ರಾಘವೇಂದ್ರ ಹೆಬ್ಬಾರ್
ಭಟ್ಕಳ: ಮಳೆಗಾಲ ಇನ್ನೂ ಮುಗಿಯಲಿಲ್ಲ. ಮಳೆಯಿಂದ ಹಾಳಾದ ರಸ್ತೆಗಳ ರಿಪೇರಿ ಮಾಡದೇ ಇರುವುದರಿಂದ ಜನ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ.ಈ ಬಾರಿ ತಾಲೂಕಿನಲ್ಲಿ ಭಾರೀ ಮಳೆ ಸುರಿದಿದ್ದು, ಮಳೆಗಾಲದ ಪೂರ್ವದಲ್ಲಿ ಪಟ್ಟಣ ಮತ್ತು ಗ್ರಾಮಾಂತರ ಭಾಗದಲ್ಲಿ ಸಮರ್ಪಕವಾಗಿ ಗಟಾರ ಸ್ವಚ್ಛತೆ ಮಾಡದಿರುವುದರಿಂದಲೇ ಮಳೆ ನೀರು ರಸ್ತೆಯ ಮೇಲೆ ಹರಿದು ಡಾಂಬರ್ ಕೊಚ್ಚಿ ಹೋಗಿ ಹೊಂಡ ಬಿದ್ದಿವೆ. ಗ್ರಾಮಾಂತರ ಭಾಗದಲ್ಲಿ ಬಹುತೇಕ ಓಡಾಡದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಮಳೆಗಾಲ ಮುಗಿದರೂ ಸಂಬಂಧಿಸಿದ ಇಲಾಖೆ ದುರಸ್ತಿ ಕಾರ್ಯ ಆರಂಭಿಸಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕು ಪಂಚಾಯಿತಿಯಲ್ಲಿ ಕರೆದ ತ್ರೈಮಾಸಿ ಕೆಡಿಪಿ ಸಭೆಯಲ್ಲಿ ಹೊಂಡ ಬಿದ್ದ ರಸ್ತೆಗಳನ್ನು ಮಳೆ ನಿಂತ ಬಳಿಕ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಮಳೆ ನಿಂತರೂ ಇನ್ನೂ ಎಲ್ಲಿಯೂ ದುರಸ್ತಿ ಕಾಮಗಾರಿ ಆರಂಭಿಸಿರುವುದು ಕಂಡು ಬಂದಿಲ್ಲ.ರಸ್ತೆಯ ಅವ್ಯವಸ್ಥೆಯಿಂದ ಎಲ್ಲೆಲ್ಲೂ ಅಪಘಾತ ಹೆಚ್ಚುತ್ತಿದೆ. ಗ್ರಾಮಾಂತರ ಭಾಗದಿಂದ ೧೦-೧೫ ನಿಮಿಷದಲ್ಲಿ ಪಟ್ಟಣಕ್ಕೆ ಬರುತ್ತಿದ್ದವರು ಅರ್ಧ ತಾಸಾದರೂ ತಲುಪಲು ಆಗುತ್ತಿಲ್ಲ. ಗ್ರಾಮಾಂತರ ಭಾಗದಲ್ಲಿ ಹೊಂಡಗಳಿಂದ ದ್ವಿಚಕ್ರ ಸವಾರರು ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ. ಪಾದಾಚಾರಿಗಳಿಗೂ ತೊಂದರೆ ಉಂಟಾಗಿದೆ. ಮುರುಡೇಶ್ವರ ಅಂಚೆ ಕಚೇರಿಗೆ ಹೋಗುವ ನವಾಯತ್ ಕೇರಿ ರಸ್ತೆ ತೀರಾ ಹಾಳಾಗಿದೆ. ಭಟ್ಕಳ ಸರಕಾರಿ ಆಸ್ಪತ್ರೆ ಮಾರ್ಗದಲ್ಲಂತೂ ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಹೆಬಳೆ-ತೆಂಗಿನಗುಂಡಿ ರಸ್ತೆಗೆ ಸ್ವಲ್ಪ ಪ್ರಮಾಣದಲ್ಲಿ ಡಾಂಬರೀಕರಣ ಮಾಡಿದ್ದರೂ ಉಳಿದೆಡೆ ಕಾಮಗಾರಿ ಮಾಡುವವರು ಯಾರು ಎಂದು ಜನರು ಪ್ರಶ್ನಿಸುವಂತಾಗಿದೆ.
ಪಟ್ಟಣದ ಮುಗ್ದಂ ಕಾಲೋನಿಯಿಂದ ಸಾಗರ ರಸ್ತೆಗೆ ₹25 ಕೋಟಿ ವೆಚ್ಚದಲ್ಲಿ ಕಾಂಕ್ರೀಟಿಕರಣ ಕಾಮಗಾರಿ ನಡೆಯುತ್ತಿದ್ದರೂ ವಿಳಂಬವಾಗಿದೆ. ಇದರಿಂದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕಾಮಗಾರಿ ಬಗ್ಗೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಂದಿನ ಮಳೆಗಾಲ ಆರಂಭದ ಪೂರ್ವದಲ್ಲೇ ಗ್ರಾಮಾಂತರ ಮತ್ತು ಪಟ್ಟಣದಲ್ಲಿ ಗಟಾರ ಸ್ವಚ್ಛತಾ ಕಾರ್ಯ ಆರಂಭಿಸುವಂತಾಗಬೇಕು. ಪ್ರತಿ ವರ್ಷ ಗಟಾರ ಸ್ವಚ್ಛ ಮಾಡಿದರೆ ಮಳೆ ನೀರು ರಸ್ತೆ ಮೇಲೆ ಹರಿಯುವುದು ತಪ್ಪಿ ಹಾಳಾಗುವ ಸಮಸ್ಯೆ ಉದ್ಭವಿಸುವುದಿಲ್ಲ. ಮಳೆ ವಿರಾಮ ನೀಡಿರುವುದರಿಂದ ಸಂಬಂಧಪಟ್ಟ ಇಲಾಖೆ ಹೊಂಡ ಮುಚ್ಚುವ ಕಾಮಗಾರಿ ಆದಷ್ಟು ಬೇಗ ಆರಂಭಿಸಿ ಜನ ಹಾಗೂ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.ಗಂಭೀರವಾಗಿ ಪರಿಗಣಿಸಲಿಮಳೆಗಾಲ ಮುಗಿಯುತ್ತಾ ಬಂದಿರುವುದರಿಂದ ಭಟ್ಕಳದಲ್ಲಿ ಹೊಂಡ ಬಿದ್ದಿರುವ ರಸ್ತೆಗಳ ರಿಪೇರಿ ಅಥವಾ ಮರು ಡಾಂಬರೀಕರಣಕ್ಕೆ ಶೀಘ್ರವೇ ಮುಂದಾಗಬೇಕು. ಜನರು ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಸಮಸ್ಯೆಯನ್ನು ಸಂಬಂಧಿಸಿದ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಮುರುಡೇಶ್ಬರ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಎಸ್.ಎಸ್. ಕಾಮತ್ ಆಗ್ರಹಿಸಿದ್ದಾರೆ.