ಕನ್ನಡಪ್ರಭ ವಾರ್ತೆ ಮಲ್ಪೆ
ನಮ್ಮಲ್ಲಿ ಆಸಕ್ತಿ ಮತ್ತು ಸಮರ್ಪಣಾಭಾವ ಇದ್ದಾಗ ಯಾವುದೇ ಅಡೆತಡೆಗಳನ್ನು ಎದುರಿಸಿ ಸಾಧನೆಯ ಶಿಖರವನ್ನು ಏರಲು ಸಾಧ್ಯವಿದೆ ಎಂದು 170 ತಾಸು ಭರತನಾಟ್ಯ ಪ್ರದರ್ಶನ ನೀಡಿ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲೆ ಮಾಡಿದ ಕಲಾವಿದೆ ರೆಮೋನಾ ಇವೆಟ್ ಪಿರೇರಾ ಹೇಳಿದರು.ಅವರು ಭಾನುವಾರ ಇಲ್ಲಿನ ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ಮಹಿಳಾ ಆಯೋಗ ಹಾಗೂ ಸ್ತ್ರೀ ಸಂಘಟನೆ ಆಯೋಜಿಸಿದ್ದ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಚರ್ಚಿನ ವತಿಯಿಂದ ರೆಮೋನಾ ಇವೆಟ್ ಪಿರೇರಾ ಅವರನ್ನು ಸನ್ಮಾನಿಸಲಾಯಿತು.
ಹೆಣ್ಣು ಮಕ್ಕಳು ಕಠಿಣವಾದ ಸಾಧನೆಗಳನ್ನು ಮಾಡುವಾಗ ಸಮಾಜದಿಂದ ಪ್ರೋತ್ಸಾಹದ ಜೊತೆಗೆ ಟೀಕೆಗಳು ಬರುವುದು ಸಹಜ. ಆದರೆ ಅದರ ಬಗ್ಗೆ ಹೆಚ್ಚಿನ ತಲೆಕೆಡಿಸದೆ ಸಾಧನೆಯ ಗುರಿ ಇದ್ದರೇ ಯಶಸ್ಸು ಶತಸಿದ್ಧ. ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ಹೆತ್ತವರು ತಮ್ಮ ಆಸೆಗಳನ್ನು ಮಕ್ಕಳ ಮೇಲೆ ಹೇರದೆ ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದೇ ಕ್ಷೇತ್ರದಲ್ಲಿ ಮುಂದುವರಿಯಲು ಪ್ರೋತ್ಸಾಹ ನೀಡಿದಾಗ ಉತ್ತಮವಾದ ಸಾಧನೆ ಸಾಧ್ಯವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಚರ್ಚಿನ ಧರ್ಮಗುರು ಡೆನಿಸ್ ಡೆಸಾ ಮಾತನಾಡಿ, ಹೆಣ್ಣು ಅಬಲೆಯಲ್ಲ ಬದಲು ಸಬಲೆ. ಬೇಟಿ ಬಚಾವೊ ಬೇಟಿ ಪಡಾವೊ ಮೂಲಕ ದೇಶದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಪ್ರೋತ್ಸಾಹ ಲಭಿಸುತ್ತಿದೆ. ಹಿಂದಿನ ಪರಿಸ್ಥಿತಿಗಳಿಗೆ ಹೋಲಿಸಿದರೆ ಹೆಣ್ಣು ಇಂದು ಎಲ್ಲ ರಂಗದಲ್ಲೂ ಮುಂದಿದ್ದಾಳೆ. ಇಂದು ಹೆಣ್ಣುಮಕ್ಕಳಿಗೆ ಅವಕಾಶಗಳು ಸಾಕಷ್ಟಿದ್ದು, ಬಳಸಿಕೊಂಡು ಎತ್ತರಕ್ಕೆ ಬೆಳೆಯಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಆಯೋಜಿಸಿದ್ದ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಚರ್ಚಿನ ಹೆಣ್ಣು ಮಕ್ಕಳು ಸಮಾಜದಲ್ಲಿ ಮಹಿಳೆಯ ಸ್ಥಾನಮಾನವನ್ನು ಪರಿಚಯಿಸುವ ನೃತ್ಯ, ಕಿರು ನಾಟಕಗಳನ್ನು ಪ್ರದರ್ಶಿಸಿದರು.ಕಾರ್ಯಕ್ರಮದಲ್ಲಿ ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷರಾದ ಲೆಸ್ಲಿ ಆರೋಜಾ ಶುಭಹಾರೈಸಿದರು. ಸ್ಥಳೀಯ ಕಾನ್ವೆಂಟಿನ ಸುಪಿರೀಯರ್ ಸಿಸ್ಟರ್ ಸುಷ್ಮಾ, ಚರ್ಚಿನ ಪಾಲನಾ ಮಂಡಳಿಯ ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಚಾಲಕಿ ವನಿತಾ ಫರ್ನಾಂಡಿಸ್, ರೆಮೋನಾ ಪಿರೇರಾ ತಾಯಿ ಗ್ಲ್ಯಾಡಿಸ್ ಪಿರೇರಾ, ಹೆಣ್ಣು ಮಕ್ಕಳ ಪ್ರತಿನಿಧಿಗಳಾಗಿ ಶರ್ಲಿನ್ ಫರ್ನಾಂಡಿಸ್, ಅನೋರಾ ಫರ್ನಾಂಡಿಸ್, ಚರ್ಚಿನ ಆಗ್ನೆಲ್ ಡಿಸೋಜ ಉಪಸ್ಥಿತರಿದ್ದರು. ಸ್ತ್ರೀ ಸಂಘಟನೆಯ ಪ್ರಿಯಾ ರೊಡ್ರಿಗಸ್ ಸ್ವಾಗತಿಸಿದರು. ಶಾಂತಿ ಫರ್ನಾಂಡಿಸ್ ವಂದಿಸಿದರು.