ಸೆಪ್ಟೆಂಬರ್ 8ರೊಳಗೆ ಬರಗಾಲ ಘೋಷಣೆ ಮಾಡದಿದ್ದರೆ ಉಗ್ರ ಹೋರಾಟ: ಮುನೇನಕೊಪ್ಪ

KannadaprabhaNewsNetwork |  
Published : Aug 31, 2026, 02:15 AM IST
ಶಂಕರ ಪಾಟೀಲ ಮುನೇನಕೊಪ್ಪ. | Kannada Prabha

ಸಾರಾಂಶ

ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ರಾಜ್ಯ ಸರ್ಕಾರ ಮಾತ್ರ ರೈತರ ಸಂಕಷ್ಟಕ್ಕೆ ಸ್ಪಂದಿಸದೆ ಕಣ್ಣು ಮುಚ್ಚಿ ಕುಳಿತಿದೆ.

ಹುಬ್ಬಳ್ಳಿ: ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳನ್ನು ತಕ್ಷಣವೇ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು. ಸೆ. 8ರೊಳಗೆ ಸರ್ಕಾರ ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ರೈತ ಸಮುದಾಯವನ್ನು ಒಗ್ಗೂಡಿಸಿಕೊಂಡು ಸರ್ಕಾರದ ವಿರುದ್ಧ ಬೃಹತ್ ಹಾಗೂ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿ, ಸತತ ಮಳೆ ಕೊರತೆ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಬೆಳೆದ ಹೆಸರು, ಉದ್ದು, ಹತ್ತಿ, ಗೋವಿನಜೋಳ, ಸೋಯಾಬಿನ್, ಕಬ್ಬು, ಮೆಣಸಿನಕಾಯಿ, ಈರುಳ್ಳಿ, ಶೇಂಗಾ ಹಾಗೂ ಪೇರಲ ಸೇರಿದಂತೆ ಹಲವು ಬೆಳೆಗಳು ಸಂಪೂರ್ಣ ಹಾನಿಗೀಡಾಗಿವೆ. ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ರಾಜ್ಯ ಸರ್ಕಾರ ಮಾತ್ರ ರೈತರ ಸಂಕಷ್ಟಕ್ಕೆ ಸ್ಪಂದಿಸದೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರು ಸಾಲ ಮಾಡಿ, ಬಡ್ಡಿಗೆ ಹಣ ತಂದು ಕೃಷಿ ಮಾಡಿದ್ದಾರೆ. ಬೀಜ, ಗೊಬ್ಬರ, ಔಷಧಿ ಸೇರಿದಂತೆ ಕೃಷಿ ವೆಚ್ಚಕ್ಕಾಗಿ ಸಾವಿರಾರು ರುಪಾಯಿ ಹೂಡಿಕೆ ಮಾಡಿದ್ದಾರೆ. ಆದರೆ ಬೆಳೆ ಕೈಗೆ ಬರುವ ಮುನ್ನವೇ ನಾಶವಾಗಿದ್ದು, ರೈತ ಕುಟುಂಬಗಳು ಆರ್ಥಿಕ ಸಂಕಷ್ಟದ ಅಂಚಿಗೆ ತಲುಪಿವೆ. ಇಂತಹ ಗಂಭೀರ ಪರಿಸ್ಥಿತಿಯಲ್ಲೂ ಸರ್ಕಾರ ರೈತರ ನೆರವಿಗೆ ಧಾವಿಸದಿರುವುದು ಅತ್ಯಂತ ಖಂಡನೀಯ ಎಂದು ಮುನೇನಕೊಪ್ಪ ಕಿಡಿಕಾರಿದ್ದಾರೆ.

ನವಲಗುಂದ, ಅಣ್ಣಿಗೇರಿ ಮತ್ತು ಹುಬ್ಬಳ್ಳಿ ತಾಲೂಕುಗಳಲ್ಲಿ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕೇವಲ ಅಧಿಕಾರಿಗಳ ವರದಿ ಮತ್ತು ಕಚೇರಿ ದಾಖಲೆಗಳನ್ನು ನಂಬಿಕೊಂಡು ಕುಳಿತುಕೊಳ್ಳದೆ, ಸರ್ಕಾರದ ಪ್ರತಿನಿಧಿಗಳು ನೇರವಾಗಿ ರೈತರ ಹೊಲಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸೆ. 8ರ ಅಷ್ಟರೊಳಗೆ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳನ್ನು ಬರಗಾಲ ಪ್ರದೇಶವೆಂದು ಘೋಷಿಸಿ, ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡುವ ಕುರಿತು ಸ್ಪಷ್ಟ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತಕುಲವನ್ನು ಸಂಘಟಿಸಿ ಸರ್ಕಾರಕ್ಕೆ ತಕ್ಕ ಉತ್ತರ ನೀಡುವ ರೀತಿಯ ಬೃಹತ್ ಹಾಗೂ ತೀವ್ರ ಹೋರಾಟ ಆರಂಭಿಸಲಾಗುವುದು ಎಂದು ಮುನೇನಕೊಪ್ಪ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಕಿ ಬಿಲ್ ಬಿಡುಗಡೆಗಾಗಿ ಮುಂದುವರಿದ ಗುತ್ತಿಗೆದಾರರ ಪ್ರತಿಭಟನೆ
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯಿಂದ ಮಲಗುಂಡಿ ಸ್ವಚ್ಛತೆ