ಹಕ್ಕುಪತ್ರ ಪಡೆದವರಿಗೆ ಇ ಸ್ವತ್ತು ನೀಡಲು ಸೂಚನೆ:

KannadaprabhaNewsNetwork | Published : Apr 18, 2025 12:37 AM

ಸಾರಾಂಶ

ಕಡೂರು, ಕಂದಾಯ ಗ್ರಾಮವೆಂದು ಘೋಷಣೆಯಾದ ಗ್ರಾಮಗಳಲ್ಲಿ ಈಗಾಗಲೇ ಹಕ್ಕುಪತ್ರ ಪಡೆದವರಿಗೆ ಇ ಸ್ವತ್ತು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಆನಂದ್ ಸೂಚನೆ ನೀಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಗ್ರಾಮವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಕೆ.ಎಸ್.ಆನಂದ್

ಕನ್ನಡಪ್ರಭ ವಾರ್ತೆ, ಕಡೂರು

ಕಂದಾಯ ಗ್ರಾಮವೆಂದು ಘೋಷಣೆಯಾದ ಗ್ರಾಮಗಳಲ್ಲಿ ಈಗಾಗಲೇ ಹಕ್ಕುಪತ್ರ ಪಡೆದವರಿಗೆ ಇ ಸ್ವತ್ತು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಆನಂದ್ ಸೂಚನೆ ನೀಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕಿನಲ್ಲಿರುವ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮ, ಉಪ ಗ್ರಾಮಗಳನ್ನಾಗಿಸುವ ಅಥವಾ ಗ್ರಾಮ ಠಾಣಾ ವಿಸ್ತರಣೆ ಕುರಿತು ನಡೆದ ಗ್ರಾಮವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಅನೇಕ ಜನವಸತಿ ಹೊಂದಿರುವ ಪ್ರದೇಶಗಳನ್ನು ಕಂದಾಯ ಗ್ರಾಮ- ಉಪ ಗ್ರಾಮಗಳಾಗಿ ಘೋಷಿಸಲು ಅಂತಿಮ ಅಧಿಸೂಚನೆ ಹೊರಡಿಸಿ, ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸುವ ಕಾರ್ಯ ಆಗಬೇಕಿದೆ. ಈ ಕಾರ್ಯವನ್ನು ಆದ್ಯತೆ ಮೇಲೆ ಮಾಡಬೇಕು ಎಂದು ಸೂಚಿಸಿದರು.ಬಿಸಿಲು ಹೆಚ್ಚಾಗತೊಡಗಿದ್ದು, ಕುಡಿಯುವ ನೀರಿನ‌ ಸಮಸ್ಯೆ ಉಂಟಾದ ಗ್ರಾಮಗಳನ್ನು ಗುರುತಿಸಿ ಯಾವುದೇ ತೊಂದರೆ ಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ತ್ಯಾಜ್ಯ ವಿಲೇವಾರಿ ಸಮರ್ಪಕ ವಾಗಿರುವಂತೆ ಎಲ್ಲ ಪಿಡಿಒಗಳು ಎಚ್ಚರ ವಹಿಸಬೇಕು. ತ್ಯಾಜ್ಯ ವಿಲೇವಾರಿಗೆ ಜಾಗವಿಲ್ಲದಿದ್ದರೆ ಕೂಡಲೇ ಜಾಗ ಮಂಜೂರು ಮಾಡಿಸಿಕೊಳ್ಳಲು ಪ್ರಸ್ತಾವನೆ ಸಲ್ಲಿಸಬೇಕು. ಜಾಗ ಮಂಜೂರಾಗಿದ್ದರೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ನರೇಗಾ ಯೋಜನೆಯಲ್ಲಿ 2024- 25 ನೇ ಸಾಲಿನಲ್ಲಿ ನಿಗದಿತ ಗುರಿಗಿಂತ ಹೆಚ್ಚು ಮಾನವ ದಿನಗಳ ಸೃಜಿಸಿ ಸಾಧನೆ ಮಾಡಿರುವ ಹಾಗೂ 2024-25 ನೇ ಸಾಲಿನಲ್ಲಿ ತೆರಿಗೆ ವಸೂಲಾತಿಯಲ್ಲಿ ಶೇ.100 ವಸೂಲಾತಿ ಮಾಡಿರುವುದು ಅಭಿನಂದನೀಯ ಎಂದರು.ನೂತನ ಕಂದಾಯ ಗ್ರಾಮ- ಉಪ ಗ್ರಾಮಗಳ ರಚನೆ ಕುರಿತ ಕಾರ್ಯಗಳನ್ನು ತುರ್ತಾಗಿ ಮುಗಿಸಿದರೆ ಕಂದಾಯ ಸಚಿವರ ಉಪಸ್ಥಿತಿಯಲ್ಲಿ ಹಕ್ಕುಪತ್ರ ವಿತರಿಸಲು ಅನುಕೂಲವಾಗುತ್ತದೆ. ಎಲ್ಲರೂ ಈ ಬಗ್ಗೆ ಗಮನ‌ ಹರಿಸಿ ಕೆಲಸ ಪೂರ್ಣಗೊಳಿಸಲು ಮುಂದಾಗಬೇಕೆಂದು ಸೂಚಿಸಿದರು.ತಹಸೀಲ್ದಾರ್ ಸಿ‌.ಎಸ್.ಪೂರ್ಣಿಮಾ ಮಾತನಾಡಿ, ತಾಲೂಕಿನಲ್ಲಿ ಒಟ್ಟು 314 ಕಂದಾಯ ಗ್ರಾಮಗಳಿವೆ. ಹೊಸ ಕಂದಾಯ ಗ್ರಾಮಗಳ ರಚನೆಗಾಗಿ ಒಟ್ಟು 80 ಗ್ರಾಮಗಳನ್ನು ಗುರುತಿಸಲಾಗಿದೆ. 51 ಗ್ರಾಮಗಳನ್ನು ಸರ್ಕಾರ ಅನುಮೋದಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 13 ಗ್ರಾಮಗಳಿಗೆ ಸರ್ಕಾರದ ಪ್ರಾಥಮಿಕ ಅಧಿಸೂಚನೆ ದೊರೆಯಬೇಕಿದೆ. 12 ಗ್ರಾಮಗಳ ಅಂತಿಮ ಅಧಿಸೂಚನೆ ಬಾಕಿ ಉಳಿದಿದ್ದು, 2500 ಫಲಾನುಭವಿಗಳನ್ನು ಗುರುತಿಸಲಾಗಿದೆ. ಅನುಮೋದನೆ ನೀಡಲು 414 ಅರ್ಜಿಗಳು ಬಾಕಿ ಇವೆ. ನಿರ್ವಾಹಕರ ಲಾಗಿನ್ ನಲ್ಲಿ 857 ಅರ್ಜಿಗಳು, ಗ್ರಾಮ ಆಡಳಿತಾಧಿಕಾರಿಗಳ ಬಳಿ 176 ಅರ್ಜಿಗಳು ಬಾಕಿ ಇವೆ. ಈಗಾಗಲೇ 1053 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಸಿ.ಆರ್.ಪ್ರವೀಣ್, ಸರ್ವೆ ಇಲಾಖೆ ಎಡಿಎಲ್ಆರ್ ಶ್ರೀನಿಧಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

17ಕೆಕೆಡಿಯು2

ಶಾಸಕ ಕೆ.ಎಸ್.ಆನಂದ್ ರವರ ಅಧ್ಯಕ್ಷತೆಯಲ್ಲಿ ಪಟ್ಟಣದ ತಾಪಂ ಸಭಾಂಗಣದಲ್ಲಿ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮ, ಉಪ ಗ್ರಾಮಗಳನ್ನಾಗಿಸುವ ಅಥವಾ ಗ್ರಾಮ ಠಾಣಾ ವಿಸ್ತರಣೆ ಕುರಿತು ನಡೆದ ಗ್ರಾಮವಾರು ಪ್ರಗತಿ ಪರಿಶೀಲನಾ ಸಭೆ ನಡೆಯಿತು.

Share this article