ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ರಾಜಕೀಯ ಕ್ಷೇತ್ರವಲ್ಲದೆ ಸಾಹಿತ್ಯ, ಕಲೆ ಕ್ಷೇತ್ರದಲ್ಲಿಯೂ ಅಪಾರ ಸೇವೆ ಸಲ್ಲಿಸಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿರುವ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮತ್ತು ಅವರ ಪತ್ನಿ ಶಾಂತಮ್ಮ ಅವರ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಆಶಯ ವ್ಯಕ್ತಪಡಿಸಿದರು.ಪಟ್ಟಣದ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದ ಮುಂಭಾಗ ಎಚ್. ವಿಶ್ವನಾಥ್ ಅವರ ಅಭಿಮಾನಿಗಳು ಮತ್ತು ಹಿತೈಷಿಗಳ ಬಳಗದಿಂದ ನಡೆದ ಅಡಗೂರು ಎಚ್. ವಿಶ್ವನಾಥ್ ಅವರ 50ನೇ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದಂಪತಿಯನ್ನು ಸನ್ಮಾನಿಸಿ ಮಾತನಾಡಿ, ಎಚ್. ವಿಶ್ವನಾಥ್ ಅವರು ಆಡುಮುಟ್ಟಿದ ಸೊಪ್ಪಿಲ್ಲ ಎಂಬಂತೆ ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದರು.
ವಿಶ್ವನಾಥ್ ಅವರು ವಕೀಲರಾಗಿ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕರಾಗಿ, ಅಧ್ಯಕ್ಷರಾಗಿ, ಶಾಸಕರಾಗಿ, ಸಚಿವರಾಗಿ, ಸಂಸತ್ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಲೇಖಕರಾಗಿ, ಕಲಾವಿದರಾಗಿ ಕವಿಯಾಗಿ ಅವರು ಮಾಡಿದ ಸಾಧನೆಯು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ಅವರು ಹಾಕಿಕೊಟ್ಟ ದಾರಿಯಲ್ಲಿ ಇಂದಿನ ಯುವಕರು ಸಾಗಬೇಕು ಎಂದು ಹೇಳಿದರು.ತಮ್ಮ ಅಧಿಕಾರ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟ ಯೋಜನೆ, ಯಶಸ್ವಿನಿ, ಸಮುದಾಯದತ್ತ ಶಾಲೆ, ಮಹಿಳಾ ಸಂಘಗಳ ಸ್ಥಾಪನೆ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದು ಇಂದಿಗೂ ಜನಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇವರ ದಾಂಪತ್ಯ ಜೀವನ ಇನ್ನೂ ಹೆಚ್ಚು ಕಾಲ ಹೀಗೆ ಸುಖಕರವಾಗಿರಲಿ ಎಂದು ಹಾರೈಸಿದರು.ಇದಕ್ಕೂ ಮೊದಲು ಸಾವಿರಾರು ಅಭಿಮಾನಿಗಳು, ಹಿತೈಷಿಗಳು ಹಾರ ತುರಾಯಿ ಹಾಕುವ ಮೂಲಕ ದಂಪತಿಗೆ ಶುಭ ಕೋರಿದರು.
ನವ ನಗರ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಪುರಸಭಾ ಅಧ್ಯಕ್ಷ ಶಿವು ನಾಯಕ್, ಪುರಸಭಾ ಸದಸ್ಯರಾದ ನಟರಾಜ್, ಕೆ.ಪಿ. ಪ್ರಭುಶಂಕರ್, ಕೆ.ಎಲ್. ಜಗದೀಶ್, ಸಂತೋಷ್ ಗೌಡ, ಉಮೇಶ್, ಡಾ. ಮೆಹಬೂಬ್ ಖಾನ್, ಜೆಡಿಎಸ್ ಅಧ್ಯಕ್ಷ ಎಚ್.ಸಿ. ಕುಮಾರ್, ಮೆಡಿಕಲ್ ರಾಜಣ್ಣ, ಜಿಪಂ ಮಾಜಿ ಅಧ್ಯಕ್ಷ ಬಸವರಾಜಪುರ ಸಿದ್ದಪ್ಪ, ಸಾ.ರಾ. ನಂದೀಶ್, ಅಮಿತ್ ವಿ. ದೇವರಹಟ್ಟಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೈ.ಎಸ್. ಕುಮಾರ್, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರಾಜಲಕ್ಷ್ಮಿ, ವಕೀಲ ಅಂಕನಹಳ್ಳಿ ತಿಮ್ಮಪ್ಪ, ಸುಬ್ಬಕೃಷ್ಣ ಸೇರಿ ಸಾವಿರಾರು ಅಭಿಮಾನಿಗಳ ಜೊತೆಗೆ ಕುಂಬಾರರ ಸಂಘ, ವೀರಶೈವ ಸಂಘ, ಮಡಿವಾಳ ಸಂಘ, ಗಾಣಿಗರ ಸಂಘ, ನಾಮಧಾರಿ ಗೌಡರ ಸಂಘ, ಬ್ರಾಹ್ಮಣರ ಸಂಘ, ಒಕ್ಕಲಿಗರ ಸಂಘ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.