ಒಳ ಮೀಸಲಾತಿ ಪ್ರಮಾಣಪತ್ರ ವಿಳಂಬ: ಡಿಸಿಎಂಗೆ ಎಂಎಲ್ಸಿ ಪತ್ರ

KannadaprabhaNewsNetwork |  
Published : Jun 25, 2026, 01:15 AM IST
37 | Kannada Prabha

ಸಾರಾಂಶ

ರಾಜ್ಯ ಸರ್ಕಾರವು ಪ.ಜಾತಿಯ ವಿವಿಧ ಜಾತಿಗಳಿಗೆ ಒಳ ಮೀಸಲಾತಿ ಘೋಷಿಸಿ ಅಧಿಕೃತವಾಗಿ ಜಾರಿ ಮಾಡಿದೆ. ಇದರನ್ವಯ ಎಸ್ಸಿ-ಎ, ಎಸ್ಸಿ-ಬಿ ಮತ್ತು ಎಸ್ಸಿ- ಸಿ ಎಂದು ವಿಭಜಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ಜಾತಿಗಳಿಗೆ ಅನ್ವಯಿಸುವಂತೆ ಪ್ರತ್ಯೇಕವಾದ ಹೊಸ ಜಾತಿ ಪ್ರಮಾಣ ಪತ್ರ ಪಡೆಯಬೇಕಿದೆ. ಆದರೆ, ರಾಜ್ಯದ ವಿವಿಧ ತಾಲೂಕು ಕಚೇರಿಯಲ್ಲಿ ಈ ಪ್ರಮಾಣ ಪತ್ರ ನೀಡಲು ವಿಪರೀತ ವಿಳಂಬ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯದಲ್ಲಿ ಪ.ಜಾತಿಯ ಅಭ್ಯರ್ಥಿಗಳಿಗೆ ಒಳ ಮೀಸಲಾತಿ ಅನ್ವಯ ಹೊಸ ಜಾತಿ ಪ್ರಮಾಣಪತ್ರ ನೀಡುವಲ್ಲಿ ತಾಲೂಕು ಕಚೇರಿಗಳು ತೀವ್ರ ವಿಳಂಬ ಮಾಡುತ್ತಿದ್ದು, ಇದರಿಂದ ಸಾವಿರಾರು ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದು ತ್ವರಿತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರವು ಪ.ಜಾತಿಯ ವಿವಿಧ ಜಾತಿಗಳಿಗೆ ಒಳ ಮೀಸಲಾತಿ ಘೋಷಿಸಿ ಅಧಿಕೃತವಾಗಿ ಜಾರಿ ಮಾಡಿದೆ. ಇದರನ್ವಯ ಎಸ್ಸಿ-ಎ, ಎಸ್ಸಿ-ಬಿ ಮತ್ತು ಎಸ್ಸಿ- ಸಿ ಎಂದು ವಿಭಜಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ಜಾತಿಗಳಿಗೆ ಅನ್ವಯಿಸುವಂತೆ ಪ್ರತ್ಯೇಕವಾದ ಹೊಸ ಜಾತಿ ಪ್ರಮಾಣ ಪತ್ರ ಪಡೆಯಬೇಕಿದೆ. ಆದರೆ, ರಾಜ್ಯದ ವಿವಿಧ ತಾಲೂಕು ಕಚೇರಿಯಲ್ಲಿ ಈ ಪ್ರಮಾಣ ಪತ್ರ ನೀಡಲು ವಿಪರೀತ ವಿಳಂಬ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕಂಟಕ:

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈಗಾಗಲೇ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸಿದೆ. ನನ್ನ ಗಮನಕ್ಕೆ ಬಂದಿರುವ ಪ್ರಕಾರ ಸರಿಸುಮಾರು 15,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಪ್ರವೇಶಾತಿಗಾಗಿ ಇನ್ನೂ ಹೊಸ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿಲ್ಲ. ಒಂದು ವಾರದೊಳಗೆ ಈ ಪ್ರಮಾಣ ಪತ್ರ ಸಿಗದಿದ್ದರೆ, ಈ ವಿದ್ಯಾರ್ಥಿಗಳು ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಪ್ರಮುಖ ವೃತ್ತಿಪರ ಕೋರ್ಸ್‌ ಗೆ ಸಾಮಾನ್ಯ ಅಭ್ಯರ್ಥಿಗಳಾಗಿ ಪ್ರವೇಶ ಪಡೆಯಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಮಾತ್ರವಲ್ಲದೆ, ಪ್ರಸ್ತುತ ಪೊಲೀಸ್ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳೂ ಚಾಲ್ತಿಯಲ್ಲಿದ್ದು, ಅರ್ಜಿ ಸಲ್ಲಿಸಲು ಒಳ ಮೀಸಲಾತಿ ಪ್ರಕಾರ ಪ.ಜಾತಿ ಪ್ರಮಾಣಪತ್ರಗಳ ಅಗತ್ಯವಿದೆ. ಪ್ರಮಾಣಪತ್ರ ವಿಳಂಬದಿಂದಾಗಿ ಅರ್ಹ ಅಭ್ಯರ್ಥಿಗಳು ಉದ್ಯೋಗದ ಅವಕಾಶಗಳಿಂದ ವಂಚಿತರಾಗುವ ಭೀತಿ ಎದುರಾಗಿದೆ.

ಇದು ಅತ್ಯಂತ ಗಂಭೀರವಾದ ವಿಷಯವಾಗಿದ್ದು, ಕಂದಾಯ ಸಚಿವರು ತಕ್ಷಣವೇ ಮಧ್ಯಪ್ರವೇಶಿಸಬೇಕು. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ತಹಸೀಲ್ದಾರರಿಗೆ ಸೂಚನೆ ನೀಡಿ, ಇಂತಹ ಅರ್ಜಿಯನ್ನು ಯುದ್ಧೋಪಾದಿಯಲ್ಲಿ ವಿಲೇವಾರಿ ಮಾಡಲು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ಶಾಸಕರು ವಿನಂತಿಸಿದ್ದಾರೆ. ತಪ್ಪಿದರೆ ಒಳ ಮೀಸಲಾತಿ ಘೋಷಣೆಯಾಗಿದ್ದರೂ, ಪ.ಜಾತಿಯ ಮಕ್ಕಳಿಗೆ ಅದರ ನೈಜ ಪ್ರಯೋಜನ ಸಿಗದಂತಾಗಲಿದೆ ಎಂದು ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಬಿ.ಸುರೇಶ ಗೌಡ ವಿರುದ್ಧ ಮಾನ ಹಾನಿಕರ ಪೋಸ್ಟ್‌
ಪ್ರೌಢಶಾಲೆಗೆ ಪಿಯು ಉಪನ್ಯಾಸಕರ ನಿಯೋಜನೆಗೆ ತೀವ್ರ ವಿರೋಧ