ಕಲಬುರ್ಗಿ ನಗರದ ಜೇವರ್ಗಿ ರಸ್ತೆಯಲ್ಲಿ ಡಾ. ಅಂಬೇಡ್ಕರ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಗಡೀಪಾರು ಮಾಡಬೇಕು ಎಂದು ಗಂಗಾವತಿಯಲ್ಲಿ ದಲಿತ ಪರ ಸಂಘಟನೆ ಮುಖಂಡರು ಒತ್ತಾಯಿಸಿದ್ದಾರೆ.
ಗಂಗಾವತಿ: ಕಲಬುರ್ಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ವಿಶ್ವ ನಾಯಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಸೋಮವಾರ ರಾತ್ರಿ ಸಮಯದಲ್ಲಿ ದುಷ್ಕರ್ಮಿಗಳು ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿದ್ದಾರೆ. ಇಂತಹ ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಜರುಗಿಸಬೇಕು. ಅವರನ್ನು ಗಡಿಪಾರು ಮಾಡಬೇಕು ಎಂದು ದಲಿತ ಪರ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಒತ್ತಾಯಿಸಿದರು.
ಬುಧವಾರ ತಹಸೀಲ್ದಾರರಿಗೆ ಮನವಿ ಅರ್ಪಿಸಿದ ವಕೀಲ ಹುಸೇನಪ್ಪ ಹಂಚಿನಾಳ, ವಿಶ್ವರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದ ಸಮಗ್ರ ಅಭಿವೃದ್ಧಿಗೆ, ಸರ್ವಜನತೆಯ ಸಮಾನತೆಗಾಗಿ ಹೋರಾಟ ಮಾಡಿದ ಮಹಾನಾಯಕ. ಎಲ್ಲ ಜಾತಿ, ಜನಾಂಗದವರಿಗೆ ಸಮಾನವಾಗಿ ಹಕ್ಕು ನೀಡುವ, ಸಂವಿಧಾನದ ಮಹಾಗ್ರಂಥವನ್ನು ನಮ್ಮ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅಂತಹ ಮಹಾನ್ ನಾಯಕನ ಪ್ರತಿಮೆಗೆ ಅಪಮಾನ ಮಾಡಲಾಗಿದೆ. ಭಾರತದ ಸಂವಿಧಾನ ಹಾಗೂ ಸಮಾನತೆ ವಿರೋಧಿಸುವ ಮನೋಭಾವ ಇದರಲ್ಲಿ ಸ್ಪಷ್ಟವಾಗಿದೆ. ಭಾರತವನ್ನು ಕೋಮುವಾದಿ ನೆಲೆಯಲ್ಲಿ ವಿಚ್ಛಿದ್ರಗೈಯುತ್ತಿರುವ, ಸಂವಿಧಾನ ವಿರೋಧಿ ಮನುವಾದಿ ಮನಸುಗಳ ಇಂತಹ ದುಷ್ಕೃತ್ಯ ಪದೇ ಪದೇ ಮರುಕಳಿಸುತ್ತವೆ. ಎರಡು ವಾರದ ಹಿಂದೆ ಗಂಗಾವತಿ ನಗರದ ಕೋರ್ಟ್ ಮುಂಭಾಗದಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮೂರ್ತಿಗೆ ಟೊಮೋಟೊ ಸಾಸ್ ಎರಚಿ ಅವಮಾನ ಮಾಡಲಾಗಿದೆ. ಇಂತಹ ಘಟನೆಗಳು ಪದೇ ಪದೇ ನಮ್ಮ ದೇಶದಲ್ಲಿ ಮರುಕಳಿಸುತ್ತಿವೆ. ಇದಕ್ಕೆ ನಮ್ಮನ್ನು ಆಳುವಂತಹ ಸರ್ಕಾರವೇ ಕಾರಣ ಎಂದು ಅರೋಪಿಸಿದರು.
ಗಂಗಾವತಿಯಲ್ಲಿ ಘಟನೆ ನಡೆದು ಹಲವು ದಿನಗಳಾದರೂ ಇದುವರೆಗೂ ಅವಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಡಿ. ಭೋಜಪ್ಪ, ಹುಲುಗಪ್ಪ ಮಾಗಿ ವಕೀಲರು, ಬಸವರಾಜ ಚಲವಾದಿ, ಹುಲಿಗೇಶ ದೇವರಮನಿ, ಹಂಪೇಶ ಹರಗೋಲು, ಹನುಮಂತ ಮೂಳೆ, ಹೊನ್ನೂರಪ್ಪ ಡಣಾಪುರ, ಯಮನೂರ್ ಭಟ್, ವೀರೇಶ ಆರತಿ ಸೇರಿದಂತೆ ಇತರ ಪ್ರಗತಿಪರ ಹೋರಾಟಗಾರರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.