ ಮಾಡಿಲ್ಲ. ಕೂಡಲೇ ಸಾಮಾನ್ಯ ಸಭೆ ಕರೆದು ಪಿಡಿಒಗಳು ಘೋಷಣೆ ಮಾಡಬೇಕು ಎಂದರು, ಗ್ರಾಮಗಳಲ್ಲಿರುವ ಅಂಗನವಾಡಿ ಕೇಂದ್ರ, ಹಾಸ್ಟೆಲ್‌ಗಳು, ಶಾಲೆಗಳಲ್ಲಿ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಬೇಕು. ಈ ಕೆಲಸವನ್ನು ಜೆಜೆಎಂ ಅಧಿಕಾರಿಗಳು ಮಾಡಬೇಕು. ಜೊತೆಗೆ ಸಾರ್ವಜನಿಕರ ಹಾಗೂ ಅಧಿಕಾರಿಗಳ ಪೋನ್ ಕರೆ ಸ್ವೀಕಾರ ಮಾಡಬೇಕು ಎಂದು ಸೂಚನೆ ನೀಡಿದರು.

ಜೆಸ್ಕಾಂ ಅಧಿಕಾರಿಗಳು ಕುಡಿಯುವ ನೀರಿನ ಸಲುವಾಗಿ ಕಡ್ಡಾಯವಾಗಿ ವಿದ್ಯುತ್ ನೀಡಬೇಕು. ಆಕಸ್ಮಿಕವಾಗಿ ಟಿಸಿ ಸುಟ್ಟು ಹೋದರೆ ಉಚಿತವಾಗಿ ಟಿಸಿಯನ್ನು ಹಾಕಿಸುವ ವ್ಯವಸ್ಥೆ ಮಾಡಬೇಕು. ಸೆಕ್ಷನ್ ಅಧಿಕಾರಿಗಳು ಗ್ರಾಪಂ ವತಿಯಿಂದ ದುಡ್ಡು ಪಡೆದುಕೊಂಡಿರುವುದು ಗಮನಕ್ಕೆ ಬಂದಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಬೇಕು. ಇನ್ನು ಮುಂದೆ ಆ ರೀತಿಯಾಗದಂತೆ ನೋಡಿಕೊಳ್ಳಬೇಕು ಎಂದರು.

ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಸ್ಎಸ್ಎಲ್ಸಿ ಫಲಿತಾಂಶವನ್ನು ವೃದ್ಧಿಸುವಲ್ಲಿ ಇಲ್ಲಸಲ್ಲದ ನೆಪ ಹೇಳಬಾರದು. ಎಲ್ಲ ಶಾಲೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಹಾಜರಾಗುವಂತೆ ನೋಡಿಕೊಳ್ಳಬೇಕು, ಪಾಸಿಂಗ್ ಪ್ಯಾಕೇಜನ್ನು ಶಾಲಾರಂಭದಲ್ಲಿ ಕೊಡಬಾರದು, ಪರೀಕ್ಷಾ ಆರಂಭದಲ್ಲಿ ಕೊಡುವ ಕೆಲಸವಾಗಬೇಕು. ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಬಾರದು. ತಾಪಂ ವತಿಯಿಂದ ನೀಡುವ ಅನುದಾನ ಬಳಸಿಕೊಂಡು ಕ್ಲಸ್ಟರ್‌ಗೆ ಒಬ್ಬರಂತೆ ನೇಮಿಸಿಕೊಂಡು ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು, ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಶಿಕ್ಷಕರ ಕೊರತೆ ನೀಗಿಸಬೇಕು ಎಂದು ತಿಳಿಸಿದರು.

ಕೃಷಿ ಇಲಾಖೆಯ ಅಧಿಕಾರಿಗಳು ಕೃಷಿ ಕಾರ್ಯಚಟುವಟಿಕೆಗೆ ಅನೂಕೂಲವಾಗುವಂತೆ ಬೀಜ ಮತ್ತು ರಸಗೊಬ್ಬರ ನೀಡಬೇಕು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಪರಿಶಿಷ್ಟ ಪಂಗಡ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ಹಾಸ್ಟೆಲ್‌ಗಳಲ್ಲಿ ಕಾಟ್ ಹಾಗೂ ಬೆಡ್ ವ್ಯವಸ್ಥೆ ಮಾಡಿಕೊಳ್ಳಬೇಕು. ಮೂಲಭೂತ ಸೌಲಭ್ಯದ ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಏನಾದರು ಸಮಸ್ಯೆ ಇದ್ದರೆ ಪ್ರಸ್ತಾವನೆ ಕಳಿಸಬೇಕು. ಪಿಡಿಒಗಳು ಅಂಗನವಾಡಿ, ಶಾಲೆಗಳಿಗೆ, ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಸಮಸ್ಯೆ ಬಗ್ಗೆ ತಿಳಿದುಕೊಳ್ಳುವ ಮೂಲಕ ವರದಿ ನೀಡಬೇಕು ಎಂದರು.

ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಗ್ರಾಪಂಯವರು ದೊಡ್ಡ ಜಾಗವಿದ್ದರೆ ಪರಿಸರ ಬೆಳೆಸುವ ಕೆಲಸ ಮಾಡಬೇಕು, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಬರುವ 40 ಹೆಕ್ಟೇರ್‌ಗಿಂತ ಕಡಿಮೆ ಇರುವ ಕೆರೆಗಳನ್ನು ಗುರುತಿಸಿ ಅವುಗಳನ್ನು ಹರಾಜು ಮಾಡಬೇಕು. ಮೀನುಗಾರಿಕೆಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಅಬಕಾರಿ ಇಲಾಖೆಯ ಅಧಿಕಾರಿಗಳು ಅಕ್ರಮ ಸಾರಾಯಿ ಮಾರಾಟ ಹಾಗೂ ಕಳ್ಳಬಟ್ಟಿ ಸಾರಾಯಿ ತಡೆಹಿಡಿಯುವ ಕೆಲಸ ಮಾಡಬೇಕು ಅಂತವರ ವಿರುದ್ಧ ದೂರು ದಾಖಲಿಸಿ ಮಾಧ್ಯಮದ ಮೂಲಕ ಪ್ರಚಾರ ಕೈಗೊಂಡು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಇದೇ ವೇಳೆ ವಿವಿಧ ಇಲಾಖೆಯ ಅಧಿಕಾರಿಗಳ ಮೂಲಕ ಮಾಹಿತಿ ಪಡೆದುಕೊಂಡರು ಈ ಸಂದರ್ಭ ಗ್ರೇಡ್ 2 ತಹಸೀಲ್ದಾರ ಮುರುಳೀಧರ, ತಾಪಂ ಇಒ ನಿಂಗಪ್ಪ ಮಸಳಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಇದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು