ಭಾರತದ ಸ್ವಾತಂತ್ರ್ಯದಷ್ಟೇ ಕರ್ನಾಟಕದ ಏಕೀಕರಣದ ಪ್ರಾಮುಖ್ಯತೆ: ಶಂಕರ ಗೌಡಿ

KannadaprabhaNewsNetwork |  
Published : Nov 02, 2025, 03:30 AM IST
ಕರ್ನಾಟಕ ರಾಜ್ಯೋತ್ಸವ | Kannada Prabha

ಸಾರಾಂಶ

ಕರ್ನಾಟಕ ಏಕೀಕರಣದಲ್ಲಿ ಸಾಕಷ್ಟು ಜನರ ಶ್ರಮವಿದ್ದು, ಭಾರತದ ಸ್ವಾತಂತ್ರ್ಯ ಹಾಗೂ ಕರ್ನಾಟಕದ ಏಕೀಕರಣ ಇವೆರಡೂ ಅಷ್ಟೇ ಪ್ರಾಮುಖ್ಯತೆ ಪಡೆದಿವೆ ಎಂದು ತಹಸೀಲ್ದಾರ್ ಶಂಕರ ಗೌಡಿ ಹೇಳಿದರು.

ಮುಂಡಗೋಡ: ಕರ್ನಾಟಕ ಏಕಿಕರಣದಲ್ಲಿ ಸಾಕಷ್ಟು ಜನರ ಶ್ರಮವಿದ್ದು, ಭಾರತದ ಸ್ವಾತಂತ್ರ್ಯ ಹಾಗೂ ಕರ್ನಾಟಕದ ಏಕೀಕರಣ ಇವೆರಡೂ ಅಷ್ಟೇ ಪ್ರಾಮುಖ್ಯತೆ ಪಡೆದಿವೆ ಎಂದು ತಹಸೀಲ್ದಾರ್ ಶಂಕರ ಗೌಡಿ ಹೇಳಿದರು.

ಶನಿವಾರ ಇಲ್ಲಿಯ ತಾಲೂಕು ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.ಹಲವು ಹೋರಾಟಗಾರರು, ಕವಿಗಳು ಮತ್ತು ಸಾಹಿತಿಗಳ ಅಪಾರ ಕೊಡುಗೆ ನೀಡಿದ್ದಾರೆ. ನಿರಂತರ ಹೋರಾಟ, ಚಳುವಳಿ, ಒತ್ತಾಯ, ಸಭೆ ಸಮ್ಮೇಳನಗಳು ಇವೆಲ್ಲದರ ಫಲವಾಗಿ ಭಾಷಾವಾರು ಆಧಾರದ ಮೇಲೆ ಕರ್ನಾಟಕ ಹೆಸರು ಪಡೆದಿದೆ. ಕರ್ನಾಟಕ ರಾಜ್ಯ ೭೦ ವರ್ಷದಲ್ಲಿ ದೇಶಕ್ಕಾಗಿ ಮಾಹಿತಿ ತಂತ್ರಜ್ಞಾನ, ಕೃಷಿ ಕೈಗಾರಿಕೆ, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಕ್ರೀಡೆ, ಆರ್ಥಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ನಮ್ಮ ಬೆಂಗಳೂರು ಜಗತ್ತಿನ ಜಾಗತಿಕ ಪ್ರಮುಖ ತಾಣದಲ್ಲೊಂದಾಗಿದೆ. ತೆರಿಗೆ ಸಂಗ್ರಹದಲ್ಲಿ ಕೂಡ ಕರ್ನಾಟಕ ಅಗ್ರ ಸ್ಥಾನದಲ್ಲಿದೆ ಎಂದರು.

೨೦೦೦ಕ್ಕೂ ಹೆಚ್ಚು ವರ್ಷಗಳ ಶ್ರೀಮಂತ ಇತಿಹಾಸ ಹೊಂದಿರುವ ಶಾಸ್ತ್ರೀಯ ಭಾಷೆ ನಮ್ಮದಾಗಿದೆ. ಕನ್ನಡದ ಬಗ್ಗೆ ಅಭಿಮಾನ ಮತ್ತು ಗೌರವವನ್ನು ಹೊಂದಿರಬೇಕು. ಕನ್ನಡ ನಾಡನ್ನು ಭುವನೇಶ್ವರಿ ತಾಯಿ ಎಂದು ಆರಾಧಿಸುತ್ತೇವೆ. ಭಾಷೆಯನ್ನು ಮಾತನಾಡಲು, ವ್ಯವಹರಿಸಲು ಹಾಗೂ ಜ್ಞಾನ ಪಡೆಯಲು ಉಪಯೋಗಿಸುತ್ತೇವೆ. ಯಾವುದೇ ಒಂದು ಭಾಷೆ ಎಷ್ಟು ಜನೋಪಯೋಗಿಯಾಗಿದೆ ಎಂಬುವುದರ ಆಧಾರದ ಮೇಲೆ ನಿಂತಿರುತ್ತದೆ. ನಾವು ಹಲವು ಭಾಷೆಗಳ ಪಾಂಡಿತ್ಯ ಹೊಂದಬಹುದು. ಆದರೆ, ಆಡುವ ಭಾಷೆ ಒಂದೇ ಅದು ಕನ್ನಡವಾಗಿರಬೇಕು ಎಂದು ಕರೆ ನೀಡಿದರು.

ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಪಪಂ ಸದಸ್ಯ ಅಶೋಕ ಚಲವಾದಿ ಮಾತನಾಡಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ, ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸುಭಾಸ ಡೋರಿ, ಮುಂಡಗೋಡ ಆರಕ್ಷಕ ವೃತ್ತ ನಿರೀಕ್ಷಕ ರಂಗನಾಥ ನೀಲಮ್ಮನವರ, ಪಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಪಪಂ ಮುಖ್ಯಾಧಿಕಾರಿ ಸಂತೋಷಕುಮಾರ ಹಾಲಕಲ್ಲಾಪುರ, ಸದಸ್ಯ ಶ್ರೀಕಾಂತ ಸಾನು, ಗೌಸ್ ಮಕಾಂದಾರ, ರಜಾ ಪಠಾಣ, ಚಂದ್ರಶೇಖರ ಕರಿಗಾರ, ಮಂಜುನಾಥ ಪಾಟೀಲ, ನಾಗರಾಜ ಹಂಚಿನಮನಿ ಮುಂತಾದವರು ಉಪಸ್ಥಿತರಿದ್ದರು.

ಬಿಇಒ ಸುಮಾ ಸ್ವಾಗತಿಸಿದರು. ಕೆ.ಕೆ. ಕರುವಿನಕೊಪ್ಪ ಹಾಗೂ ಅಶೋಕ ಶಂಕ್ರಿಕೊಪ್ಪ ನಿರೂಪಿಸಿದರು. ಸಮನ್ವಯಾಧಿಕಾರಿ ರಮೇಶ ಅಂಬಿಗೇರ ವಂದಿಸಿದರು.

ಇದೇ ಸಂದರ್ಭದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಟಿಬೇಟಿಯನ್ ವಿದ್ಯಾರ್ಥಿಗಳು ಕೂಡ ಕರ್ನಾಟಕ ರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಹೊರಟು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿತು. ಮೆರವಣಿಗೆಯಲ್ಲಿ ತಾಲೂಕಿನ ಚಿಗಳ್ಳಿ ಹುಲಿಗೆಮ್ಮ ಗ್ರಾಮಾಭಿವೃದ್ಧಿ ಶಿಕ್ಷಣ ಸಂಸ್ಥೆ ವತಿಯಿಂದ 500 ಮೀಟರ್ ಉದ್ದದ ಕನ್ನಡ ಬಾವುಟ ಪ್ರದರ್ಶಿಸಲಾಯಿತು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ