ಗದಗ: ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ನಿರಂತರ ಓಲೈಕೆ ರಾಜಕಾರಣ ಮಾಡುತ್ತ ಬಂದಿದ್ದು, ಹಿಂದುಳಿದವರು, ಬಡವರು, ರೈತರ ಸಾಲದ ಬಡ್ಡಿ ಮನ್ನಾ ಮಾಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಆತ್ಮಹತ್ಯೆಗೆ ಸರಿಯಾಗಿ ಪರಿಹಾರ ಕೊಡುತ್ತಿಲ್ಲ. ಬೆಳೆವಿಮೆ ನೀಡುತ್ತಿಲ್ಲ. ಶೇ. 80ರಷ್ಟು ರೈತರು ಸಂಕಷ್ಟದಲ್ಲಿದ್ದಾರೆ. ಜನವಿರೋಧಿ ನೀತಿಯನ್ನು ಈ ಸರ್ಕಾರ ಮಾಡುತ್ತಿದೆ ಎಂದ ಅವರು, ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ ಎಂದು ಆಗ್ರಹಿಸಿದರು.
ನಾಯಕತ್ವ ಬದಲಾವಣೆಯ ಗೊಂದಲ ಕುರಿತು ಪ್ರತಿಕ್ರಿಯಿಸಿದ ಅವರು, ಯತೀಂದ್ರ ಅವರು ಯಾಕೆ ಹೇಳುತ್ತಾರೊ ಗೊತ್ತಿಲ್ಲ. ಸಿಎಂ ಹಲವಾರು ಬಾರಿ ಹೇಳಿದರೂ ಅವರ ಮಗನೇ ಸರ್ಟಿಫಿಕೆಟ್ ಕೊಡುತ್ತಿದ್ದಾರೆ. ಮಗನ ಸರ್ಟಿಫಿಕೆಟ್ ಇಟ್ಟುಕೊಂಡು ರಾಜ್ಯ ಆಳುವ ಅಗತ್ಯ ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಏನು ಮಾಡುತ್ತಿದೆ ಎಂಬುದು ತಿಳಿಯುತ್ತಿಲ್ಲ. ಕೂಡಲೇ ನಾಟಕ ಬಂದ್ ಮಾಡಿ ರಾಜ್ಯದ ಅಭಿವೃದ್ಧಿ ಕಡೆ ಸರ್ಕಾರ ಗಮನ ಕೊಡಲಿ ಎಂದರು.ಗದಗನಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಿಸುವ ಕುರಿತು, ನಾನು ಮಾನವ ಸಂಪನ್ಮೂಲ ಸಚಿವರ ಜತೆಗೆ ಮಾತನಾಡಿದ್ದೇನೆ. ಜಾಗದ ಸಮಸ್ಯೆ ಪರಿಹರಿಸಿ ಕಳುಹಿಸಿದರೆ ಬರುವ ಶೈಕ್ಷಣಿಕ ವರ್ಷದಲ್ಲಿ ಕೇಂದ್ರಿಯ ವಿದ್ಯಾಲಯ ಆರಂಭಿಸುವುದಾಗಿ ಹೇಳಿದ್ದಾರೆ ಎಂದರು.
ಲಕ್ಕುಂಡಿಯಲ್ಲಿ ಉತ್ಖನನ ನಡೆಸುತ್ತಿರುವ ಕುರಿತು, ಉತ್ಖನನ ಈ ಹಿಂದೆ ನಡೆದಿದ್ದರಿಂದ ಪ್ರಸಿದ್ಧಿಗೆ ಬಂದಿದೆ. ಈಗ ಊಹಾಪೋಹ ಕೇಳಿ ಬರುತ್ತಿವೆ. ಅದು ಏನಾಗುತ್ತದೆ ಗೊತ್ತಿಲ್ಲ. ಲಕ್ಕುಂಡಿಯನ್ನು ಯುನೆಸ್ಕೊಗೆ ಸೇರಿಸುವ ಪ್ರಯತ್ನ ಒಳ್ಳೆಯದು. ಅದು ಸೇರಿದರೆ ಪ್ರವಾಸೋದ್ಯಮ ದೃಷ್ಟಿಯಿಂದ ಅನುಕೂಲ ಆಗುತ್ತದೆ ಎಂದರು. ಮೆಟ್ರೊ ದರ ಏರಿಕೆ ವಾಪಸ್ ಪಡೆಯಲಿ: ಮೆಟ್ರೊ ದರ ಏರಿಕೆ ಕೇಂದ್ರಕ್ಕೆ ಸಂಬಂಧ ಇಲ್ಲ. ಅದು ಒಂದು ಕಂಪನಿ. ಇದರ ಎಂಡಿ ಅಂತಿಮ ತೀರ್ಮಾನ ಮಾಡುತ್ತಾರೆ. ರಾಜ್ಯ ಸರ್ಕಾರ ಹೆಚ್ಚಳ ಮಾಡಿರುವ ತೀರ್ಮಾನವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.