ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಮುಜರಾಯಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಪ್ರಗತಿ ಪರಿಶೀಲಿನಾ ಸಭೆ ನಡೆಸಿ ಮಾತನಾಡಿದರು.
ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ವೇಳೆಯಲ್ಲಿ ಎ.ಬಿ.ಸಿ.ಡಿ. ಯಾಗಿ ದಾಖಲೆಗಳನ್ನು ವರ್ಗೀಕರಿಸಿ ಸ್ಕ್ಯಾನ್ ಮಾಡಬೇಕು, ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಂಡು ದಾಖಲೆಗಳನ್ನು ಡಿಜಿಟಲೀಕರಣ ಮಾಡಬೇಕು ಎಂದರು.ಪೌತಿ ಖಾತೆ ಆಂದೋಲನದ ಸಮರ್ಪಕವಾಗಿ ಅನುಷ್ಠಾನ ಮಾಡಿ, ಇದರಿಂದ ಸಾಮಾನ್ಯ ಜನರಿಗೆ ಅನುಕೂಲವಾಗುತ್ತದೆ ಹಾಗೂ ಜಿಲ್ಲೆಯಲ್ಲಿ ಬಾಕಿ ಇರುವ ಕಂದಾಯ ಗ್ರಾಮ ಗುರುತಿಸಿ ಕೂಡಲೇ ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿರುವ ೨೪೫೬ ದೇವಸ್ಥಾನಗಳ ಹೆಸರಿನಲ್ಲಿ ಅಧಿಸೂಚನೆ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಮುಜರಾಯಿ ಇಲಾಖೆ ಸೇರಿದ ದೇವಸ್ಥಾನ ಆಸ್ತಿಯನ್ನು ರಕ್ಷಣೆ ಮಾಡಬೇಕು ಎಂದು ತಿಳಿಸಿದರು.
ದೇವಸ್ಥಾನದ ಹೆಸರಿನಲ್ಲಿ ಅಧಿಸೂಚನೆ ಹೊರಡಿಸಲು ಪ್ರಸ್ತಾವನೆ ಸಲ್ಲಿಸುವ ಸಂದರ್ಭಗಳಲ್ಲಿ ಕಡ್ಡಾಯವಾಗಿ ದೇವಸ್ಥಾನದ ಹೆಸರು ಹಾಗೂ ವಿಳಾಸವನ್ನು ಪರಿಶೀಲಿಸಿ ಸಲ್ಲಿಸಬೇಕು ಹಾಗೂ ಅಧಿಸೂಚನೆ ಬಳಿಕವು ಪರಿಶೀಲಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಮುಜರಾಯಿ ಇಲಾಖೆಗೆ ಒಳಪಡುವ ಎಲ್ಲಾ ದೇವಸ್ಥಾನ ಆಸ್ತಿಗಳಿಗೆ ಇ- ಖಾತೆ ಹಾಗೂ ಜಮೀನು, ಇತರೆ ಪಹಣಿ, ದೇವಸ್ಥಾನದ ಯಾವುದೇ ಆಸ್ತಿಗಳು ಒತ್ತುವರಿ ಆಗದಂತೆ ಅಧಿಕಾರಿ ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು ಎಂದರು.
ಎಲ್ಲಾ ದೇವಸ್ಥಾನ ಹಾಗೂ ಆಸ್ತಿಗಳು ಸರ್ವೇ ಆಗಿರಬೇಕು, ಸರ್ವೇಯಾದ ನಂತರ ಒತ್ತುವರಿಯಾಗಿದ್ದರೆ ತೆರವುಗೊಳಿಸಿ ತಂತಿ ಬೇಲಿ ಅಥವಾ ಕಾಂಪೌಂಡ್ ನಿರ್ಮಾಣ ಮಾಡಿಕೊಳ್ಳುವಂತೆ ತಿಳಿಸಿದರು.ಮುಜರಾಯಿ ಇಲಾಖೆಗೆ ಒಳಪಡುವ ಎಲ್ಲಾ ದೇವಸ್ಥಾನಗಳಿಗೆ ಕಡ್ಡಾಯವಾಗಿ ದೇವಸ್ಥಾನ ಹೆಸರು, ವಿಳಾಸ ಯಾವ ದರ್ಜೆಯ ದೇವಸ್ಥಾನ ಎಂಬುದರ ನಾಮಫಲಕವನ್ನು ಅಳವಡಿಸಬೇಕು ಎಂದು ಸೂಚನೆ ನೀಡಿದರು.
ಮುಜರಾಯಿ ಇಲಾಖೆಯ ಆಯುಕ್ತರಾದ ಶರತ್ ಅವರು ಮಾತನಾಡಿ, ಜಿಲ್ಲೆಯಲ್ಲಿ ೬ ಎ ದರ್ಜೆಯ ದೇವಸ್ಥಾನ, ೬ ಬಿ ದರ್ಜೆಯ ದೇವಸ್ಥಾನ ಹಾಗೂ ೨,೪೪೪ ಸಿ ದರ್ಜೆಯ ದೇವಸ್ಥಾನಗಳು ಇದ್ದು, ೧,೭೯೬ ದೇವಸ್ಥಾನಗಳು ಅಧಿಸೂಚನೆ ಹೊರಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಕೂಡಲೇ ಅಧಿಸೂಚನೆಗೆ ಕ್ರಮ ವಹಿಸಲಾಗುವುದು ಎಂದರು.೧೫೬೨ ಮುಜರಾಯಿ ದೇವಸ್ಥಾನ ಹಾಗೂ ಆಸ್ತಿಗಳಲ್ಲಿ ೬೯೧ ಪಹಣಿ, ೮೦೮ ಗ್ರಾಮ ಠಾಣ ವ್ಯಾಪ್ತಿ ಹಾಗೂ ೬೩ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಮಾರ್ಚ್ ಅಂತ್ಯದೊಳಗೆ ಅರಕಲಗೂಡು,ಸಕಲೇಶಪುರ, ಆಲೂರು, ಅರಸೀಕೆರೆ ಹಾಗೂ ಹಾಸನ ಜಿಲ್ಲಾಧಿಕಾರಿಗಳ ಕಚೇರಿಯ ದಾಖಲೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ೨೩೦೮ ದೇವಸ್ಥಾನ ಹಾಗೂ ಆಸ್ತಿಗಳಿಗೆ ಖಾತೆ ಇದೆ, ೫೪೬ ಆಸ್ತಿಗಳ ಖಾತೆ ನಿರ್ವಹಣೆ ಬಾಕಿ ಇದೆ, ಕೂಡಲೇ ಪೂರ್ಣ ಗೊಳಿಸಲಾಗುವುದು. ಅದರಲ್ಲಿ ೧೫೬೨ ಮುಜರಾಯಿ ಸಂಸ್ಥೆ ದೇವಸ್ಥಾನ ಅಥವಾ ಆಸ್ತಿಗಳಿಗೆ ಧಾರ್ಮಿಕ ದತ್ತಿ ಇಲಾಖೆ ಎಂದು ನವೀಕರಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕರಾದ ಹೇಮಲತಾ ಹಾಗೂ ಎಲ್ಲಾ ತಹಸೀಲ್ದಾರ್ ಗಳು ಉಪಸ್ಥಿತರಿದ್ದರು.