ಲಕ್ಷ್ಮೇಶ್ವರ: ಕನ್ನಡ ನಾಡಿನ ಭವ್ಯ ಇತಿಹಾಸ ನಮ್ಮ ಪರಂಪರೆಯ ಪ್ರತೀಕವಾಗಿದೆ. ಕನ್ನಡ ನಾಡು, ನುಡಿಗಾಗಿ ಶ್ರಮಿಸಿದ ಮಹನೀಯರನ್ನು ಸ್ಮರಣೆ ಮಾಡುವುದು ಅಗತ್ಯವಾಗಿದೆ ಎಂದು ಲಕ್ಷ್ಮೇಶ್ವರ ನೂತನ ತಹಸೀಲ್ದಾರ್ ಸಂತೋಷ ಹಿರೇಮಠ ಹೇಳಿದರು.
ಪಟ್ಟಣದ ಉಮಾ ವಿದ್ಯಾಲಯದ ಕ್ರೀಡಾಂಗಣದಲ್ಲಿ ಶನಿವಾರ ನಡೆದ 70ನೇ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.ಕನ್ನಡ ನಾಡು, ನುಡಿಗೆ ಸಾವಿರಾರು ವರ್ಷಗಳ ಭವ್ಯ ಇತಿಹಾಸವಿದೆ. ಕನ್ನಡಕ್ಕಿರುವ ಅಗಾಧ ಶಕ್ತಿ ಮತ್ತೊಂದು ಭಾಷೆಯಲ್ಲಿ ಕಾಣಲು ಸಾಧ್ಯವಿಲ್ಲ. ಕನ್ನಡ ಎಂಬುದು ಬರೀ ಭಾಷೆಯಲ್ಲ, ಅದು ಈ ನೆಲದ ಸಂಸ್ಕೃತಿ, ಸಂಸ್ಕಾರ, ಪರಂಪರೆ ಸಾರುವ ಶಕ್ತಿಯಾಗಿದೆ. ಪ್ರತಿಯೊಬ್ಬ ಕನ್ನಡಿಗರಲ್ಲೂ ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಭಿಮಾನ, ಸ್ವಾಭಿಮಾನ ಬೆಳೆದುಬರಬೇಕು. ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಕನ್ನಡದ ಬಗ್ಗೆ ಗೌರವಾಭಿಮಾನ ಮೂಡಿಸುವಲ್ಲಿ ಪಾಲಕ, ಶಿಕ್ಷಕ ಮತ್ತು ಕನ್ನಡ ಸಂಘಟನೆಗಳ ಜವಾಬ್ದಾರಿ ಹೆಚ್ಚಿದೆ. ಕನ್ನಡ ಯುವ ಜನತೆ ನಾಡನ್ನು ಕಾಪಾಡಲು ಇಂದಿನಿಂದಲೇ ಪಣ ತೊಡಬೇಕು. ಕನ್ನಡ ನಮ್ಮ ಉಸಿರಾಗಬೇಕು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಸಾಹಿತಿ ಈಶ್ವರ ಮೆಡ್ಲೇರಿ ಉಪನ್ಯಾಸ ನೀಡಿ, ಎರಡೂವರೆ ಸಾವಿರ ವರ್ಷಗಳ ಭವ್ಯ ಇತಿಹಾಸದ ಕನ್ನಡ ಭಾಷೆಗೆ ಸಮನಾದ ಭಾಷೆ ಮತ್ತೊಂದಿಲ್ಲ. ಭಾರತ ಮಾತೆಯ ಮುಕುಟಮಣಿಯಾಗಿ ಕರ್ನಾಟಕದ ಕೀರ್ತಿ ಎಂದೆಂದಿಗೂ ರಾರಾಜಿಸುತ್ತದೆ. ಕನ್ನಡ ಸಾಹಿತ್ಯಕ್ಕೆ ಲಕ್ಷ್ಮೇಶ್ವರ ತಾಲೂಕಿನ ಕೊಡುಗೆ ಅಪಾರವಾಗಿದ್ದು, ಇಲ್ಲಿನ ಪ್ರತಿ ಸ್ಥಳವೂ ಒಂದೊಂದು ಇತಿಹಾಸವನ್ನು ಸಾರುತ್ತಿವೆ ಎಂದರು.ಇದೇ ಸಂದರ್ಭದಲ್ಲಿ ಸಾಧಕರನ್ನು ತಾಲೂಕಾಡಳಿತದ ವತಿಯಿಂದ ಸನ್ಮಾನಿಸಲಾಯಿತು. ಇತ್ತೀಚೆಗೆ ರಾಜ್ಯಮಟ್ಟದ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಲಲಿತಕ್ಕ ಕೆರಿಮನಿ ಮತ್ತು ಕೆಯುಡಬ್ಲ್ಯೂಜೆಯಿಂದ ನೀಡಲಾಗುವ ರಾಜ್ಯಮಟ್ಟದ ಅತ್ಯುತ್ತಮ ಗ್ರಾಮಾಂತರ ವರದಿಗೆ ನೀಡುವ ಜಿ. ನಾರಾಯಣಸ್ವಾಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ದಿಗಂಬರ ಪೂಜಾರ ಅವರನ್ನು ಸನ್ಮಾನಿಸಿದರು.
ತಾಪಂ ಇಒ ಕೃಷ್ಣಪ್ಪ ಧರ್ಮರ, ಪುರಸಭೆ ಸದಸ್ಯ ರಾಜಣ್ಣ ಕುಂಬಿ, ಪ್ರಕಾಶ ಕೊಂಚಿಗೇರಿಮಠ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ, ರಾಮಣ್ಣ ಲಮಾಣಿ, ರಫೀಕ್ ಕಲಬುರ್ಗಿ, ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಪಿಎಸ್‌ಐ ನಾಗರಾಜ ಗಡಾದ, ಹೆಸ್ಕಾಂ ಎಇಇ ಆಂಜನಪ್ಪ, ಎಸ್.ಕೆ. ಜಲರಡ್ಡಿ, ಚಂದ್ರಶೇಖರ ನರಸಮ್ಮನವರ, ಗ್ರೇಡ್-೨ ತಹಸೀಲ್ದಾರ್ ಮಂಜುನಾಥ ಅಮಾಸಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ, ಕಂದಾಯ ಅಧಿಕಾರಿ ಎಂ.ಎ. ನಧಾಪ್, ಶಿರಸ್ತೇದಾರ್ ಜಮೀರ್ ಮನಿಯಾರ ಇದ್ದರು. ಶಿಕ್ಷಕ ಉಮೇಶ ನೇಕಾರ, ಸತೀಶ ಬೋಮಲೆ, ರಾಘವೇಂದ್ರ ಜೋಶಿ, ಎನ್.ಎ. ಮುಲ್ಲಾ ಕಾರ್ಯಕ್ರಮ ನಿರ್ವಹಿಸಿದರು.ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ವೇಷಭೂಷಣ ಸ್ಪರ್ಧೆಗಳು ನಡೆದವು. ಕನ್ನಡ ನಾಡು ನುಡಿಯ ಇತಿಹಾಸ ಸಾರುವ ಹಾಗೂ ಕನ್ನಡ ನಾಡಿನ ಮಹತ್ವ ತಿಳಿಸುವ ಗೀತೆಗಳಿಗೆ ಮಕ್ಕಳು ನೃತ್ಯ ರೂಪಕ ಪ್ರಸ್ತುತಪಡಿಸಿದರು.