ಸಿದ್ಧರಾಮೇಶ್ವರ ವಿದ್ಯಾಸಂಸ್ಥೆ ಇನ್ನಷ್ಟು ಬೆಳೆಯಲಿ: ಶಾಸಕ ಯೋಗೇಶ್ವರ್

KannadaprabhaNewsNetwork |  
Published : Feb 08, 2026, 02:30 AM IST
ಪೊಟೋ೬ಸಿಪಿಟಿ೨: ತಾಲೂಕಿನ ಬೇವೂರು ಶ್ರೀ ಸಿದ್ದರಾಮೇಶ್ವರ ವಿದ್ಯಾಸಂಸ್ಥೆಯ ಸಮೂಹ ಶಿಕ್ಷಣ ಸಂಸ್ಥೆಗಳ ೬೦ನೇ ವರ್ಷದ ಸಂಭ್ರಮೋತ್ಸವ ಸಮಾರಂಭವನ್ನು ಶಾಸಕ ಸಿ.ಪಿ.ಯೋಗೇಶ್ವರ್ ಹಾಗೂ ಇತರರು ಉದ್ಘಾಟಿಸಿದರು. | Kannada Prabha

ಸಾರಾಂಶ

ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ಸತೀಶ್, ಸಮಾಜ ಸೇವಕ ಪ್ರಭಾಕರ ರೆಡ್ಡಿ ಮತ್ತು ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷೆ ಪವಿತ್ರಾ ರೆಡ್ಡಿ ಹಾಗೂ ಪುಣ್ಯ ಆಸ್ಪತ್ರೆಯ ವೈದ್ಯ ದಂಪತಿ ಡಾ.ಎಚ್.ಶಿವಪ್ಪ ಮತ್ತು ಡಾ. ಎಚ್.ಎಲ್. ಪದ್ಮಾವತಿ ಅವರನ್ನು ವಿದ್ಯಾಸಂಸ್ಥೆಯಿಂದ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಆರಂಭವಾದ ಬೇವೂರು ಶ್ರೀ ಸಿದ್ಧರಾಮೇಶ್ವರ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ನಡೆಸಿದ ಸಾಕಷ್ಟು ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿಗಳು ಸಹಕರಿಸಬೇಕು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ತಾಲೂಕಿನ ಬೇವೂರು ಶ್ರೀ ಸಿದ್ಧರಾಮೇಶ್ವರ ವಿದ್ಯಾಸಂಸ್ಥೆಯ ಸಮೂಹ ಶಿಕ್ಷಣ ಸಂಸ್ಥೆಗಳ ೬೦ನೇ ವರ್ಷದ ಸಂಭ್ರಮೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಈ ವಿದ್ಯಾಸಂಸ್ಥೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಶ್ರಮಿಸಬೇಕಿದ್ದು, ಅದಕ್ಕಾಗಿ ಈ ಸಂಸ್ಥೆಯಲ್ಲಿ ವಿದ್ಯೆ ಕಲಿತ ಹಿರಿಯ ವಿದ್ಯಾರ್ಥಿಗಳು ಮತ್ತು ಸಂಸ್ಥೆಯವರು ಶ್ರಮಿಸಬೇಕಿದೆ. ನಾನೂ ಸಹ ವಿದ್ಯಾಸಂಸ್ಥೆಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಸರ್ಕಾರದಿಂದ ಅನುದಾನವನ್ನು ತರಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಮರಿಗೌಡ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕ ಎಚ್.ಎಂ. ನಾಗೇಶ್ ಮಾತನಾಡಿ, ನಾನೂ ಸಹ ಈ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿ. ನಮ್ಮ ಭವಿಷ್ಯವನ್ನು ರೂಪಿಸಿರುವ ಶಾಲೆಯ ಅಭಿವೃದ್ಧಿಗೆ ಶ್ರಮಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೂ ಅಕ್ಷರ ಜ್ಞಾನ ಸಿಗಬೇಕು ಎಂಬ ನಿಟ್ಟಿನಲ್ಲಿ ಲಿಂಗೈಕ್ಯ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಆರಂಭಿಸಿದ ವಿದ್ಯಾಸ್ಥಂಸ್ಥೆಗೆ ೬೦ ವರ್ಷ ತುಂಬಿದ್ದು, ಸ್ವಾಮೀಜಿಗಳು ಸಮಾಜಕ್ಕೆ ಏನೆಲ್ಲಾ ಕೊಡುಗೆ ನೀಡಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ನಗೆ ಹಬ್ಬ ನಡೆಸಿಕೊಟ್ಟ ಪ್ರಖ್ಯಾತ ವಾಗ್ಮಿ ಪ್ರೊ. ಕೃಷ್ಣೇಗೌಡ ಮಾತನಾಡಿ, ಇಂದು ಯುವಕರಲ್ಲಿ ದುಡಿದು ತಿನ್ನುವ ಮನಸ್ಥಿತಿ ಇಲ್ಲವಾಗಿದೆ. ಗ್ರಾಮೀಣ ಭಾಗದಲ್ಲಿ ಕೃಷಿಗೆ, ಹೈನೋದ್ಯಮಕ್ಕೆ ಕೆಲಸಗಾರರು ಸಿಗುತ್ತಿಲ್ಲ. ಪೀಣ್ಯದಲ್ಲಿನ ಇಂಡಸ್ಟ್ರಿಯಲ್‌ನಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಆದರೆ ದುಡಿಯಲು ಮುಂದಾಗುತ್ತಿಲ್ಲ ಎಂದರು.

ಹಿಂದೆ ಶಿಕ್ಷಣ ಪಡೆಯುವುದೇ ದೊಡ್ಡ ಸಾಧನೆ ಆಗಿತ್ತು. ಆದರೆ ಇಂದು ಆಧುನಿಕತೆ ಬೆಳೆದಂತೆ ಶಿಕ್ಷಣ ಇಲ್ಲದೆ ಜೀವನ ಇಲ್ಲದಂತಾಗಿದ್ದು, ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಶ್ರಮಿಸುತ್ತಾರೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿತು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಪೋಷಕರಿಗೆ ಆಸರೆಯಾಗಬೇಕು ಎಂದರು.

ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಯೋಗೀಶ್‌ಗೌಡ ಮಾತನಾಡಿದರು.

ಸಮಾರಂಭದಲ್ಲಿ ಗಿಚ್ಚಿಗಿಲಿಗಿಲಿ ಹಾಸ್ಯ ಕಲಾವಿದರಾದ ವಿನೋದ್‌ ಗೊಬ್ರಗಾಲ ಮತ್ತು ಕಿರಣ್ ಅವರ ಹಾಸ್ಯ ಕಾರ್ಯಕ್ರಮ ನಗೆಯ ಹೊನಲನ್ನು ತರಿಸಿತ್ತು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾ ನಡೆಸಿಕೊಟ್ಟರು.

ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ಸತೀಶ್, ಸಮಾಜ ಸೇವಕ ಪ್ರಭಾಕರ ರೆಡ್ಡಿ ಮತ್ತು ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷೆ ಪವಿತ್ರಾ ರೆಡ್ಡಿ ಹಾಗೂ ಪುಣ್ಯ ಆಸ್ಪತ್ರೆಯ ವೈದ್ಯ ದಂಪತಿ ಡಾ.ಎಚ್.ಶಿವಪ್ಪ ಮತ್ತು ಡಾ. ಎಚ್.ಎಲ್. ಪದ್ಮಾವತಿ ಅವರನ್ನು ವಿದ್ಯಾಸಂಸ್ಥೆಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕರುಣ್ ಎಂ.ಎ. ಆನಂದ್, ತೌಟನಹಳ್ಳಿ ಶಿವಲಿಂಗಯ್ಯ, ನಿವೃತ್ತ ಆಯುಕ್ತ ಬೈರನಾಯ್ಕನಹಳ್ಳಿ ರಾಮಚಂದ್ರು, ಅನು, ಚಿಕ್ಕೇಗೌಡ, ವಿದ್ಯಾಸಂಸ್ಥೆಯ ಅಧ್ಯಕ್ಷ ದೊಡ್ಡಮಾದೇಗೌಡ, ಉಪಾಧ್ಯಕ್ಷ ಜಿತೇಂದ್ರ, ಖಜಾಂಚಿ ಮನು ಬಿ.ಕೆ. ಇತರರು ಇದ್ದರು.

ಪೊಟೋ೬ಸಿಪಿಟಿ೨: ತಾಲೂಕಿನ ಬೇವೂರು ಶ್ರೀ ಸಿದ್ದರಾಮೇಶ್ವರ ವಿದ್ಯಾಸಂಸ್ಥೆಯ ಸಮೂಹ ಶಿಕ್ಷಣ ಸಂಸ್ಥೆಗಳ ೬೦ನೇ ವರ್ಷದ ಸಂಭ್ರಮೋತ್ಸವ ಸಮಾರಂಭವನ್ನು ಶಾಸಕ ಸಿ.ಪಿ.ಯೋಗೇಶ್ವರ್ ಹಾಗೂ ಇತರರು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು
ಸಮಸ್ಯೆ ಬಗೆ ಹರಿಸದಿದ್ದರೇ ತೀವ್ರ ಹೋರಾಟ