ಕುಕನೂರು:
ಒಳ ಮೀಸಲಾತಿ ಜಾರಿಯಾಗದೆ ಇರುವುದರಿಂದ ನೇಮಕಾತಿಗೆ ತಡೆ ನೀಡಿದ್ದ ಸರ್ಕಾರ ಮೀಸಲಾತಿ ಜಾರಿಗೊಳಿಸಿದ್ದರಿಂದ ಖಾಲಿ ಇರುವ 2 ಲಕ್ಷ ಸರ್ಕಾರಿ ಹುದ್ದೆಗಳಲ್ಲಿ ಶೀಘ್ರ 80 ಸಾವಿರ ಹುದ್ದೆ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.ತಾಲೂಕಿನ ಬಳಗೇರಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 2 ವರ್ಷದಲ್ಲಿ ಅವಶ್ಯಕ ಎಲ್ಲ ಸರ್ಕಾರಿ ಹುದ್ದೆ ಭರ್ತಿ ಮಾಡಲಾಗುವುದು. ಶಿಕ್ಷಕರ ಭರ್ತಿ ಕಾರ್ಯ ಸಹ ಮಾಡುತ್ತೇವೆ ಎಂದರು.
ಯಲಬುರ್ಗಾ ಕ್ಷೇತ್ರ ಆರ್ಥಿಕವಾಗಿ ಸದೃಢ ಇಲ್ಲದ ಕಾರಣ, ಇಲ್ಲಿನ ಮಕ್ಕಳು ಉನ್ನತ ಶಿಕ್ಷಣ ಪಡೆಯಲೆಂದು ಶೈಕ್ಷಣಿಕವಾಗಿ ಕ್ಷೇತ್ರವನ್ನು ಸದೃಢ ಮಾಡಿದ್ದೇನೆ. 65 ಪ್ರೌಢಶಾಲೆ, 7 ಜೂನಿಯರ್ ಕಾಲೇಜ್, 17 ಮೊರಾರ್ಜಿ ವಸತಿ ಶಾಲೆ, ಕಾರ್ಮಿಕ ವಸತಿ ಶಾಲೆ, ಎಂಜಿನಿಯರ್ ಕಾಲೇಜ್, 6 ಸರ್ಕಾರಿ ಐಟಿಐ ಕಾಲೇಜ್ ಇವೆ. ಅಲ್ಲದೆ ₹ 250 ಕೋಟಿ ವೆಚ್ಚದಲ್ಲಿ ನೂತನ ಕೌಶಲ್ಯ ಕೇಂದ್ರ, 10 ಕೆಪಿಎಸ್ಸಿ ಶಾಲೆ ಮಂಜೂರಾಗಲಿವೆ. ನರ್ಸಿಂಗ್ ಕಾಲೇಜ್ ಆರಂಭವಾಗಿದ್ದು ಕ್ಷೇತ್ರಕ್ಕೆ 4 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾಗಿದ್ದು ತಲಾ ₹ 4 ಕೋಟಿ ಕಟ್ಟಡಕ್ಕೆ ಅನುದಾನ ಬಂದಿದೆ ಎಂದರು.ಜಮೀನಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ಭಾಗದ ರಸ್ತೆಗಳನ್ನು ನರೇಗಾ ಯೋಜನೆಯಲ್ಲಿ ಸೇರಿಸಿ ರಸ್ತೆ ನಿರ್ಮಿಸಲಾಗುವುದು. ಇದಕ್ಕೆ ರೈತರು ಜಮೀನಿನಲ್ಲಿ ರಸ್ತೆ ಮಾಡಲು ಒಪ್ಪಿಗೆ ನೀಡಬೇಕು. ಮುಂದಿನ ವರ್ಷ ಕ್ಷೇತ್ರದಲ್ಲಿ 300 ಕಿ.ಮೀ ಜಮೀನು ರಸ್ತೆ ಮಾಡಲಾಗುವುದು. ಕ್ಷೇತ್ರದಲ್ಲಿ ಒಂದು ಸಹ ಗುಂಡಿ ಇರದ ರಸ್ತೆಗಳಿವೆ. ಎಲ್ಲ ರಸ್ತೆಗಳ ಮರು ಡಾಂಬರೀಕರಣಕ್ಕೆ ₹ 100 ಕೋಟಿ ಮಂಜೂರಾಗಿದೆ ಎಂದರು.
1% ಒಳಮೀಸಲಾತಿ:ಕುಕನೂರು ಪಟ್ಟಣದ ಸುಡುಗಾಡು ಸಿದ್ದರ ಕಾಲನಿಯಲ್ಲಿ ಸುಡುಗಾಡು ಸಿದ್ದರ ಭವನ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿದ ರಾಯರಡ್ಡಿ, ಅಲೆಮಾರಿ ಜನಾಂಗಕ್ಕೆ ಒಳಮೀಸಲಾತಿ 1% ನೀಡಲು ಸರ್ಕಾರಕ್ಕೆ ಸೂಚಿಸುತ್ತೇನೆ ಎಂದರು.
ಈ ವೇಳೆ ತಹಸೀಲ್ದಾರ್ ಎಚ್. ಪ್ರಾಣೇಶ, ತಾಲೂಕು ವೈದ್ಯಾಧಿಕಾರಿ ನೇತ್ರಾವತಿ ಹಿರೇಮಠ, ಪ್ರಮುಖರಾದ ಯಂಕಣ್ಣ ಯರಾಶಿ, ಹನುಮಂತಗೌಡ ಚಂಡೂರು, ಅಶೋಕ ತೋಟದ, ಶಿವನಗೌಡ ದಾನರಡ್ಡಿ, ಹಂಪಯ್ಯಸ್ವಾಮಿ, ಮಂಜುನಾಥ ಕಡೆಮನಿ, ವೀರಣ್ಣ ಹಳ್ಳಿಕೇರಿ, ಮೇಘರಾಜ ಬಳಗೇರಿ, ಸಂಗಮೇಶ ಗುತ್ತಿ, ಶರಣಪ್ಪ ಗಾಂಜಿ, ಭೀಮಣ್ಣ ನಡುಲಮನಿ, ಗ್ರಾಪಂ ಸದಸ್ಯ ಯಮನೂರಪ್ಪ ಕಟ್ಟಿಮನಿ, ಗುದ್ನೇಶ ಹುಂಡಿ ಇತರರಿದ್ದರು.ಗ್ರಾಮೀಣ ಸೇವೆ ಮಾಡದಿದ್ದರೆ ಡಿಗ್ರಿ ರದ್ದುಗ್ರಾಮೀಣ ಭಾಗದ ಮೀಸಲಾತಿ ಪಡೆದು ನೀಟ್‌ನಲ್ಲಿ ವೈದ್ಯಕೀಯ ಸೀಟು ಪಡೆದು ಪದವಿ ಪಡೆದ ವೈದ್ಯಕೀಯ ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ವೈದ್ಯರ ಕೊರತೆ ಉಂಟಾಗಿದೆ. ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ಎರಡು ವರ್ಷ ಸೇವೆ ಸಲ್ಲಿಸಬೇಕೆಂದು ಸರ್ಕಾರ ಕಾನೂನು ಜಾರಿಗೊಳಿಸಿದೆ. ಸೇವೆ ಮಾಡದಿದ್ದರೆ ಅವರ ಪದವಿಯನ್ನೆ ರದ್ದು ಮಾಡುವ ನಿಯಮ ಜಾರಿಗೆ ತರಲಾಗಿದೆ ಎಂದು ಬಸವರಾಜ ರಾಯರಡ್ಡಿ ಹೇಳಿದರು.