ರಾಮಕೃಷ್ಣ ದಾಸರಿ
ಹೊಸ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ರಚನೆಗೊಂಡ ಮೊದಲ ಸಚಿವ ಸಂಪುಟದಲ್ಲಿ ಅವಕಾಶ ಕಳೆದುಕೊಂಡಿದ್ದ ಜಿಲ್ಲೆಗೆ ಎರಡನೇ ಹಂತದಲ್ಲಿಯಾದರೂ ಸ್ಥಾನವನ್ನು ಪಡೆಯಬೇಕು ಎನ್ನುವ ಪಟ್ಟು ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಬಂದಿದ್ದು, ಅದಕ್ಕಾಗಿ ಎಲ್ಲಿಲ್ಲದ ಕಸರತ್ತನ್ನು ನಡೆಸುತ್ತಿದ್ದಾರೆ.
ಸಚಿವ ಸಂಪುಟದ ವಿಸ್ತರಣೆ ಕಾರ್ಯ ಕೊನೆಯ ಘಟ್ಟ ತಲುಪಿದ್ದರಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ಶಾಸಕರು - ಎಂಎಲ್ಸಿಗಳು, ಮುಖಂಡರು ಹೈಕಮಾಂಡ್ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಜಿಲ್ಲೆಯ ಮಾಜಿ ಸಚಿವ ಹಾಗೂ ಎಂಎಲ್ಸಿ ಎನ್.ಎಸ್.ಭೋಸರಾಜು ಹಾಗೂ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ನಡುವೆ ಸಚಿವ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿ ಸಾಗಿದ್ದು, ಕೊನೆಗಳಿಗೆಯಲ್ಲಿ ಹೈಕಮಾಂಡ್ ಯಾರಿಕೆ ಮಣಿಯಾಗಲಿದೆ ಎನ್ನುವ ಕುತೂಹಲವು ಮೂಡಿದೆ.ಹಿಂದಿನ ಸಿಎಂ ಸಿದ್ದರಾಮಯ್ಯ ಸಮಯದಲ್ಲಿ ಶಾಸಕರಿಲ್ಲದಿದ್ದರೂ ಭೋಸರಾಜು ಅವರಿಗೆ ಕರೆದು ಸಚಿವ ಸ್ಥಾನದಲ್ಲಿ ಅವಕಾಶ ನೀಡಲಾಗಿತ್ತು ಅದನ್ನು ಮುಂದುವರೆಸಿಕೊಳ್ಳುವ ನಿಟ್ಟಿನಲ್ಲಿ ಭೋಸರಾಜು ಮತ್ತು ಅವರ ಮಗ ರವಿ ಭೋಸರಾಜು ಭಗೀರಥ ಪ್ರಯತ್ನ ನಡೆಸಿದ್ದು, ಸಚಿವ ಸ್ಥಾನ ನೀಡುವುದು ಇಲ್ಲವೇ ವಿಧಾನ ಪರಿಷತ್ ಸಭಾಪತಿಯ ಸ್ಥಾನವನ್ನು ಕೊಡುವುದರ ಕುರಿತು ಹೈಕಮಾಂಡ್ ಹಂತಿಮ ತೀರ್ಮಾನಕ್ಕೆ ಬರಬೇಕಾಗಿದೆ. ಇನ್ನು ಸಿಂಧನೂರಿನಿಂದ ಐದು ಸಲ ಗೆದ್ದು ಶಾಸಕರಾಗಿರುವ ಹಂಪನಗೌಡ ಬಾದರ್ಲಿ ಅವರು ಸಚಿವ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದು, ಸಮುದಾಯ ಹಾಗೂ ಅನುಭವದ ಆಧಾರದ ಮೇಲೆ ಮತ್ತು ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ನೀಡಿದ ಮಾತಿನಂತೆ ಈ ಬಾರಿ ಅವರಿಗೆ ಸಚಿವ ಸ್ಥಾನ ಒಲಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಮಾನದಂಡಗಳ ಅವಲೋಕನೆ: ಸಚಿವ ಸಂಪುಟದ ವಿಸ್ತರಣೆಯಲ್ಲಿ ಹೈಕಮಾಂಡ್ ಸಾಕಷ್ಟು ಎಚ್ಚರಿಕೆಗಳನ್ನು ವಹಿಸಿದ್ದು, ಹಲವಾರು ಮಾನದಂಡಗಳ ಅವಲೋಕನೆಯನ್ನು ಮಾಡಿ ಸಚಿವ ಸ್ಥಾನದಲ್ಲಿ ಅವಕಾಶ ನೀಡಲು ಮುಂದಾಗಿದೆ. ಜಿಲ್ಲಾ ಮತ್ತು ಪ್ರಾದೇಶಿಕ ಪ್ರಾತಿನಿಧ್ಯತೆ, ಸಮುದಾಯದವಾರು ಆದ್ಯತೆ, ಹೊಸ ಹಾಗೂ ಹಳೆ ಮುಖಗಳ ಅನುಪಾತ, ಭವಿಷ್ಯದ ಎಲೆಕ್ಷನ್‌ಗಳ ಲೆಕ್ಕಾಚಾರ, ನಾಯಕರೊಂದಿಗೆ ಹೊಂದಿರುವ ಪ್ರಭಾವ, ಬಾಂಧವ್ಯಗಳು ಸೇರಿ ಮತ್ತಿತರ ಮಾನದಂಡಗಳನ್ನು ಅವಲೋಕಿಸಿ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ ಎನ್ನುವ ಅಂಶಗಳ ನಡುವೆ ಭೋಸರಾಜು ಹಾಗೂ ಬಾದರ್ಲಿ ಪರಿಗಣಿಸಿರುವ ಪಕ್ಷವು ಕೊನೆಯ ಕ್ಷಣದಲ್ಲಿ ಯಾವ ತೀರ್ಮಾನಕ್ಕೆ ಬರಲಿದೆ ಎನ್ನುವುದು ಸಸ್ಪೆನ್ಸಾಗಿ ಉಳಿದುಬಿಟ್ಟಿದೆ.
ಸಂಪುಟದಲ್ಲಿ ಜಿಲ್ಲೆಯ ಯಾವುದೇ ಶಾಸಕ, ಎಂಎಲ್ಸಿಗಳನ್ನು ಸೇರಿಸಿಕೊಂಡರೂ ಪರವಾಗಿಲ್ಲ ಆದರೆ ಉಸ್ತುವಾರಿ ಜವಾಬ್ದಾರಿಯನ್ನು ಸಹ ಅವರಿಗೆ ವಹಿಸಬೇಕು ಇಲ್ಲದಿದ್ದರೆ ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆಯಾಗುತ್ತದೆ ಎನ್ನುವುದು ಜನಸಾಮಾನ್ಯರ ಒತ್ತಾಸೆಯಾಗಿದೆ.