ಶಿರಹಟ್ಟಿ: ದಲಿತ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಗದಗ ಜಿಮ್ಸ್ ನಿರ್ದೇಶಕ ಬಸವರಾಜ ಬೊಮ್ಮನಹಳ್ಳಿ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಗುರುವಾರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ನ. ೩ರಂದು ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗದಗ ನಗರದ ಜಿಮ್ಸ್ ಪಕ್ಕದಲ್ಲಿರುವ ಆಸ್ಪತ್ರೆ ಉದ್ಘಾಟನೆ ವೇಳೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ನೀಡಿ ಗೌರವಿಸಲು ಆಗಮಿಸಿದ್ದ ದಲಿತ ಸಿಬ್ಬಂದಿಯನ್ನು ಗದಗ ಜಿಮ್ಸ್ ನಿರ್ದೇಶಕ ಬಸವರಾಜ ಬೊಮ್ಮನಹಳ್ಳಿ ನಿಂದಿಸಿ ಆವಾಚ್ಯ ಶಬ್ದಗಳಿಂದ ನಿಂದಿಸಿ, ಗದರಿಸಿ ಹೊರಗೆ ಹೋಗುವಂತೆ ಬೆದರಿಕೆ ಹಾಕಿದ್ದಾರೆ ಎಂದು ಸಂಘಟನೆ ಮುಖಂಡರು ಆರೋಪಿಸಿದರು.
ಈ ವೇಳೆ ದಲಿತ ಮುಖಂಡ ಮುತ್ತುರಾಜ ಭಾವಿಮನಿ ಮಾತನಾಡಿ, ದಲಿತ ಸಮುದಾಯದವರಿಗೆ ಕವಡೆ ಕಾಸಿನ ಬೆಲೆ ನೀಡದ ಜಿಮ್ಸ್ ನಿರ್ದೇಶಕರ ವರ್ತನೆ ಬೇಸರ ತಂದಿದೆ. ಒಬ್ಬ ರಾಜ್ಯದ ಮುಖ್ಯಮಂತ್ರಿಗೆ ದಲಿತ ಸಮುದಾಯದವರಿಂದ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ನೀಡಲು ವಿರೋಧಿಸಿ ಸರ್ವಾಧಿಕಾರ ತೋರಿದ ಅಧಿಕಾರಿಯ ವಿರುದ್ಧ ಜಿಲ್ಲಾಧಿಕಾರಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ತಕ್ಷಣ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದ ಅವರು, ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಬಗ್ಗೆ ಇರುವ ಗೌರವ ಎಂತಹದ್ದು ಎಂಬುದು ಎಲ್ಲರಿಗೂ ತಿಳಿದಿದೆ. ಸಂವಿಧಾನ ಶಿಲ್ಪಿಗೆ ಅಪಚಾರ ಮಾಡುವ ಅಧಿಕಾರಿಗಳಿಂದ ಸಾರ್ವಜನಿಕರು ಏನನ್ನು ನಿರೀಕ್ಷೆ ಮಾಡಲು ಸಾಧ್ಯ? ಇಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಷ್ಟೇ ಅಲ್ಲ, ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಅವರನ್ನು ಕೂಡಲೇ ಸೇವೆಯಿಂದ ವಜಾ ಗೊಳಿಸದಿದ್ದರೆ ಗದಗ ಜಿಲ್ಲಾದ್ಯಂತ ದಲಿತ ಸಮುದಾಯದವರೆಲ್ಲ ಸೇರಿಕೊಂಡು ತಮ್ಮ ಕಚೇರಿಯ ಮುಂದೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ತಹಸೀಲ್ದಾರ್ ಅನಿಲ್ ಬಡಿಗೇರ ಮನವಿ ಸ್ವೀಕರಿಸಿದರು. ದೇವರಾಜ ಸಿಂದೆ, ಕೃಷ್ಣ ಲೋಂಡೆ, ಹೊನ್ನಪ್ಪ ಬಡೆಣ್ಣವರ, ಮಂಜುನಾಥ ಮ್ಯಾಗೇರಿ, ಮರಿಯಪ್ಪ ಸಂಗಮ್ಮನವರ, ಅರುಣಕುಮಾರ ಸಂಗಮ್ಮನವರ, ಲಕ್ಷ್ಮಣ ಸಂದಿಮನಿ, ಹುಲಗಪ್ಪ ಪೂಜಾರ ಮತ್ತಿತರರು ಉಪಸ್ಥಿತರಿದ್ದರು.