ಕನ್ನಡಪ್ರಭ ವಾರ್ತೆ ಮಾಗಡಿ
ತಾಲೂಕಿನ ಬೆಳಗುಂಬ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೃತನ ಸಹೋದರಿ ನಂದಿನಿ, ಕಳೆದ ತಿಂಗಳು ತಾಲೂಕಿನ ಸಿಡಿಗನಹಳ್ಳಿಯಲ್ಲಿ ನಡೆದಿದ್ದ ಕಾರು ಅಪಘಾತದಲ್ಲಿ ಬೆಳಗುಂಬ ಗ್ರಾಮದ ರಾಜೇಶ್ (27) ಮೃತ ಪಟ್ಟಿದ್ದರು. ಅಪಘಾತ ನಡೆದ ದಿನ ನಮ್ಮ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದ ರೇವಣ್ಣ, ಗ್ರಾಮದ ಹಿರಿಯರ ಮೂಲಕ ಮಾಗಡಿಯಲ್ಲಿರುವ ತಮ್ಮ ತೋಟದ ಮನೆಗೆ ನಮ್ಮನ್ನು ಕರೆಯಿಸಿಕೊಂಡರು. ಈ ವೇಳೆ ನಿಮ್ಮ ಮಗನಿಗೆ ಸಾಯಲು ನಮ್ಮ ಕಾರೇ ಬೇಕಿತ್ತಾ? ಘಟನೆ ಕುರಿತು ಮಾಧ್ಯಮದ ಮುಂದೆ ಮಾತನಾಡಿ ನಮ್ಮ ಮರ್ಯಾದೆ ಹಾಳು ಮಾಡಿದ್ದೀರಿ ಎಂದು ಧಮ್ಮಿ ಹಾಕಿರುವುದಾಗಿ ಕುಟುಂಬದವರು ದೂರಿದರು.
ಪರಿಹಾರವಾಗಿ ₹2 ಲಕ್ಷ ಕೊಡುವೆ, ತೆಗೆದುಕೊಂಡು ಹೋಗಿ. ಇಲ್ಲವಾದರೆ ಬಿಡಿ. ಹೇಗಿದ್ದರೂ ನಮ್ಮ ಕಾರಿಗೆ ವಿಮೆ ಇದೆ. ಪ್ರಕರಣವನ್ನು ನಾನು ಕೋರ್ಟ್‌ನಲ್ಲಿ ನೋಡಿಕೊಳ್ಳುತ್ತೇನೆ ಎಂದು ಉಡಾಫೆಯಾಗಿ ಹೇಳಿದರು. ತಮ್ಮ ಮಗನಿಂದ ನಮ್ಮ ಕುಟುಂಬದ ಏಕೈಕ ಕುಡಿ ತೀರಿಕೊಂಡಿದ್ದಾನೆ ಎಂಬ ಕನಿಕರವನ್ನು ಸಹ ರೇವಣ್ಣ ತೋರಲಿಲ್ಲ ಎಂದು ನೋವಿನಿಂದ ನುಡಿದರು.ಊರಿನವರ ಎದುರಿಗೇ ವಯಸ್ಸಾದ ತಂದೆ- ತಾಯಿಗೆ ನೋವಾಗುವಂತೆ ಮಾತನಾಡಿದರು. ನಾವೇನೂ ಕೇಳದಿದ್ದರೂ, ಅವರೇ ಪರಿಹಾರ ಕೊಡುತ್ತೇವೆ ಬನ್ನಿ ಎಂದು ಕರೆಯಿಸಿಕೊಂಡು ಅವಮಾನಿಸಿದರು. ಅವರ ಮಾತುಗಳಿಂದ ನಮಗೆ ತುಂಬಾ ನೋವಾಯಿತು. ಅವರ ಹಣ ಮುಟ್ಟದೆ ನಾವು ಮನೆಗೆ ವಾಪಸ್ ಬಂದೆವು'''' ಎಂದು ಹೇಳಿದರು.
ಪ್ರಕರಣದಲ್ಲಿ ಪೊಲೀಸರು ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ. ರಾಜೇಶ್‌ಗೆ ಡಿಕ್ಕಿ ಹೊಡೆದ ಕಾರಿನ ಅಪರಿಚಿತ ಚಾಲಕ ಯಾರೆಂಬುದನ್ನು ಇದುವರೆಗೆ ಪತ್ತೆಹಚ್ಚಿಲ್ಲ. ಬಡವರ ಜೀವಕ್ಕೆ ಬೆಲೆ ಇಲ್ಲವಾಗಿದೆ. ಏಕೈಕ ಪುತ್ರನನ್ನು ಕಳೆದುಕೊಂಡ ನಮ್ಮ ಕುಟುಂಬಕ್ಕೆ ಆಸರೆ ಇಲ್ಲವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಕಾನೂನು ಹೋರಾಟ ನಡೆಸುತ್ತೇವೆ ಎಂದು ರಾಜೇಶ್ ಅಕ್ಕ ನಂದಿನಿ ಹೇಳಿದರು.ಡಿ. 12ರಂದು ರಾತ್ರಿ ರೇವಣ್ಣ ಅವರ ಪುತ್ರ ಆರ್. ಶಶಾಂಕ್ ಅವರ ಕಾರು ತಾಲ್ಲೂಕಿನ ಗುಡೇಮಾರನಹಳ್ಳಿ ಮುಖ್ಯರಸ್ತೆಯ ಸಿಡಿಗನಹಳ್ಳಿ ಬಳಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಸವಾರ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಬಳಿಕ, ಚಾಲಕ ಕಾರು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದ. ಘಟನೆ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ವೇಳೆ ಮೃತರ ತಂದೆ ಗುಡ್ಡೆಗೌಡ, ತಾಯಿ ನಾಗರತ್ನ ಜೊತೆಯಲ್ಲಿ ಇದ್ದರು.