ಕಾರವಾರ: ಮಹಿಳೆಯರು ಕರ್ತವ್ಯ ನಿರ್ವಹಿಸುವ ಎಲ್ಲ ಸ್ಥಳಗಳಲ್ಲಿ ಆಂತರಿಕ ದೂರು ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಸೂಚನೆ ನೀಡಿದರು.
ಮಹಿಳೆಯರು ಎಲ್ಲ ಸ್ಥಳಗಳಲ್ಲಿಯೂ ಸುರಕ್ಷಿತವಾಗಿರಬೇಕು ಎನ್ನುವ ಉದ್ದೇಶದಿಂದ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯನ್ನು ಜಾರಿಗೆ ತಂದಿದ್ದು, ಮಹಿಳೆಯರು ಕೆಲಸ ನಿರ್ವಹಿಸುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲೂ ಈ ಸಮಿತಿಗಳನ್ನು ರಚಿಸಿ, ನಿಗದಿತವಾಗಿ ಸಭೆಗಳನ್ನು ನಡೆಸಿ ಮಹಿಳೆಯರ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದರು.
ಈ ಕಾಯ್ದೆ ಜಾರಿಗೆ ಬಂದು 13 ವರ್ಷಗಳಾದರೂ ಅನೇಕ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಈ ಸಮಿತಿಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಅವರು, ಈ ಕಾಯಿದೆಯ ಕುರಿತಂತೆ ವ್ಯಾಪಕ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಮತ್ತು ಇದುವರೆಗೆ ಸಮಿತಿಯನ್ನು ರಚಿಸದ ಖಾಸಗಿ ಸಂಸ್ಥೆಗಳ ಲೈಸೆನ್ಸ್ ರಿನೀವಲ್ ಸೇರಿದಂತೆ ಅಗತ್ಯ ನವೀಕರಣಗಳನ್ನು ಮಾಡದಂತೆ ಸೂಚನೆ ನೀಡಿದರು.ಮಹಿಳೆಯರು ತಾವು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಯಾವುದೇ ರೀತಿಯ ದೌರ್ಜನ್ಯಗಳಾದಲ್ಲಿ ಯಾವುದೇ ಭಯಪಡದೇ ಅದನ್ನು ಪ್ರಶ್ನಿಸಬೇಕು ಮತ್ತು ಈ ಸಮಿತಿಗೆ ದೂರು ನೀಡಬೇಕು, ಮಹಿಳೆಯರು ನೀಡುವ ದೂರುಗಳನ್ನು ಸಮಿತಿಯಲ್ಲಿ ಸೂಕ್ತ ರೀತಿಯಲ್ಲಿ ವಿಚಾರಣೆ ನಡೆಸಿ ಸಂತ್ರಸ್ತ ಮಹಿಳೆಗೆ ನ್ಯಾಯ ಒದಗಿಸಬೇಕು ಎಂದ ಅವರು, ಮಹಿಳೆಯರು ಈ ಕಾಯಿದೆಯ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಬೇಕು ಎಂದರು.