ಅವಹೇಳನ: ಗಂಗಾವತಿ ಪೌರಾಯುಕ್ತರು ಸಿಬ್ಬಂದಿ, ಸದಸ್ಯರಿಂದ ದಿಢೀರ್‌ ಧರಣಿ

KannadaprabhaNewsNetwork |  
Published : Jul 13, 2024, 01:34 AM IST
12 ಜಿಎನ್‌ ಜಿ1 | Kannada Prabha

ಸಾರಾಂಶ

ಗಂಗಾವತಿ ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ಅವರಿಗೆ ನಗರಸಭೆ ಮಾಜಿ ಅಧ್ಯಕ್ಷೆ ಮಾಲಾಶ್ರೀ ಅವರ ಪತಿ ಸಂದೀಪ್ ಅವಹೇಳನೆ ಮಾಡಿದ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಮತ್ತು ಸದಸ್ಯರು ದಿಢೀರ್‌ ಧರಣಿ ನಡೆಸಿದರು.

ಗಂಗಾವತಿ: ನಗರಸಭೆ ಮಾಜಿ ಅಧ್ಯಕ್ಷೆ ಮಾಲಾಶ್ರೀ ಪತಿ ಸಂದೀಪ್‌ ಅವಹೇಳನ ಮಾಡಿದ್ದಾರೆ, ಅವಾಚ್ಯವಾಗಿ ಸಂದೇಶ ಕಳುಹಿಸಿದ್ದಾರೆ ಎಂದು ಆರೋಪಿಸಿ ಇಲ್ಲಿಯ ನಗರಸಭೆಯ ಪೌರಾಯುಕ್ತ ವಿರೂಪಾಕ್ಷಮೂರ್ತಿ ಹಾಗೂ ನಗರಸಭೆ ಸಿಬ್ಬಂದಿ, ಸದಸ್ಯರು ಶುಕ್ರವಾರ ದಿಢೀರ್‌ ಧರಣಿ ನಡೆಸಿದರು.

ಗುರುವಾರ ಸಂಜೆ ನಗರಸಭೆ ಮಾಜಿ ಅಧ್ಯಕ್ಷೆ ಮಾಲಾಶ್ರೀ ಪತಿ ಸಂದೀಪ್ ಅವರು ಪೌರಾಯುಕ್ತ ವಿರೂಪಾಕ್ಷಮೂರ್ತಿ ಅವರಿಗೆ ಧ್ವನಿ ಸಂದೇಶ (ವಾಯ್ಸ್‌ ಮೆಸೇಜ್‌) ಕಳುಹಿಸಿ ಪತ್ನಿ, ತಾಯಿ, ಅಕ್ಕ ತಂಗಿಯವರಿಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಇದಕ್ಕೆ ಅಕ್ರೋಶ ವ್ಯಕ್ತಪಡಿಸಿದ ಪೌರಾಯುಕ್ತರು, ನಗರ ಪೊಲೀಸ್ ಠಾಣೆಗೆ ಸಿಬ್ಬಂದಿ ಜತೆ ಹೋಗಿ ದೂರು ದಾಖಲಿಸಿದ್ದಾರೆ.

ದಿಢೀರ್‌ ಪ್ರತಿಭಟನೆ: ಪೌರಾಯುಕ್ತರಿಗೆ ಅವಾಚ್ಯ ಶಬ್ದಗಳಿಂದ ಅವಹೇಳನ ಮಾಡಿದ ಸಂದೀಪ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ನಗರಸಭೆ ಮುಂದೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ನೇತೃತ್ವದಲ್ಲಿ ಸಿಬ್ಬಂದಿ ಮತ್ತು ಕಾಂಗ್ರೆಸ್ , ಬಿಜೆಪಿ ಸದಸ್ಯರು ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ವಿರೂಪಾಕ್ಷಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷೆ ಮಾಲಾಶ್ರೀ ಪತಿ ಸಂದೀಪ್ ಅವರು ಅಗೌರವ ತೋರಿದ್ದಾರೆ. ನನ್ನ ಕುಟುಂಬದ ವರ್ಗದವರನ್ನು ನಿಂದಿಸಿದ್ದು, ಇದು ಅವರ ದುರಹಂಕಾರ ಎತ್ತಿ ತೋರುತ್ತದೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ಸಂದೀಪ್ ಅವರನ್ನು ಬಂಧಿಸುವ ವರೆಗೂ ಧರಣಿ ಮುಂದುವರಿಸುತ್ತೇವೆ ಎಂದರು.

ನೋಟಿಸ್ ಜಾರಿ: ನಗರಸಭೆ ಸಿಬ್ಬಂದಿ ಧರಣಿ ನಡೆಸುತ್ತಿದ್ದಂತೆಯೇ ನಗರ ಪೊಲೀಸರು ಸಂದೀಪ ಅವರನ್ನು ನಗರ ಠಾಣೆಗೆ ಕರೆ ತಂದು ವಿಚಾರಣೆ ಕೈಗೊಂಡರು. ಆನಂತರ ಎಚ್ಚರಿಕೆ ನೋಟಿಸ್ ನೀಡಿ ಬಿಡುಗಡೆ ಮಾಡಲಾಗುತ್ತದೆ ಎಂದು ನಗರ ಪೊಲೀಸ್ ಠಾಣೆಯ ಪಿಐ ಪ್ರಕಾಶ ಮಾಳೆ ತಿಳಿಸಿದ್ದಾರೆ.

ಧರಣಿಯಲ್ಲಿ ಎಇಇ ಶಂಕರಗೌಡ, ಚೇತನ್ ಕುಮಾರ, ನಾಗರಾಜ್, ಶಿವಕುಮಾರ, ಪ್ರವೀಣ್ , ವ್ಯವಸ್ಥಾಪಕ ಷಣ್ಮುಖ, ರಾಘವೇಂದ್ರ ಶೆಟ್ಟಿ, ನಗರಸಭಾ ಸದಸ್ಯರಾದ ಶ್ಯಾಮೀದ್ ಮನಿಯಾರ್, ವಾಸು ನವಲಿ, ರಾಚಪ್ಪ ಸಿದ್ದಾಪುರ, ಇಸೂಫ್, ರಾಮಣ್ಣ, ಅಮರೇಗೌಡ, ನವೀನ್ ಮಾಲೀಪಾಟೀಲ್, ರಮೇಶ ಚೌಡ್ಕಿ, ಅಜಯ್ ಬಿಚ್ಚಾಲಿ, ಗದ್ವಾಲ್ ಹುಸೇನ್ ಸಾಬ, ಶರಭೋಜಿ, ನೀಲಕಂಠ, ಜುಬೇರಾ, ಸುನೀತಾ ಶ್ಯಾವಿ, ಮುಸ್ತಾಕ್, ಜಬ್ಬಾರ್, ಉಸ್ಮಾನ್, ಮನೋಹರಸ್ವಾಮಿ ಹೇರೂರು, ಅಮರಸಿಂಗ್ , ಇಸೂಫ್, ರಾಮಣ್ಣ ಹಾಗೂ ಮಹಿಳಾ ಕಾರ್ಮಿಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''