ಜಾತಿಗಣತಿ ಗೊಂದಲ, ಹೈಕೋರ್ಟ್ ಮಧ್ಯಪ್ರವೇಶಿಸಲಿ: ವಿ. ಸೋಮಣ್ಣ

KannadaprabhaNewsNetwork |  
Published : Sep 22, 2025, 01:02 AM IST
21ಸೋಮಣ್ಣ - ಕೇಂದ್ರ ಸಚಿವ ಸೋಮಣ್ಣ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. | Kannada Prabha

ಸಾರಾಂಶ

, ರಾಜ್ಯ ಸರ್ಕಾರದ ಈ ಜಾತಿ ಗಣತಿಗೆ ತಲೆನೂ ಇಲ್ಲ, ಬುಡನೂ ಇಲ್ಲ. ಕಾಯ್ದೆಯಲ್ಲಿ ಅವಕಾಶನೇ ಇಲ್ಲ, ಆದ್ರೂ ಅದೇನೋ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಅಂತ ಮಾಡಬಾರದನ್ನು ಮಾಡ್ತಿದ್ದಾರೆ, ಇದೊಂದು ಹಿಟ್ ಆ್ಯಂಡ್ ರನ್ ಸರ್ಕಾರ ಎಂದು ಸೋಮಣ್ಣ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಜಾತಿ ಗಣತಿ ಹೆಸರಿನಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಸಾಮಾನ್ಯ ಜನರ ನಂಬಿಕೆ, ವಿಶ್ವಾಸಗಳ ಹಳಿ ತಪ್ಪಿಸುವ ಕೆಲಸ ಮಾಡುತ್ತಿದೆ. ಆದ್ದರಿಂದ ಹೈಕೋರ್ಟ್ ಮಧ್ಯಪ್ರವೇಶ ಮಾಡಬೇಕು ಎಂದು ಕೇಂದ್ರ ರೈಲ್ವೇ ಸಹಾಯಕ ಸಚಿವ ವಿ. ಸೋಮಣ್ಣ ಆಗ್ರಹಿಸಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಈ ಜಾತಿ ಗಣತಿಗೆ ತಲೆನೂ ಇಲ್ಲ, ಬುಡನೂ ಇಲ್ಲ. ಕಾಯ್ದೆಯಲ್ಲಿ ಅವಕಾಶನೇ ಇಲ್ಲ, ಆದ್ರೂ ಅದೇನೋ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಅಂತ ಮಾಡಬಾರದನ್ನು ಮಾಡ್ತಿದ್ದಾರೆ, ಇದೊಂದು ಹಿಟ್ ಆ್ಯಂಡ್ ರನ್ ಸರ್ಕಾರ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರವೇ ದೇಶಾದ್ಯಂತ ಜನ ಗಣತಿ ಮಾಡುತ್ತಿದೆ. ಅಷ್ಟರಲ್ಲಿ ಸಿದ್ದರಾಮಯ್ಯ ಅವರು ಕೂಡ ರಾಜ್ಯದಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ. ಅವರ ಸಮೀಕ್ಷೆಗೆ ದೂರ ದೃಷ್ಟಿನೇ ಇಲ್ಲ, ಸಿದ್ದರಾಮಯ್ಯ ಎರಡನೇ ಅವಧಿಯಲ್ಲಿ ಅಧಿಕಾರಕ್ಕೆ ಬಂದಂದಿನಿಂದ ಇಂತಹುದ್ದೇ ಮಾಡಬಾರದ ಕೆಲಸವನ್ನು ಮಾಡುತ್ತಿದ್ದಾರೆ. ಹಳ್ಳಿಗಾಡಿನ ಜನರು ಪರಸ್ಪರ ಜಗಳವಾಡುವಂತೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಇಂತಹ ಸಣ್ಣತನಗಳನ್ನು ಬಿಟ್ಟಿದ್ರೆ ಹೀರೋ ಆಗುತ್ತಿದ್ದರು ಎಂದು ಸೋಮಣ್ಣ ಹೇಳಿದರು.ಸಮೀಕ್ಷೆಯಿಂದ ಈಗ ಕೆಲವು ಜಾತಿಗಳನ್ನು ಬಿಟ್ಟಿದ್ದೇವೆ ಎನ್ನುತ್ತಿದ್ದಾರೆ. ಅವರಿಗೆ ಈ ಜಾತಿಗಳನ್ನು ಸೇರಿಸಿ ಎಂದವರು ಯಾರು? ಜನರನ್ನು ದಿಕ್ಕು ತಪ್ಪಿಸುವ ವಿಷಯದಲ್ಲಿ ಡಾಕ್ಟರೇಟ್ ಸಿದ್ದರಾಮಯ್ಯಗೆ ಸಿಗ್ಬೇಕು. ಜಾತಿ, ಜಾತಿ ನಡುವೆ ತಂದು ಹಾಕುತ್ತಿದ್ದಾರೆ. ವೋಟ್ ಬ್ಯಾಂಕ್ ಗಟ್ಟಿಮಾಡಲು ಸಾಮಾನ್ಯರ ಮನಸ್ಸನ್ನು ಕದಡುತ್ತಿದ್ದಾರೆ. ಜನರೇ ಪಾಠ ಕಲಿಸುತ್ತಾರೆ ಎಂದರು.ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ದೇಶದಲ್ಲಿರೋದು ಆರೇ ಧರ್ಮ ಏಳನೇ ಧರ್ಮ ಇಲ್ಲ. ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಯಿರಿ, ಧರ್ಮ ಕಾಲಂನಲ್ಲಿ ಹಿಂದೂ ಬರೆಯಿರಿ ಎಂದವರು ವೀರಶೈವ, ಲಿಂಗಾಯತರಿಗೆ ವಿನಂತಿ ಮಾಡುತ್ತಿದ್ದೇನೆ ಎಂದು ಹೇಳಿದರು.ಕೊಂಕಣ ರೈಲ್ವೆ ಅಭಿವೃದ್ಧಿ ಯೋಜನೆ:

ಉಡುಪಿ ರೈಲು ನಿಲ್ದಾಣಕ್ಕೆ ಉಡುಪಿ ಶ್ರೀಕೃಷ್ಣನ ಹೆಸರು ಇಡಬೇಕು ಎಂಬ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದನ್ನು ರಾಜ್ಯ ಸರ್ಕಾರ ಒಪ್ಪಬೇಕಾಗುತ್ತದೆ, ಆದ್ದರಿಂದ ರಾಜ್ಯ ಸರ್ಕಾರಕ್ಕೆ ಬರೆದಿದ್ದೇವೆ, ಅಲ್ಲಿಂದ ಉತ್ತರ ಬಂದಿಲ್ಲ ಎಂದರು.ಕೊಂಕಣ ರೈಲ್ವೆಯಲ್ಲಿ ಸಾಕಷ್ಟು ಸಾಧಕ ಬಾಧಕಗಳಿವೆ. ಈ ರೈಲ್ವೆ ಮಾರ್ಗದ ಅಭಿವೃದ್ಧಿಗೆ ವಿಸ್ತೃತ ಯೋಜನೆ ರೂಪಿಸಿದ್ದೇವೆ. ಅದು ಹಾದು ಹೋಗುವ 5 ರಾಜ್ಯಗಳನ್ನು ಸಂಪರ್ಕಿಸಿದ್ದೇವೆ, ಈಗಾಗಲೇ ಕೇರಳ ಮತ್ತು ಗೋವಾ ರಾಜ್ಯಗಳು ಒಪ್ಪಿಗೆ ನೀಡಿವೆ. ಪುದುಚೇರಿ ತಮ್ಮದೇನೂ ಅಭ್ಯಂತರ ಇಲ್ಲ ಎಂದು ಹೇಳಿದೆ. ಆದರೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಇನ್ನೂ ಉತ್ತರ ನೀಡಿಲ್ಲ. ಒಪ್ಪಿಗೆ ನೀಡಿದ ಕೂಡಲೇ ಈ ಭಾರಿ ಯೋಜನೆ ಜಾರಿಯಾಗುತ್ತದೆ ಎಂದು ತಿಳಿಸಿದರು.ಅಂಕೋಲ- ಹುಬ್ಬಳ್ಳಿ ನಡುವೆ ರಸ್ತೆ ಮತ್ತು ರೈಲು ಮಾರ್ಗಗಳೆರಡೂ ಜೊತೆಯಾಗಿ ಅಭಿವೃದ್ಧಿ ಮಾಡುವುದಕ್ಕೆ 17,000 ಕೋಟಿ ರು.ಗಳ ಯೋಜನೆ ತಯಾರಾಗಿದೆ. ಇದರಿಂದ ಇಲ್ಲಿನ ಬಂದರುಗಳ ಸಂಪರ್ಕದಿಂದ ಜನರಿಗೆ ಸಾಕಷ್ಟು ಲಾಭವಾಗಲಿದೆ. ಇದು 50 ವರ್ಷದ ಹಿಂದೆನೇ ಆಗಬೇಕಾಗಿತ್ತು, ಈಗ ಕೈಗೆತ್ತಿಕೊಂಡಿದ್ದೇವೆ ಎಂದರು.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ