ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯ ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣದಲ್ಲಿ ರೈಲು ಗಾಡಿ ಸಂಖ್ಯೆ: 20651 / 20652 (ಬೆಂಗಳೂರು-ತಾಳಗುಪ್ಪ-ಬೆಂಗಳೂರು) ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ನಿಲುಗಡೆ ಇಲ್ಲ. ಇದರಿಂದಾಗಿ ಆ ಭಾಗದ ಸಾರ್ವಜನಿಕರಿಂದ ಬಹು ದಿನಗಳಿಂದ ಈ ಬೇಡಿಕೆ ಮತ್ತು ಒತ್ತಡ ಇತ್ತು. ಆದಕಾರಣ ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಮುಕುಲ್ ಸರಣ್ ಮಾಥೂರ್ ಅವರನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ಹುಬ್ಬಳ್ಳಿಯಲ್ಲಿ ಕಳೆದ ವಾರ ಭೇಟಿ ಮಾಡಿ ವಸ್ತುಸ್ಥಿತಿ ವಿವರಿಸಿದ್ದರು. ಜಿಲ್ಲೆಯ ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣದಲ್ಲಿ ಇಂಟರ್‌ಸಿಟಿ ರೈಲನ್ನು ನಿಲುಗಡೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದರು.
ಸಂಸದರ ಸತತ ಪ್ರಯತ್ನದ ಫಲವಾಗಿ ಹುಬ್ಬಳ್ಳಿ ರೈಲ್ವೆ ನೈರುತ್ಯ ವಲಯದಿಂದ ಶಿವಮೊಗ್ಗದಿಂದ ಹೊರಡುವ ಇಂಟರ್ ಸಿಟಿ ರೈಲು ಗಾಡಿ ಸಂಖ್ಯೆ: 20651 ಕುಂಸಿ ರೈಲ್ವೆ ನಿಲ್ದಾಣಕ್ಕೆ ರಾತ್ರಿ 8.5ಕ್ಕೆ ಬರಲಿದೆ. 8.6 ನಿಮಿಷಕ್ಕೆ ಹೊರಟು 8.20 ನಿಮಿಷಕ್ಕೆ ಅರಸಾಳು ರೈಲು ನಿಲ್ದಾಣವನ್ನು ತಲುಪಿ 8.21ಕ್ಕೆ ರೈಲ್ವೆ ನಿಲ್ದಾಣವನ್ನು ಬಿಡಲಿದೆ. ಅದೇ ರೀತಿ ತಾಳಗುಪ್ಪದಿಂದ ಹೊರಡುವ ಇಂಟರ್‌ಸಿಟಿ ರೈಲು ಗಾಡಿ ಸಂಖ್ಯೆ: 20652 ಅರಸಾಳು ರೈಲ್ವೆ ನಿಲ್ದಾಣಕ್ಕೆ ಬೆಳಗ್ಗೆ 6.19ಕ್ಕೆ ತಲುಪಲಿದೆ. 6.20ಕ್ಕೆ ಅರಸಾಳಿನಿಂದ ಹೊರಟು ಕುಂಸಿ ರೈಲ್ವೆ ನಿಲ್ದಾಣಕ್ಕೆ 6.33ಕ್ಕೆ ತಲುಪಿ, 6.34ಕ್ಕೆ ರೈಲ್ವೆ ನಿಲ್ದಾಣವನ್ನು ಬಿಡಲಿದೆ.ಆಯನೂರು, ಕುಂಸಿ, ಹೋಬಳಿಗಳ ಗ್ರಾಮಸ್ಥರು ಹಾಗೂ ಶಿಕಾರಿಪುರ ತಾಲೂಕಿನ ಗಾಮ, ಕಲ್ಮನೆ, ಹಿತ್ತಲ, ಚುರ್ಚಿಗುಂಡಿ ಭಾಗದ ಸಾರ್ವಜನಿಕರು ಹಾಗೂ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ, ಕೋಡೂರು, ಬಾಳೂರು, ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಹುಂಚ ಅಮೃತ ಗ್ರಾಮದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ರೈಲು ಸೌಲಭ್ಯದ ಬಳಕೆ ಮಾಡಿಕೊಳ್ಳುವಂತೆ ಸಂಸದರು ಮನವಿ ಮಾಡಿದ್ದಾರೆ.