ಅರಸೀಕೆರೆಯಲ್ಲಿ ಶಾಸಕರ ವಿರುದ್ಧ ತೀವ್ರ ಪ್ರತಿಭಟನೆ

KannadaprabhaNewsNetwork |  
Published : Oct 08, 2025, 01:00 AM IST
ಅರಸೀಕೆರೆಯಲ್ಲಿ ತೀವ್ರ ಪ್ರತಿಭಟನೆ – ಶಾಸಕರ ವಿರುದ್ಧ ಆಕ್ರೋಶದ ಜ್ವಾಲೆ, ಪೊಲೀಸರೊಂದಿಗೆ ವಾಗ್ವಾದ | Kannada Prabha

ಸಾರಾಂಶ

ಯಾದವ ಹಾಗೂ ಇತರೆ ಸಮುದಾಯದ ನಾಯಕರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಪಿಪಿ ವೃತ್ತದಲ್ಲಿ ಸಂತೋಷ್ ಏಕಾಂಗಿ ಧರಣಿ ನಡೆಸುವುದಾಗಿ ಘೋಷಿಸಿದ್ದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ವಿವಿಧ ಸಮುದಾಯ ಮುಖಂಡರ ವಿರುದ್ಧ ಅಟ್ರಾಸಿಟಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಬಿಗುವಿನ ವಾತಾವರಣಕ್ಕೆ ಕಾರಣವಾಯಿತು.ಯಾದವ ಹಾಗೂ ಇತರೆ ಸಮುದಾಯದ ನಾಯಕರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಪಿಪಿ ವೃತ್ತದಲ್ಲಿ ಸಂತೋಷ್ ಏಕಾಂಗಿ ಧರಣಿ ನಡೆಸುವುದಾಗಿ ಘೋಷಿಸಿದ್ದರು. ಆದರೆ ನಂತರ ತಮ್ಮ ಬೆಂಬಲಿಗರೊಂದಿಗೆ ಶಾಮಿಯಾನ ಹಾಕಿ ಸಾಮೂಹಿಕ ಪ್ರತಿಭಟನೆಗೆ ಮುಂದಾದರು.ಆದರೆ ಈ ಪ್ರತಿಭಟನೆಗೆ ಪೂರ್ವಾನುಮತಿ ಇಲ್ಲದಿರುವುದರಿಂದ, ಪೊಲೀಸರು ಸ್ಥಳಕ್ಕೆ ಆಗಮಿಸಿ ಶಾಮಿಯಾನ ಹಾಗೂ ವೇದಿಕೆ ತೆರವುಗೊಳಿಸಲು ಮುಂದಾದಾಗ ಸಂತೋಷ್ ಮತ್ತು ಪೊಲೀಸರ ನಡುವೆ ವಾಗ್ವಾದ ಉಂಟಾಯಿತು. ಕೆಲ ಹೊತ್ತು ಪರಿಸ್ಥಿತಿ ಬಿಗುವಿನತ್ತ ತಿರುಗಿದರೂ, ಪೊಲೀಸರು ಶಾಂತ ವಾತಾವರಣ ಕಾಪಾಡಲು ಯಶಸ್ವಿಯಾದರು.ಪೊಲೀಸರ ಕ್ರಮಕ್ಕೆ ಆಕ್ರೋಶಗೊಂಡ ಸಂತೋಷ್ ಹಾಗೂ ಅವರ ಬೆಂಬಲಿಗರು ಬಿಸಿಲಿನ ಮಧ್ಯೆಯೇ ಧರಣಿ ಮುಂದುವರೆಸಿದರು. ಪ್ರತಿಭಟನಾಕಾರರು ಅರೆ ಬೆತ್ತಲೆ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ್ ಅವರು ತಾಲೂಕಿನಲ್ಲಿ ಬಡ ಜನರಿಗೆ ಮಾತಾಡುವ ಸ್ವಾತಂತ್ರ್ಯವೇ ಉಳಿದಿಲ್ಲ. ಸಣ್ಣ ಅಸಮಾಧಾನ ವ್ಯಕ್ತಪಡಿಸಿದವರ ಮೇಲೂ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗುತ್ತಿದೆ. ನನ್ನ ಹಾಗೂ ನನ್ನ ಬೆಂಬಲಿಗರ ಮೇಲೂ ರಾಜಕೀಯ ದ್ವೇಷದಿಂದ ಕೇಸು ಹಾಕಲಾಗಿದೆ. ಈ ಎಲ್ಲಾ ಕ್ರಮಗಳು ಶಾಸಕ ಕೆ.ಎಂ. ಶಿವಲಿಂಗೇಗೌಡರ ಮಾರ್ಗದರ್ಶನದಲ್ಲೇ ನಡೆಯುತ್ತಿವೆ ಎಂದು ಆರೋಪಿಸಿದರು.ಪೊಲೀಸರು ಹಾಗೂ ತಾಲೂಕು ಆಡಳಿತ ಶಾಸಕರ ಕೈಗೊಂಬೆಗಳಂತೆ ವರ್ತಿಸುತ್ತಿವೆ. ಮಾತನಾಡಿದರೆ ಕೇಸು, ಹೋರಾಡಿದರೆ ಬಂಧನ ಇದೇ ಸ್ಥಿತಿ. ಆದರೆ ಯಾರೇ ಅಧಿಕಾರದಲ್ಲಿದ್ದರೂ ಅದು ಶಾಶ್ವತವಲ್ಲ. ನಾವು ರಾಜಕೀಯವಾಗಿ ಉತ್ತರ ನೀಡುತ್ತೇವೆ ಎಂದು ಎಚ್ಚರಿಸಿದರು.ಧರಣಿ ಸ್ಥಳದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಗಳು ಅಲಂಕರಿಸಲ್ಪಟ್ಟಿದ್ದವು. ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್, ರೈತ ಮುಖಂಡ ಗೀಜಿಹಳ್ಳಿ ಸ್ವಾಮಿ, ಮಾಜಿ ನಗರಸಭಾ ಸಧಸ್ಯ ಹರ್ಷವರ್ಧನ್, ಶಿವನ್ ರಾಜ್, ಕಾಟಿಕೆರೆ ಮೋಹನ್, ನಾಗರಾಜು, ಶಂಕರಣ್ಣ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.ಸ್ಥಳದಲ್ಲಿ ಡಿವೈಎಸ್ಪಿ ಬಿ.ಆರ್. ಗೋಪಿ, ಗ್ರಾಮಾಂತರ ವಲಯ ಸಿಐ ಅರುಣ್ ಕುಮಾರ್, ನಗರ ಠಾಣೆ ಪಿಎಸ್ಐ ದಿಲೀಪ್ ಕುಮಾರ್, ವೃತ್ತ ನಿರೀಕ್ಷಕ ಕೃಷ್ಣಕುಮಾರ್ ಸೇರಿದಂತೆ ವಿವಿಧ ಠಾಣೆಗಳ ಸಿಬ್ಬಂದಿ ಬಂದೋಬಸ್ತಿನಲ್ಲಿ ತೊಡಗಿಸಿಕೊಂಡಿದ್ದರು.ಮಧ್ಯಾಹ್ನದ ನಂತರ ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಹಾಗೂ ಅವರ 25ಕ್ಕೂ ಹೆಚ್ಚು ಬೆಂಬಲಿಗರನ್ನು ಪೊಲೀಸರು ಜಾವಗಲ್ ಪೊಲೀಸ್ ಠಾಣೆಗೆ ಕರೆದೊಯ್ದರು.ಪಿಪಿ ವೃತ್ತದಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೆ ಪ್ರತಿಭಟನೆ ನಡೆಸಿದ ಪರಿಣಾಮ ಸಾರ್ವಜನಿಕರಿಗೆ ಅಡಚಣೆ ಉಂಟಾಗಿರುವುದರಿಂದ, ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಕಾಲಂ 71 (ಕೆಪಿಐ ಆಕ್ಟ್) ಅಡಿ ಪ್ರಕರಣ ದಾಖಲಿಸಿದರು.ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಪೂರ್ವಾನುಮತಿ ಪಡೆಯದೆ ಪ್ರತಿಭಟನೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದರು. ವಿಚಾರಣೆ ಬಳಿಕ ಎಲ್ಲರಿಗೂ ಕಾನೂನು ಮಾಹಿತಿ ನೀಡಿ ಅದೇ ದಿನ ಸಂಜೆ ಬಿಡುಗಡೆ ಮಾಡಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಬಾಕ್ಸ್.....“ಹಾಸನಾಂಬ ದೇವಿಯ ಹಬ್ಬ ಮುಗಿದ ನಂತರ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪಕ್ಷದ ಹಿರಿಯ ಮುಖಂಡರ ಜೊತೆ ಆಲೋಚನೆ ನಡೆಸಿ, ತಾಲೂಕಿನಲ್ಲಿ ದೊಡ್ಡ ಮಟ್ಟದ ಧರಣಿ ಹೋರಾಟ ಕೈಗೊಳ್ಳಲಾಗುವುದು. ಜನರ ಹಕ್ಕು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದ್ದರೆ, ಅದಕ್ಕೆ ಪ್ರತಿಕ್ರಿಯೆಯಾಗಿ ಜನರ ಶಕ್ತಿಯನ್ನು ತೋರಿಸುವ ಸಮಯ ಬಂದಿದೆ. ಈ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧವಲ್ಲ ಜನರ ಧ್ವನಿಗೆ ನ್ಯಾಯ ದೊರಕಿಸಲು ನಡೆಯುವ ಸತ್ಯಾಗ್ರಹದ ಹೋರಾಟವಾಗಲಿದೆ ಎಂದು ಸಂತೋಷ್‌ ತಿಳಿಸಿದರು.ಜನರ ಆಕ್ರೋಶವನ್ನು ಅರ್ಥಮಾಡಿಕೊಳ್ಳುವ ಬದಲು ಕೇಸುಗಳು, ಬಂಧನಗಳು ಎಂಬ ಹಳೆಯ ರಾಜಕೀಯ ಕ್ರಮಗಳು ನಡೆಯುತ್ತಿವೆ. ಇದು ಜನತೆಯ ಧ್ವನಿಯನ್ನು ಕುಂಠಿತಗೊಳಿಸುವ ಪ್ರಯತ್ನ. ನಾವು ಕಾನೂನಿನ ಮರ್ಯಾದೆಯೊಳಗಾಗಿ ಹೋರಾಟ ಮುಂದುವರೆಸುತ್ತೇವೆ, ಆದರೆ ಹೋರಾಟ ತೀವ್ರಗೊಳ್ಳುವುದು ಖಚಿತ ಎಂದು ಎಚ್ಚರಿಕೆ ನೀಡಿದರು.

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ