ಶಿರಹಟ್ಟಿ: ನಮ್ಮ ಕನ್ನಡ ನಾಡು- ನುಡಿ ಸಾವಿರಾರು ವರ್ಷಗಳ ದೀರ್ಘ ಇತಿಹಾಸ ಮತ್ತು ಪರಂಪರೆಯನ್ನು ಒಳಗೊಂಡು ಶ್ರೀಮಂತವಾಗಿದೆ. ಇಂತಹ ಭಾಷೆಯನ್ನು ಉಳಿಸಿ ಬೆಳೆಸುವ ಕರ್ತವ್ಯ ಪ್ರತಿಯೊಬ್ಬ ಕನ್ನಡಿಗರದ್ದಾಗಬೇಕು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು.
ವಿಶ್ವಮಾನ್ಯವಾಗಿರುವ ಕನ್ನಡ ನಾಡು, ನುಡಿ, ಸಂಸ್ಕೃತಿ, ನೆಲ, ಜಲ, ಭಾಷೆಯನ್ನು ಪೋಷಿಸಿ, ಅಭಿವೃದ್ಧಿಪಡಿಸುವ ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಕಂಕಣಬದ್ಧರಾಗೋಣ. ಸಾಹಿತ್ಯದ ಜತೆಗೆ ಇತರ ಭಾಷೆಯನ್ನು ಗೌರವಿಸೋಣ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಎಲ್ಲರೂ ಶ್ರಮಿಸೋಣ. ಕನ್ನಡದ ಕಹಳೆ ಎಲ್ಲೆಡೆ ಮೊಳಗಬೇಕು. ಕನ್ನಡ ನಾಡು, ನುಡಿಗಾಗಿ ಶ್ರಮಿಸಿದ ಎಲ್ಲ ಮಹನೀಯರ ಕೊಡುಗೆ ಸ್ಮರಿಸೋಣ. ಜತೆಗೆ ಕನ್ನಡ ಕಟ್ಟುವ ಕೆಲಸವನ್ನು ಯುವ ಮನಸ್ಸುಗಳು ಮಾಡಬೇಕು ಎಂದು ಹೇಳಿದರು.
ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಮಾತನಾಡಿ, ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಎಂಬ ಕಾನೂನನ್ನು ಸರ್ಕಾರ ಕಡ್ಡಾಯಗೊಳಿಸಬೇಕಾಗಿದೆ. ಶಿಕ್ಷಕರು ಹಾಗೂ ಇಲಾಖೆಯು ತಾಯ್ನಾಡಿನ ಬಗ್ಗೆ ಹೆಮ್ಮೆ ಮೂಡಿಸಲು ಸದಾ ಪ್ರಯತ್ನಿಸಬೇಕು. ಆಗ ಮಾತ್ರ ಸ್ವಾಭಿಮಾನ ಸಹಜವಾಗಿ ಮೂಡುತ್ತದೆ ಎಂದರು.ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಫಕ್ಕಿರೇಶ ರಟ್ಟಿಹಳ್ಳಿ, ಬಸವರಾಜ ವಡವಿ, ಶಶಿ ಪೂಜಾರ, ಸಂತೋಷ ತೋಡೇಕಾರ, ಹಸನ ತಹಸೀಲ್ದಾರ, ತಾಪಂ ಇಒ ರಾಮಪ್ಪ ದೊಡ್ಡಮನಿ, ಬಿಇಒ ಎಚ್. ನಾಣಕೀ ನಾಯಕ, ಪಿಎಸ್‌ಐ ಈರಪ್ಪ ರಿತ್ತಿ, ಕೃಷಿ ಇಲಾಖೆಯ ರೇವಣೆಪ್ಪ ಮನಗೂಳಿ, ರಾಮಪ್ಪ ಪೂಜಾರ, ರಂಗಪ್ಪ ಕಾಂಬ್ಳೆ, ಸಂತೋಷ ಅಸ್ಕಿ ಇದ್ದರು.