ಯಲ್ಲಾಪುರ: ನಾನು ಯಲ್ಲಾಪುರದ ಬಳಗಾರಿನಂತಹ ಸಣ್ಣ ಹಳ್ಳಿಯಿಂದ ಬಂದು ಇಂದು ದೇಶಮಟ್ಟದಲ್ಲಿ ಗುರುತಿಸಿಕೊಳ್ಳು ಶ್ರೀಮಠದ ಗುರುಗಳ, ತಂದೆ-ತಾಯಿಯರ ಆಶೀರ್ವಾದದ ಫಲ ಎಂದು ಭಾವಿಸಿದ್ದೇನೆ. ಕೇವಲ ₹೫೦೦ ಸಂಬಳಕ್ಕೆ ಉದ್ಯೋಗಕ್ಕೆ ಸೇರಿದ ನಾನು, ಇಂದು ದೊಡ್ಡ ಕಂಪೆನಿಯನ್ನು ಸ್ಥಾಪಿಸಿ ೫೦೦ ಜನರಿಗೆ ಉದ್ಯೋಗ ಕಲ್ಪಿಸಿದ್ದೇನೆ ಎನ್ನುವ ತೃಪ್ತಿ ನನಗಿದೆ ಎಂದು ಬೆಂಗಳೂರಿನ ರಿಪೋಸ್ ಮ್ಯಾಟ್ರಸ್ ಸಂಸ್ಥೆಯ ಎಂ.ಡಿ. ರಾಮನಾಥ ಭಟ್ಟ ಹೇಳಿದರು.
ಸಂಕಲ್ಪ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಸ್ವರ್ಣವಲ್ಲೀ ಶ್ರೀಗಳಿಂದ ಈ ವರ್ಷದ ಸಂಕಲ್ಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.ಉದ್ಯಮ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರದ ಹಲವು ಪ್ರಶಸ್ತಿಗಳು ಲಭಿಸಿವೆ. ಅದೆಲ್ಲದಕ್ಕೂ ಪೂಜ್ಯರ ಅಮೃತಹಸ್ತದಿಂದ ಅದರಲ್ಲೂ ನನ್ನ ನೆಲದಲ್ಲೇ ನನಗೆ ಈ ಪ್ರಶಸ್ತಿ, ಸನ್ಮಾನ ಪಡೆದಿರುವುದು ಬೆಲೆ ಕಟ್ಟಲಾಗದ ಭಾಗ್ಯ ಎಂಬ ಸಂತೋಷ ನನಗೆ ಲಭಿಸಿದೆ. ಬೇರೆ ಯಾರೇ ಗೌರವಕ್ಕಿಂತ ನಮ್ಮ ಊರಿನಲ್ಲಿ ಸಿಕ್ಕ ಗೌರವ ಬಹಳ ಸಂತೋಷ ನೀಡುತ್ತದೆ. ಅಂತಹ ಸಂತೋಷದ ಕ್ಷಣದಲ್ಲಿ ನಾನಿಂದು ಇದ್ದೇನೆ ಎಂದರು.
ಈ ಸಂದರ್ಭದ ಸಾಮಾಜಿಕ ಧುರೀಣರಾದ ವೆಂಕಟೇಶ ಹೆಗಡೆ ಹೊಸಬಾಳೆ, ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಮುರಳಿ ಹೆಗಡೆ, ಶಂಕರ ಭಟ್ಟ ತಾರೀಮಕ್ಕಿ, ಸುಬ್ರಹ್ಮಣ್ಯ ಹೆಗಡೆ, ವನರಾಗ ಶರ್ಮ, ಬೀರಣ್ಣ ನಾಯಕ ಮೊಗಟಾ ಮತ್ತಿತರರು ಉಪಸ್ಥಿತರಿದ್ದರು.ಯಕ್ಷ ಸಂಘಟಕ ಸಿ.ಜಿ. ಹೆಗಡೆ ಸ್ವಾಗತಿಸಿದರು. ಪ್ರಸಾದ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಚಂದ್ರಕಲಾ ಭಟ್ಟ ಸನ್ಮಾನ ಪತ್ರ ವಾಚಿಸಿದರು. ಬಾಬು ಬಾಂದೆಕರ ವಂದಿಸಿದರು. ವನರಾಗ ಶರ್ಮರ ಕೃತಿ ಬಿಡುಗಡೆ
ಯಲ್ಲಾಪುರ: ನಾಡಿನ ಶ್ರೇಷ್ಠ ಬರೆಹಗಾರರಲ್ಲಿ ಒಬ್ಬರಾದ ವನರಾಗ ಶರ್ಮ ಬರೆದ "ಚಿನ್ನ ನನ್ನ ಮುದ್ದು ಚಿನ್ನ " ಕೃತಿ ಅತ್ಯಂತ ಪ್ರಬುದ್ಧತೆಯಿಂದ ಮೂಡಿಬಂದಿದೆ. ಇದು ಇಂದಿನ ಮ್ಕಕಳಿಗೆ ಮತ್ತು ಯುವಕರಿಗೆ ಸ್ಫೂರ್ತಿದಾಯಕವಾಗಿದೆ. ಇಂತಹ ಪುಸ್ತಕಗಳನ್ನು ಮಕ್ಕಳು ಓದುವುದರಿಂದ ಪ್ರೇರಣೆ ಲಭಿಸುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಮದ್ ಗಂಗಾಧರೆಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.ಪಟ್ಟಣದಲ್ಲಿ ಶುಕ್ರವಾರ ಸಂಕಲ್ಪ ಉತ್ಸವದ ಉದ್ಘಾಟನೆಯ ಸಂದರ್ಭದಲ್ಲಿ "ಚಿನ್ನ ನನ್ನ ಮುದ್ದು ಚಿನ್ನ " ಕೃತಿ ಲೋಕಾರ್ಪಣೆಗೊಳಿಸಿ, ಆಶೀರ್ವಚನ ನೀಡಿದರು.
ಶರ್ಮ ಅವರು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಅವರ ಬರಹಗಳು ಉತ್ತಮವಾಗಿರುತ್ತವೆ. ಜನಸಾಮಾನ್ಯರು ಅದನ್ನು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಒಳ್ಳೆಯ ನೀತಿಕಥೆಗಳನ್ನು ಈ ಗ್ರಂಥದಲ್ಲಿ ಬರೆದಿದ್ದಾರೆ ಎಂದರು.ಕೇರಳದ ಎಡನೀರು ಮಠದ ಮಠಾಧೀಶರಾದ ಶ್ರೀಮದ್ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ಮಾತನಾಡಿ, ಈ ಪುಸ್ತಕವನ್ನು ಗಮನಿಸಿದ್ದೇವೆ. ಇದು ಯುವಜನಾಂಗಕ್ಕೆ ಉತ್ತಮ ಸಂದೇಶವನ್ನು ನೀಡುತ್ತದೆ. ಯುವಕರು ಈ ಗ್ರಂಥವನ್ನು ಅಧ್ಯಯನ ಮಾಡಬೇಕು. ಅದರಿಂದ ಉತ್ತಮ ಸಂಸ್ಕಾರ ಲಭಿಸುತ್ತದೆ ಎಂದರು.ಈ ಸಂದರ್ಭದಲ್ಲಿ ಬೆಂಗಳೂರಿನ ಖ್ಯಾತ ಉದ್ಯಮಿ ರಾಮನಾಥ ಭಟ್ಟ ಅಡಿಕೆಪಾಲ, ಸಾಮಾಜಿಕ ಧುರೀಣರಾದ ವೆಂಕಟೇಶ ಹೆಗಡೆ ಹೊಸಬಾಳೆ, ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಮುರಳಿ ಹೆಗಡೆ, ಶಂಕರ ಭಟ್ಟ ತಾರೀಮಕ್ಕಿ, ಸುಬ್ರಹ್ಮಣ್ಯ ಹೆಗಡೆ, ವನರಾಗ ಶರ್ಮ, ಬೀರಣ್ಣ ನಾಯಕ ಮೊಗಟಾ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷ ಸಂಘಟಕ ಸಿ.ಜಿ. ಹೆಗಡೆ ಸ್ವಾಗತಿಸಿದರು. ಪ್ರಸಾದ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಚಂದ್ರಕಲಾ ಭಟ್ಟ ನಿರ್ವಹಿಸಿದರು. ಬಾಬು ಬಾಂದೆಕರ ವಂದಿಸಿದರು.