ಕನ್ನಡಪ್ರಭ ವಾರ್ತೆ ಸಿರವಾರ
ಪಟ್ಟಣದ ಮುಖ್ಯರಸ್ತೆಯಲ್ಲಿರುವ ಟಿಪ್ಪು ನಾಮಫಲಕಕ್ಕೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ಅಪಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನಾಕಾರರೊಂದಿಗೆ ಶಾಸಕ ಜಿ.ಹಂಪಯ್ಯ ನಾಯಕ ಮತ್ತು ತಹಸೀಲ್ದಾರ್ ರವಿ ಎಸ್.ಅಂಗಡಿ ಮಾತನಾಡಿ ಕಿಡಿಗೇಡಿಗಳನ್ನು 24 ಗಂಟೆಯೊಳಗೆ ಬಂಧಿಸಿ ಕಠಿಣ ಕ್ರಮಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.ಪಟ್ಟಣದ ಮಟನ್ ಮಾರ್ಕೆಟ್ ಹತ್ತಿರವಿರುವ ಟಿಪ್ಪು ಸುಲ್ತಾನ್ ನಾಮಫಲಕಕ್ಕೆ ಕಿಡಿಗೇಡಿಗಳು ಮಂಳವಾರ ರಾತ್ರಿ ಚಪ್ಪಲಿ ಹಾರ ಹಾಕಿದ್ದು, ಬುಧವಾರ ಬೆಳಗ್ಗೆ ನೋಡಿದ ಮುಸ್ಲಿಂ ಸಮುದಾಯದ ನೂರಾರು ಜನ ಏಕಾಏಕಿ ರಸ್ತೆಗಿಳಿದು ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ಸಿಪಿಐ, ಪಿಎಸ್ಐ ರಸ್ತೆ ತಡೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ರಸ್ತೆ ಬಿಡಿ ಎಂದರೂ ಕೇಳದ ಪ್ರತಿಭಟನಾಕಾರರು ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಜಿ.ಹಂಪಯ್ಯ ನಾಯಕ ಮತ್ತು ತಹಸೀಲ್ದಾರ್ ರವಿ ಎಸ್.ಅಂಗಡಿ ಪ್ರತಿಭಟನಾಕಾರರೊಂದಿಗೆ ಮಾತನಾಡಿ, 24 ಗಂಟೆಯೊಳಗೆ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮಕೈಗೊಳ್ಳುವ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.ನಂತರ ಶಾಸಕ ಜಿ.ಹಂಪಯ್ಯ ನಾಯಕ ಮಾತನಾಡಿ, ಪಟ್ಟಣದಲ್ಲಿ ಮೊದಲಿನಿಂದಲೂ ಎಲ್ಲಾ ಸಮಾಜದವರು ಸೌಹಾರ್ದತೆಯಿಂದ ಬೆಳೆದು ಬಂದಿದ್ದು ಯಾರೋ ಕಿಡಿಗೇಡಿಗಳಿಂದ ಇಂತಹ ದುರ್ಘಟನೆ ನಡೆದಿದೆ. ತಕ್ಷಣವೇ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಇಲಾಖೆಗೆ ತಿಳಿಸಲಾಗಿದ್ದು, ಯಾರೂ ಕಾನೂನು ವಿರುದ್ಧ ಹೋಗಬಾರದು ಎಂದು ಸಲಹೆ ನೀಡಿದರು.
ಶಾಸಕರು ಮತ್ತು ತಹಸೀಲ್ದಾರ್ ಟಿಪ್ಪು ಸುಲ್ತಾನ್ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಸಿಪಿಐ ಎಂ.ಶಶಿಕಾಂತ, ಪಿಎಸ್ಐ ಗುರುಚಂದ್ರ ಯಾದವ್ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ.