ಕನಕಗಿರಿ:
ಅಖಂಡ ಗಂಗಾವತಿ ತಾಲೂಕಿನ ಶಿಕ್ಷಕರ ದಿನಾಚರಣೆಗೆ ಲಕ್ಷ ಲಕ್ಷ ರೂಪಾಯಿ ಚಂದಾ ವಸೂಲಿ ಮಾಡಿರುವ ಕುರಿತು ಜಿಪಂ ಸಿಇಒಗೆ ಕಾಂಗ್ರೆಸ್ ಮುಖಂಡ ದೂರು ಸಲ್ಲಿಸಿದ್ದಾರೆ.ಸೆ. 17ರಂದು ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 137ನೇ ಜನ್ಮ ದಿನಾಚರಣೆ ಹಾಗೂ ಶಿಕ್ಷಣ ದಿನಾಚರಣೆ ಕಾರ್ಯಕ್ರಮಕ್ಕೆ ಲಕ್ಷಾಂತರ ರೂಪಾಯಿ ಹಣವನ್ನು ಸ್ಥಳೀಯ ಮುಖಂಡರು ಹಾಗೂ ಜನಪ್ರತಿನಿಧಿಗಳಿಂದ ವಸೂಲಿ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಶರಣೆಗೌಡ ಪಾಟೀಲ್ ಹುಲಸನಹಟ್ಟಿ ಶನಿವಾರ ದೂರು ಸಲ್ಲಿಸಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಸರ್ಕಾರಿ ನೌಕರರ ಸಂಘಕ್ಕೆ ತಾಲೂಕು ಅಧ್ಯಕ್ಷೆಯಾಗಿರುವ ಶಂಶಾದಬೇಗ ಬೆಲ್ದಾರ್ ಶಾಲೆಗೆ ಗೈರಾಗಿ ತಾಲೂಕು ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ನಡೆಯುವ ಶಾಲಾ ಕಾರ್ಯಕ್ರಮಗಳಲ್ಲಿ ಮೇಲಧಿಕಾರಿಗಳ ಗಮನಕ್ಕೆ ತಾರದೆ ಭಾಗಿಯಾಗುವುದು, ವರ್ಷಕ್ಕೆ ನಾಲ್ಕು ಕಾರ್ಯಕ್ರಮ ಆಯೋಜಿಸಿ ₹ 10 ಲಕ್ಷಕ್ಕೂ ಅಧಿಕ ಹಣವನ್ನು ಪ್ರಮುಖರಿಂದ ನಗದು ಹಾಗೂ ಪೋನ್ ಫೇ ಮೂಲಕ ವಸೂಲಿ ಮಾಡಿದ್ದಾರೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಮಾಲೀಕರು, ವೈದ್ಯರು, ಉದ್ಯಮಿಗಳು, ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳಿಂದಲೂ ಹಣ ಸಂಗ್ರಹಿಸಲಾಗಿದೆ. ಇವರು ಸ್ವಂತ ಲಾಭಕ್ಕಾಗಿ ನೌಕರರ ಸಂಘ ಬಳಸಿಕೊಳ್ಳುತ್ತಿದ್ದಾರೆ. ಚೈನ್ ಲಿಂಕ್ ವ್ಯವಹಾರಲ್ಲಿ ತೊಡಿಸಿಕೊಂಡು ಕೆಸಿಎಸ್ಆರ್ ನಿಯಮ ಉಲ್ಲಂಘಿಸಿದ್ದಾರಲ್ಲದೆ ಹಲವು ಶಿಕ್ಷಕರು, ನೌಕರರನ್ನು ದಾರಿ ತಪ್ಪುವುದಕ್ಕೆ ಕಾರಣವಾಗಿರುವ ಇವರನ್ನು ಕೂಡಲೇ ಕರ್ತವ್ಯದಿಂದ ಅಮಾನತು ಮಾಡಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕನಕಗಿರಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆಗೆ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿರುವ ಕುರಿತು ದೂರು ಸಲ್ಲಿಕೆಯಾಗಿದ್ದು, ಸೆ. 22ರಂದು ಕನಕಗಿರಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತೇನೆ. ಶಿಷ್ಟಾಚಾರ ಉಲ್ಲಂಘಟನೆ ಬಗ್ಗೆಯೂ ಪರಿಶೀಲಿಸಲಾಗುವುದು. ನಗದು ಅಥವಾ ಪೋನ್ ಪಡೆದಿರುವುದು ಕಂಡು ಬಂದಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇನೆ.ಸೋಮಶೇಖರಗೌಡ, ಡಿಡಿಪಿಐ ಕೊಪ್ಪಳ