ಧಾರವಾಡ:
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕಿರೇಸೂರ ಗ್ರಾಮದಲ್ಲಿ ಏಪ್ರಿಲ್‌ನಲ್ಲಿ ಮನೆ ಕಳ್ಳತನವಾಗಿತ್ತು. ಹಾಗೆಯೇ, ಹಾವೇರಿ ಜಿಲ್ಲೆ ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಬಂಗಾರದ ಅಂಗಡಿ ಕಳ್ಳತನವಾಗಿದ್ದು, ಕಳುವಾದ ವಸ್ತು ಮತ್ತು ಆರೋಪಿತರ ಪತ್ತೆ ಕುರಿತು ಎರಡು ಜಿಲ್ಲೆಗಳ ಪೊಲೀಸರು ಜಂಟಿ ಕಾರ್ಯಾಚರಣೆ ಕೈಕೊಂಡು ಈ ಪ್ರಕರಣ ಪತ್ತೆ ಮಾಡಿದ್ದಾರೆ.
ಕಳ್ಳತನ ಪ್ರಕರಣದ ಆರೋಪಿಗಳಾದ ಲಕ್ಷ್ಮೇಶ್ವರದ ಬಾಳೆಹೊಸೂರಿನ ಶಿವರಾಜ ಹನಮಂತಪ್ಪ ಮೋಡಕೇರ ಹಾಗೂ ಸಿಂದನೂರಿನ ಅಶೋಕ ಶಿವಪ್ಪ ಕೊಂಚಿಕೊರವರ ಅವರನ್ನು ಬಂಧಿಸಿ 310 ಗ್ರಾಂ ಬಂಗಾರದ ಆಭರಣ ಮತ್ತು 26 ಕೆಜಿ ಬೆಳ್ಳಿಯ ಆಭರಣ ಹಾಗೂ ತೆಲಂಗಾಣದಲ್ಲಿ ಕಳ್ಳತನ ಮಾಡಿದ ಒಂದು ಬುಲೆರೋ ವಾಹನ ಸೇರಿ ₹ 1.15 ಕೋಟಿ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ ಎಂದು ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಹಾಗೂ ಹಾವೇರಿ ಜಿಲ್ಲೆ ಪೊಲೀಸ್ ಅಧೀಕ್ಷಕಿ ಯಶೋದಾ ವಂಟಗೋಡಿ ಮಾಹಿತಿ ನೀಡಿದರು.ಪೊಲೀಸ್ ಉಪ ಅಧೀಕ್ಷಕರಾದ ಶಿವಾನಂದ ಕಟಗಿ, ವಿನೋದ ಮುಕ್ತೆದಾರ, ಹುಬ್ಬಳ್ಳಿ ಗ್ರಾಮೀಣ ಸಿಪಿಐ ಮುರಗೇಶ ಚನ್ನಣ್ಣವರ ಮುಂದಾಳತ್ವದಲ್ಲಿ ಧಾರವಾಡ ಹಾಗೂ ಹಾವೇರಿ ಪೊಲೀಸರು ಈ ಕಾರ್ಯಾಚರಣೆ ಮಾಡಿದ್ದಾರೆ. ಒಟ್ಟು ಆರು ಜನ ಆರೋಪಿತರ ತಂಡದಲ್ಲಿ ನಾಲ್ವರು ಪರಾರಿಯಾಗಿದ್ದು, ಅವರ ಬಂಧನಕ್ಕೂ ಬಲೆ ಬೀಸಲಾಗಿದೆ ಎಂದು ತಿಳಿಸಿದರು.