ಕನ್ನಡಪ್ರಭ ವಾರ್ತೆ, ತುಮಕೂರು0ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸಭೆ ನಡೆಸಿ ವಾರದೊಳಗೆ ಆಯೋಗಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಸೂಚಿಸಿದ್ದಾರೆ. ಜಿಲ್ಲಾ ಪಂಚಾಯ್ತಿಯಲ್ಲಿ ಪೋಕ್ಸೋ ಕಾಯ್ದೆ ಹಾಗೂ ಸಮಗ್ರ ಮಕ್ಕಳ ರಕ್ಷಣಾ ವ್ಯವಸ್ಥೆಯ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತುಮಕೂರು ಜಿಲ್ಲಾಸ್ಪತ್ರೆಯ ನವಜಾತ ಶಿಶು ತೀವ್ರ ನಿಗಾ ಘಟಕದಲ್ಲಿ ಅವ್ಯವಸ್ಥೆ, ಪೊಲೀಸ್ ಠಾಣೆಗಳಲ್ಲಿ ಮಕ್ಕಳ ರಕ್ಷಣಾ ಕುರಿತು ಫಲಕಗಳ ಅಳವಡಿಸದೇ ಇರುವುದು, ಸರಿಯಾದ ದಾಖಲೆ ಇಟ್ಟಿಲ್ಲದಿರುವುದು, ಖಾಸಗಿ ಸ್ಕ್ಯಾನಿಂಗ್ ಕೇಂದ್ರದಲ್ಲಿ ಗರ್ಭಧಾರಣೆ ಪೂರ್ವ ಮತ್ತು ಪ್ರಸವಪೂರ್ವ ರೋಗ ನಿರ್ಣಯ ತಂತ್ರಗಳು (ಲಿಂಗ ಆಯ್ಕೆ ನಿಷೇಧ) ಕಾಯ್ದೆ ಪ್ರಕಾರ ಎಲ್ಲ ನಿಯಮಗಳ ಉಲ್ಲಂಘನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಇರುವ ಗೊಂದಲಗಳ ಕುರಿತು ವಾರದೊಳಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದರು. ಸಭೆಯಲ್ಲಿ ಬಾಲಗರ್ಭಿಣಿಯರ ಮಾಹಿತಿ ಪಡೆದ ಅವರು, ಪ್ರಕರಣಗಳ ಕುರಿತು ಸರಿಯಾಗಿ ಕೇಸು ದಾಖಲಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪ್ರಕರಣಗಳ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ನಿಯಮಾನುಸಾರ ಕೇಸು ದಾಖಲಿಸಬೇಕು. ಇದರಿಂದ ಬಾಲ್ಯ ವಿವಾಹ ಅಥವಾ ನಿಯಮಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ. ಕಾನೂನು ಬಗ್ಗೆ ದುಷ್ಕರ್ಮಿಗಳಿಗೆ ಭಯ ಇರುತ್ತದೆ ಎಂದರು. ಶಾಲಾ-ಕಾಲೇಜು ವಿದ್ಯಾರ್ಥಿ ನಿಲಯಗಳಲ್ಲಿ ಸೂಕ್ತ ಆರೋಗ್ಯ ಸೇವೆ ಸಿಗಬೇಕು. ಸಂಬಂಧಿಸಿದ ಸಮಿತಿ ಸಭೆ ನಡೆಸಿ ಮಕ್ಕಳಿಗೆ ಕಾನೂನು ರೀತ್ಯ ಇರುವ ರಕ್ಷಣಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಶಾಲಾ ಶಿಕ್ಷಣ ಇಲಾಖೆಯಲ್ಲಿ ಮಕ್ಕಳಿಗೆ ಶಿಷ್ಯವೇತನ ಪಡೆಯಲು ಅನುಕೂಲವಾಗುವಂತೆ ಆಧಾರ್ ಲಿಂಕ್ ಮಾಡಬೇಕು. ಅಲ್ಲದೆ ಅಪಾರ್ ಲಿಂಕ್ ಮಾಡಬೇಕು. ಗ್ರಾಮ ಪಂಚಾಯ್ತಿಗಳಲ್ಲಿ ೧೮ ವರ್ಷದೊಳಗಿನ ಮಕ್ಕಳ ಕಲ್ಯಾಣಕ್ಕೆ ಇರುವ ಅನುದಾನದಲ್ಲಿ ಬಿಡಿಗಾಸು ವೆಚ್ಚ ಮಾಡಿಲ್ಲ. ಈ ಮೂಲಕ ಸರ್ಕಾರದ ಆದೇಶವನ್ನು ಉಲ್ಲಂಘಿಸಲಾಗುತ್ತಿದೆ. ಈ ಕೂಡಲೇ ಜಿಲ್ಲಾ ಪಂಚಾಯ್ತಿ ಸಿಇಒ ಸೂಕ್ತ ಕ್ರಮ ವಹಿಸಬೇಕು ಎಂದರು.