ಎನ್.ಆರ್ ಪುರ -ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಶೀಘ್ರ ಪೂರ್ಣಗೊಳಿಸಲು ಸೂಚನೆ

KannadaprabhaNewsNetwork | Published : Apr 21, 2025 12:56 AM

ಸಾರಾಂಶ

ನರಸಿಂಹರಾಜಪುರ, ₹35 ಕೋಟಿ ವೆಚ್ಚದ ಎನ್.ಆರ್.ಪುರ- ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಕಾಮಗಾರಿ ವಿಳಂಬವಾಗುತ್ತಿದ್ದು ತ್ವರಿತ ಗತಿಯಲ್ಲಿ ಮುಗಿಸಬೇಕು.ಇಲ್ಲವಾದಲ್ಲಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ. ಶ್ರೀನಿವಾಸ್ ಗುತ್ತಿಗೆದಾರರಿಗೆ ಹಾಗೂ ಸಂಬಂಧಪಟ್ಟ ಇಂಜಿನಿಯರ್ ಗೆ ಖಡಕ್ ಎಚ್ಚರಿಕೆ ನೀಡಿದರು.

35 ಕೋಟಿ ವೆಚ್ಚದ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಸತ್ಯನಾರಾಯಣ್ ಸೇತುವೆ ಕಾಮಗಾರಿ ಹಾಗೂ ರಸ್ತೆ ಅಗಲೀಕರಣದ ಸರ್ವೆ ಕಾರ್ಯ ವೀಕ್ಷಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

₹35 ಕೋಟಿ ವೆಚ್ಚದ ಎನ್.ಆರ್.ಪುರ- ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಕಾಮಗಾರಿ ವಿಳಂಬವಾಗುತ್ತಿದ್ದು ತ್ವರಿತ ಗತಿಯಲ್ಲಿ ಮುಗಿಸಬೇಕು.ಇಲ್ಲವಾದಲ್ಲಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ. ಶ್ರೀನಿವಾಸ್ ಗುತ್ತಿಗೆದಾರರಿಗೆ ಹಾಗೂ ಸಂಬಂಧಪಟ್ಟ ಇಂಜಿನಿಯರ್ ಗೆ ಖಡಕ್ ಎಚ್ಚರಿಕೆ ನೀಡಿದರು.

ಭಾನುವಾರ ರಾಜ್ಯ ಲೋಕಪಯೋಗಿ ಇಲಾಖೆಯ ಕಾರ್ಯದರ್ಶಿ ಸತ್ಯನಾರಾಯಣ್, ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಹಾಗೂ ಇತರ ಇಂಜಿನಿಯರ್ ಜೊತೆ ₹ 35 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಎನ್.ಆರ್.ಪುರ- ಹೊನ್ನೇಕೊಡಿಗೆ ಸಂಪರ್ಕ ಸೇತುವೆ ವೀಕ್ಷಣೆ ಹಾಗೂ ಪಟ್ಟಣದ ಪ್ರವಾಸಿ ಮಂದಿರದಿಂದ ಸುಂಕದಕಟ್ಟೆ ವರೆಗೆ ರಸ್ತೆ ಅಗಲೀಕರಣ ಬಗ್ಗೆ ಸರ್ವೆ ಕಾರ್ಯದಲ್ಲಿ ಭಾಗಿಯಾದ ನಂತರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಮಾತನಾಡಿದರು.

ಭದ್ರಾ ಹಿನ್ನೀರಿನಿಂದ ಹೊನ್ನೇಕೊಡಿಗೆ- ನರಸಿಂಹರಾಜಪುರ ಮದ್ಯೆ ನೀರು ನಿಂತಿದ್ದರಿಂದ ರಸ್ತೆ ಸಂಪರ್ಕ ಕಡಿತ ವಾಗಿತ್ತು. ನಾನು ನನ್ನ ಹುಟ್ಟೂರಿನ ಋಣ ತೀರಿಸಲು ಸೇತುವೆ ನಿರ್ಮಿಸುವ ಕನಸು ಕಂಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ₹35 ಕೋಟಿ ಅನುದಾನ ಬಿಡುಗಡೆ ಮಾಡಿಸಿ ಸಿದ್ದರಾಮಯ್ಯ ಅವರಿಂದಲೇ ಎನ್.ಆರ್.ಪುರ- ಹೊನ್ನೇಕೊಡಿಗೆ ಸಂಪರ್ಕ ಸೇತುವೆಗೆ ಶಂಕುಸ್ಥಾಪನೆ ಮಾಡಿಸಿದ್ದೆ. ಈ ಸೇತುವೆ ನಿರ್ಮಾಣದಿಂದ ಹೊನ್ನೇಕೊಡಿಗೆ ಗ್ರಾಪಂನ ಸಾವಿರಾರು ಗ್ರಾಮಸ್ಥರಿಗೆ ಪಟ್ಟಣಕ್ಕೆ ಬರಲು ಕೇವಲ 5- 6 ಕಿ.ಮೀ. ಸಾಕಾಗುತ್ತದೆ. ಪ್ರಸ್ತುತ ಹೊನ್ನೇಕೊಡಿಗೆ ಗ್ರಾಮಸ್ಥರು 18 ಕಿ.ಮಿ. ಸುತ್ತುವರಿದು ನರಸಿಂಹರಾಜಪುರಕ್ಕೆ ಬರುತ್ತಿದ್ದಾರೆ ಎಂದರು.

ಆದರೆ, ಸಂಬಂಧಪಟ್ಟ ಗುತ್ತಿಗೆದಾರರು, ಇಂಜಿನಿಯರ್ ಗಳ ನಿರ್ಲಕ್ಷ್ಯದಿಂದ ಸೇತುವೆ ಕಾಮಗಾರಿ ವಿಳಂಬವಾಗಿದೆ.ಇಂದು ಸಂಬಂಧಪಟ್ಟ ಗುತ್ತಿಗೆದಾರರಿಗೆ, ಇಂಜಿನಿಯರ್ ಅವರಿಗೆ ಸೇತುವೆ ಕಾಮಗಾರಿ ಶೀಘ್ರ ಮುಗಿಸಲು ಸೂಚಿಸಿದ್ದೇನೆ ಎಂದರು.

ನರಸಿಂಹರಾಜಪುರ ಪಟ್ಟಣದ ರಸ್ತೆಗಳು ಇಕ್ಕಟ್ಟಾಗಿದ್ದು ರಸ್ತೆ ವಿಸ್ತರಣೆ ಅನಿವಾರ್ಯವಾಗಿದೆ. ಇಲ್ಲಿನ ನಿವಾಸಿಗಳು ರಸ್ತೆ ವಿಸ್ತರಣೆ ಮಾಡುವಂತೆ ಮನವಿ ಮಾಡಿದ್ದರು. ಈ ಬಗ್ಗೆ ಲೋಕಪಯೋಗಿ ಇಲಾಖೆ ಸಚಿವರು, ಮುಖ್ಯಮಂತ್ರಿಗಳನ್ನು ಬೇಟಿ ಚರ್ಚೆ ನಡೆಸಿ ₹60 ಕೋಟಿ ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ. ಮುಖ್ಯವಾಗಿ ರಸ್ತೆ ವಿಸ್ತರಣೆಗೆ ಜನರು ಸಹಕಾರ ನೀಡಬೇಕು. ಜನರಿಗಾಗಿಯೇ ವಿಸ್ತರಣೆ ಮಾಡುತ್ತಿದ್ದು ಸಂಬಂಧಪಟ್ಟವರಿಗೆ ಸರ್ಕಾರಿ ನಿಯಮದಂತೆ ಪರಿಹಾರ ಕೊಡಿಸ ಲಾಗುವುದು ಎಂದರು.

ಶಿವಮೊಗ್ಗ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ,ರಾಜ್ಯ ಪ್ರವಾಸೋದ್ಯಮ ಇಲಾಖೆ ಎಂ. ಶ್ರೀನಿವಾಸ್ ನರಸಿಂಹರಾಜಪುರ- ಹೊನ್ನೇಕೊಡಿಗೆ ಸೇತುವೆ ಜೋಡಣೆ ಕನಸು ಕಂಡಿದ್ದು ಅದನ್ನು ಈಡೇರಿಸುತ್ತಿದ್ದಾರೆ.ಆ ಸೇತುವೆಗೆ ಸಿದ್ದರಾಮಯ್ಯ ಅವರೇ ಶಂಕುಸ್ಥಾಪನೆ ಮಾಡಿದ್ದರು. ಸೇತುವೆ ಹಾಗೂ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಗಳೇ ಬಂದಿದ್ದಾರೆ. ಭದ್ರಾ ಡ್ಯಾಂ ಕಟ್ಟಿದ್ದರಿಂದ ನರಸಿಂಹರಾಜಪುರ ಜನತೆ ಮನೆ, ಜಮೀನು ಕಳೆದುಕೊಂಡಿದ್ದಾರೆ. ಆದಷ್ಟು ಬೇಗ ಅಧಿಕಾರಿಗಳು,ಗುತ್ತಿಗೆದಾರರು ಹಾಗೂ ಇಂಜಿನಿಯರ್ ಗಳು ಸೇತುವೆ ಕಾಮಗಾರಿ, ರಸ್ತೆ ಅಗಲೀಕರಣದ ಕಾಮಗಾರಿ ಮುಗಿಸಬೇಕು ಎಂದರು.

ಈ ಸಂದರ್ಭದಲ್ಲಿ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಪಪಂ ಅಧ್ಯಕ್ಷೆ ಜುಬೇದ, ಸದಸ್ಯ ವಾಸಿಂ, ಯುವ ಮುಖಂಡ ದೇವಂತರಾಜ್, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್,ಲೋಕೋಪಯೋಗಿ ಇಲಾಖೆ ರಾಜ್ಯ ಕಾರ್ಯದರ್ಶಿ ಸತ್ಯನಾರಾಯಣ,ಕೆ.ಆರ್.ಡಿ.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಲಿಂಗಮೂರ್ತಿ, ಲೋಕೋಪಯೋಗಿ ಇಲಾಖೆ ನಿರ್ದೇಶಕ ಗಣೇಶ್, ಶ್ರೀಧರ್, ದಿನೇಶ್ ಇದ್ದರು.

-- ಬಾಕ್ಸ್ ---

ಪ್ರವಾಸಿ ಮಂದಿರರಿಂದ ಬಸ್ಸು ನಿಲ್ದಾಣದವರೆಗೆ 1100 ಮೀಟರ್ ಹಾಗೂ ಪಟ್ಟಣ ಪಂಚಾಯಿತಿಯಿಂದ ಸುಂಕದ ಕಟ್ಟೆವರೆಗೆ 1600 ಮೀಟರ್ ರಸ್ತೆ ಅಗಲೀಕರಣ ಮಾಡಲು ಪ್ಲಾನ್, ಎಸ್ಟಿಮೇಟ್ ತಯಾರಿಸಲಾಗಿದೆ ಎಂದು ಲೋಕೋಪ ಯೋಗಿ ರಾಜ್ಯ ಕಾರ್ಯದರ್ಶಿ ಸತ್ಯನಾರಾಯಣ್ ತಿಳಿಸಿದರು.

ಈ ರಸ್ತೆಯಲ್ಲಿ ಭಾಗದಲ್ಲಿ 137 ಖಾತೆದಾರರ ಮನೆಗಳಿವೆ. ಕಾನೂನು ಪ್ರಕಾರ ಪರಿಹಾರ ನೀಡಲಾಗುವುದು. ಒಟ್ಟು 16 ಮೀ. ಅಗಲದ ರಸ್ತೆ ನಿರ್ಮಿಸಲಾಗುವುದು.ಮುಂದೆ ಸಂಬಂಧಪಟ್ಟ ಎಲ್ಲಾ ಖಾತೆದಾರರ ಸಭೆ ಕರೆಯಲಾಗುವುದು ಎಂದರು.

Share this article