ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಪಾವತಿಸಿರುವ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡುವಲ್ಲಿ ವಿಮಾ ಕಂಪನಿ ವಂಚಿಸಿದೆ. ಕೂಡಲೇ ಬೆಳೆ ನಷ್ಟಕ್ಕೆ ಒಳಗಾಗಿರುವ ಎಲ್ಲಾ ರೈತರಿಗೆ ತಕ್ಷಣವೇ ಬರ ಪರಿಹಾರದ ವಿಮೆ ಹಣ ಪಾವತಿಸುವಂತೆ ತಾಲೂಕು ರೈತಸಂಘ ಒತ್ತಾಯಿಸಿದೆ.ಪಟ್ಟಣದ ರೈತಸಂಘದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡರು, ವಿಮಾ ಕಂಪನಿ ಪರಿಹಾರ ನೀಡಿಕೆಯಲ್ಲಿ ಮಾಡಿರುವ ವಂಚನೆ ಖಂಡಿಸಿದರು.
ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಮಾತನಾಡಿ, ಕಳೆದ ವರ್ಷ ತೀವ್ರ ಬರಗಾಲದಿಂದ ತಾಲೂಕಿನ ರೈತರು ಬೆಳೆ ನಷ್ಟಕ್ಕೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರದ ಬೆಳೆ ವಿಮೆ ನೀತಿಗೆ ಅನುಗುಣವಾಗಿ ರೈತರು ಬೆಳೆ ವಿಮೆ ಮಾಡಿಸಿದ್ದಾರೆ ಎಂದರು.ನಷ್ಟಕ್ಕೆ ಒಳಗಾದ ಎಲ್ಲಾ ರೈತರಿಗೂ ವಿಮೆ ನೀತಿಗೆ ಅನುಗುಣವಾಗಿ ಬೆಳೆ ಪರಿಹಾರ ನೀಡಬೇಕಾದ ಕಂಪನಿ ತಾಲೂಕಿನ ಸಂತೇಬಾಚಹಳ್ಳಿ, ಕಿಕ್ಕೇರಿ ಮತ್ತು ಅಕ್ಕಿಹೆಬ್ಬಾಳು ಹೋಬಳಿಯ ರೈತರಿಗೆ ಮಾತ್ರ ಹಣ ನೀಡಿ ಉಳಿದ ಬೂಕನಕೆರೆ, ಕಸಬಾ ಮತ್ತು ಶೀಳನೆರೆ ಹೋಬಳಿಯ ರೈತರಿಗೆ ಪರಿಹಾರದ ಹಣ ನೀಡದೆ ವಂಚಿಸಿದೆ ಎಂದು ದೂರಿದರು.
ವಿಮಾ ಕಂಪನಿ ವಂಚನೆ ಬಗ್ಗೆ ಇತ್ತೀಚೆಗೆ ಬೂಕನಕೆರೆಯಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ರೈತರು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿ ವಂಚಿತ ರೈತ ಸಮುದಾಯಕ್ಕೆ ಬೆಳೆ ನಷ್ಠ ಪರಿಹಾರ ಕೊಡಿಸುವಂತೆ ಮನವಿ ಮಾಡಿತ್ತು. ಜಿಲ್ಲಾಧಿಕಾರಿಗಳಿಗೆ ರೈತಸಂಘ ದೂರು ನೀಡಿದ ಅನಂತರ ವಿಮಾ ಕಂಪನಿ ಬೂಕನಕೆರೆ ಮತ್ತು ಶೀಳನೆರೆ ಹೋಬಳಿಗಳಲ್ಲಿ ಶೇ.66 ರಷ್ಟು ಹಾಗೂ ಕಸಬಾ ಹೋಬಳಿಯಲ್ಲಿ ಶೇ.60 ರಷ್ಟು ಬೆಳೆ ನಷ್ಠವಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದರು.ಬೆಳೆ ನಷ್ಟ ಪರಿಹಾರಕ್ಕಾಗಿ 9 ಕೋಟಿ ರು. ಬಿಡುಗಡೆ ಮಾಡಿದೆ ಎಂದು ತಿಳಿದು ಬಂದಿದೆ. ಜಿಲ್ಲಾಧಿಕಾರಿಗಳು ತಕ್ಷಣವೇ ತಾಲೂಕಿನ ಬೂಕನಕೆರೆ, ಶೀಳನೆರೆ ಮತ್ತು ಕಸಬಾ ಹೋಬಳಿಯ ರೈತರಿಗೂ ಪರಿಹಾರ ಹಣವನ್ನು ವಿತರಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಕಾಗೇಪುರ ಮಹೇಶ್, ಸಿಂದಘಟ್ಟ ಮುದ್ದುಕುಮಾರ್, ಕರೋಟಿ ತಮ್ಮಯ್ಯ, ನಗರೂರು ಕುಮಾರ್, ವಡಕೆಶೆಟ್ಟಿಹಳ್ಳಿ ನರಸಿಂಹೇಗೌಡ ಇದ್ದರು.