ಚಾಮರಾಜನಗರ: ಜಿಲ್ಲೆಯ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕ್ಷಯರೋಗ ಪರೀಕ್ಷೆಗಳನ್ನು ತೀವ್ರಗೊಳಿಸಿ, ಪ್ರಕರಣಗಳನ್ನು ಗುರುತಿಸಿ ಅಗತ್ಯ ಚಿಕಿತ್ಸೆ ನೀಡಲು ಮುಂದಾಗುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಹನೂರು ಹಾಗೂ ಕೊಳ್ಳೇಗಾಲ ತಾಲೂಕುಗಳಲ್ಲಿ ಇತರೆ ತಾಲೂಕುಗಳಿಗಿಂತ ಹೆಚ್ಚಿನ ಕ್ಷಯರೋಗಿಗಳಿರುವುದು ಕಂಡುಬಂದಿದೆ. ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳು ಸೇರಿದಂತೆ ಎಲ್ಲಾ ಆಸ್ಪತ್ರೆಗಳಲ್ಲಿ ಕ್ಷಯ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಪಂಚಾಯಿತಿ ಮಟ್ಟದಲ್ಲಿ ವ್ಯಾಪಕ ಜಾಗೃತಿ ಹಮ್ಮಿಕೊಳ್ಳಬೇಕು. ಶಾಲಾಮಟ್ಟದಲ್ಲಿ ನಡೆಯುವ ಪೋಷಕರ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಬೇಕು. ಜಿಲ್ಲೆಯ ಎಲ್ಲಾ ಗ್ರಾಪಂಗಳಿಗೆ ಗ್ರಾಮ ಆರೋಗ್ಯ ಕಿಟ್ ನೀಡಲಾಗಿದ್ದು, ಇವುಗಳ ಸದ್ಭಳಕೆಯಾಗಬೇಕು. ಒಟ್ಟಿನಲ್ಲಿ ಕ್ಷಯ ಪತ್ತೆಗೆ ಸೂಕ್ಷ್ಮ ಕ್ರಿಯಾಯೋಜನೆ ರೂಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕ್ಷಯರೋಗ ಪತ್ತೆ ಕಾರ್ಯದ ಪ್ರಗತಿ ಚರ್ಚಿಸಲು ಪ್ರತಿ ತಿಂಗಳು 20ರಂದು ಸಭೆ ಆಯೋಜಿಸಬೇಕು. ಮುಂದಿನ ಆರು ತಿಂಗಳೊಳಗೆ ಶೇ. 50ರಷ್ಟು ಗ್ರಾಪಂಗಳಲ್ಲಿ ಕ್ಷಯರೋಗಿಗಳ ಪತ್ತೆ ಕಾರ್ಯ ಪೂರ್ಣಗೊಳಿಸಬೇಕು. ಉತ್ತಮ ಪ್ರಗತಿ ಸಾಧಿಸುವ ಪಂಚಾಯಿತಿ ಅಧಿಕಾರಿಗಳನ್ನು ಗುರುತಿಸಿ ಪ್ರಮಾಣಪತ್ರ ನೀಡಿ ಅಭಿನಂದಿಸುವ ಕೆಲಸವಾಗಬೇಕು. ಕ್ಷಯಮುಕ್ತ ಗ್ರಾಪಂಗಳನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪರಿಗಣಿಸಲು ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.ಎಚ್ಐವಿ ಏಡ್ಸ್‌ಗೆ ಸಂಬಂಧಿಸಿದಂತೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ಕ್ರೀನಿಂಗ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. 2008ರಲ್ಲಿ ಜಿಲ್ಲೆಯಲ್ಲಿ ಎಚ್ಐವಿ ಸರಾಸರಿ ಶೇ.4.2ರಷ್ಟಿತ್ತು. ಪ್ರಸ್ತುತ 0.23ಕ್ಕೆ ಇಳಿದಿದೆ. ಸೋಂಕಿತ ತಾಯಿಯಿಂದ ಮಗುವಿಗೆ ಎಚ್ಐವಿ ಹರಡದಂತೆ ವೈದ್ಯರು ನಿಗಾವಹಿಸಬೇಕು. ಎಚ್ಐವಿ ಪೀಡಿತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ನರೇಗಾ, ಕೌಶಲ್ಯಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳಿಗೆ ಸೇವಾಸಿಂಧು ಪೋರ್ಟಲ್ ಮೂಲಕ ನೋಂದಾಯಿಸುವ ಕೆಲಸ ತ್ವರಿತವಾಗಿ ಆಗಬೇಕು. ಎಚ್ಐವಿ ಪೀಡಿತರಿಗೆ ನೆರವಾಗುತ್ತಿರುವ ಸ್ವಯಂಸೇವಾ ಸಂಸ್ಥೆಗಳಿಗೆ ಎನ್ಆರ್‌ಎಲ್ಎಂ ಸಹಯೋಗ ಒದಗಿಸಬೇಕು ಎಂದರು.
ಜಿಪಂ ಸಿಇಒ ಮೋನಾ ರೋತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್. ಚಿದಂಬರ, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ರವಿಕುಮಾರ್, ವೈದ್ಯಕೀಯ ವಿಜ್ಞಾನಗಳ ಬೋಧನಾ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ. ಮಹೇಶ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಪ್ರಸನ್ನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಬಿಂದ್ಯಾ, ಎಲ್ಲಾ ತಾಲೂಕು ಆರೋಗ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.