ಕನ್ನಡಪ್ರಭ ವಾರ್ತೆ ಆನಂದಪುರ ಮೊಬೈಲ್‌ಗಳ ವಿಪರೀತ ವ್ಯಾಮೋಹದ ಪರಿಣಾಮ ಇಂದು ಸಾಹಿತ್ಯ ಪುಸ್ತಕಗಳು ಧೂಳು ಹಿಡಿಯಲು ಕಾರಣ ಆಗುತ್ತಿರುವುದು ವಿಷಾದನೀಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಆನಂದಪುರ ಮಹಾಂತಿ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಇತಿಹಾಸ ಪರಂಪರೆ ಉಳಿಸಿ ಅಭಿಯಾನ , ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಹಯೋಗದೊಂದಿಗೆ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಮೊಬೈಲ್ ಬಳಕೆ ಮೂಲಕ ಪುಸ್ತಕಗಳನ್ನು ಓದುವಂತಹ ಹವ್ಯಾಸ ಕಡಿಮೆ ಆಗುತ್ತಿದೆ. ಹಲವಾರು ಹೆಸರಾಂತ ಕವಿಗಳು, ಸಾಹಿತಿಗಳು, ಕಾದಂಬರಿಕಾರರು ಬರೆದ ಅತ್ಯುತ್ತಮ ಪುಸ್ತಕಗಳು ಓದುಗರಿಂದ ನಿರ್ಲಕ್ಷ್ಯಕ್ಕೆ ಒಳಗಾಗುವುದು ವಿಷಾದನೀಯ. ಈ ಹಿನ್ನೆಲೆ ರಾಜ್ಯ ಸರ್ಕಾರ ಮಕ್ಕಳಿಗೆ ಸಾಹಿತ್ಯದ ಬಗ್ಗೆ ಒಲವು ತೋರುವಂತಹ ವ್ಯವಸ್ಥೆಗಳ ಕಲ್ಪಿಸುವಲ್ಲಿ ಮುಂದಾಗಬೇಕು ಎಂದರು. ನಾಡಹಬ್ಬ ದಸರಾ ರಾಜ್ಯದ ಎಲ್ಲೆಡೆ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇಂತಹ ಸಮಯದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ನಡೆಸುವಂಥ ಕವಿಗೋಷ್ಠಿಗಳು ತುಂಬಾ ಅರ್ಥಪೂರ್ಣವಾಗಿದೆ. ಅರಸರ ಕಾಲದಲ್ಲಿ ನಿರ್ಮಾಣಗೊಂಡ ಮಹಾಂತಿ ಮಠದ ಚಂಪಕ ಸರಸು ಕೊಳದ ಸಮಗ್ರ ಅಭಿವೃದ್ಧಿ ಮೂಲಕ ಪ್ರವಾಸಿ ತಾಣವನ್ನಾಗಿಸುವ ಮಹಾದಾಸೆ ನನ್ನದು ಎಂದರು. ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಸಮಾಜದ ವ್ಯವಸ್ಥೆಗಳು ಹಾಳಾದರೆ ಅದನ್ನು ಸರಿಪಡಿಸುವಂಥ ಶಕ್ತಿ ಇರುವುದು ಸಾಹಿತ್ಯಕ್ಕೆ ಮಾತ್ರ. ಕವಿಗಳು ಸಾಹಿತಿಗಳು, ಕಾದಂಬರಿಕಾರರು, ಕಥೆಗಾರರು, ಪತ್ರಕರ್ತರು ಹೀಗೆ ಅಕ್ಷರದೊಂದಿಗೆ ವ್ಯವಹರಿಸುವಂತಹ ಎಲ್ಲರೂ ಸಮಾಜ ಹಾಗೂ ಸರ್ಕಾರಗಳು ತಪ್ಪು ದಾರಿಯಲ್ಲಿ ನಡೆದಾಗ ತಿದ್ದಿ, ಮಾರ್ಗದರ್ಶನ ನೀಡುವಂಥ ಶಕ್ತಿ ಬರಹ- ಬರಹಗಾರರಿಗೆ ಇದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಾ.ಸೌಮ್ಯ, ಡಾ.ವಿನಯ್ ಶೇಖರ್, ಜಲತಜ್ಞ ಹರೀಶ್ ನಾವತಿ ಸಾಗರ, ಕುಮಾರಿ ಪ್ರತೀಕ್ಷ ಜೋಯಿಸ್, ಬರಹಗಾರ ಬಸನಗೌಡ ಹೆಬ್ಬಳಗೆರೆ ಅವರನ್ನು ಸನ್ಮಾನಿಸಲಾಯಿತು. ಕಸಾಪ ಅಧ್ಯಕ್ಷ ಬಿ.ಡಿ. ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಆನಂದಪುರ ಗ್ರಾಪಂ ಅಧ್ಯಕ್ಷ ಮೋಹನ್‌ಕುಮಾರ್, ಆಚಾಪುರ ಗ್ರಾಪಂ ಅಧ್ಯಕ್ಷ ಕಲೀಮುಲ್ಲಾ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡಪ್ಪ ಜೋಗಿ, ರಾಷ್ಟ್ರೀಯಮಟ್ಟದ ಜಾನಪದ ಕಲಾವಿದ ಜಿ.ಸಿ. ಮಂಜಪ್ಪ ಕಣ್ಣೂರ್, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಗುಡುವಿ ಸ್ವಾಮಿರಾವ್, ಇತಿಹಾಸ ಪರಂಪರೆ ಉಳಿಸಿ ಟ್ರಸ್ಟ್ ಅಧ್ಯಕ್ಷ ಜಯಾವುಲ್ಲಾ, ಉದಯ ದೇಶಪಾಂಡೆ, ಜ್ಯೋತಿ ಕೃಷ್ಣಮೂರ್ತಿ, ಆಶಾ ಮಹೇಶ್, ಜ್ಯೋತಿ ರಘು ಇದ್ದರು. - - - -21ಎಎನ್‌ಪಿ1: ಆನಂದಪುರದಲ್ಲಿ ದಸರಾ ಕವಿಗೋಷ್ಠಿಯಲ್ಲಿ ಡಾ.ಸೌಮ್ಯ, ಡಾ.ವಿನಯ್ ಶೇಖರ್, ಜಲತಜ್ಞ ಹರೀಶ್ ನಾವತಿ ಸಾಗರ, ಕುಮಾರಿ ಪ್ರತೀಕ್ಷಾ ಜೋಯಿಸ್, ಬರಹಗಾರ ಬಸನಗೌಡ ಹೆಬ್ಬಳಗೆರೆ ಅವರನ್ನು ಸನ್ಮಾನಿಸಲಾಯಿತು.