ಒಳ ಮೀಸಲಾತಿ ಜಾರಿ; ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ

KannadaprabhaNewsNetwork |  
Published : Aug 25, 2025, 01:00 AM IST
ಒಳಮೀಸಲಾತಿ ಜಾರಿಸಂಭ್ರಮಾಚರಣೆ | Kannada Prabha

ಸಾರಾಂಶ

ಮಾದಿಗ ಸಮುದಾಯ ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸೇರಿ ಎಲ್ಲ ರಂಗದಲ್ಲೂ ಅಭಿವೃದ್ಧಿ ವಂಚಿತರಾಗಿದ್ದೇವೆ. ಹಿಂದಿನ ಸರ್ಕಾರದಲ್ಲಿ ಒಳಮೀಸಲಾತಿ ಜಾರಿಯಾಗಬೇಕಿತ್ತು. ನಿಖರ ದತ್ತಾಂಶ ಇಲ್ಲ ಎಂದು ಅನ್ಯಾಯ ಮಾಡಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಿದ ಹಿನ್ನೆಲೆ ನಗರದ ಬಾಬು ಜಗಜೀವನರಾಂ ಬಡಾವಣೆಯಲ್ಲಿ ಡಾ. ಬಾಬು ಜಗಜೀವನರಾಂ ಯುವಕರ ಕಲಾ ಸಂಘದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.

ಡಾ.ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಶಿವಮೂರ್ತಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಮಾದಿಗ ಸಮುದಾಯ ಸುಮಾರು 30 ವರ್ಷಗಳಿಂದ ಒಳಮೀಸಲಾತಿ ಜಾರಿಗಾಗಿ ಹೋರಾಟ ನಡೆಸಿಕೊಂಡು ಬಂದಿದ್ದು, ಇದರ ಫಲವಾಗಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯೂರ್ತಿಗಳಾದ ಚಂದ್ರಚೂಡ ನೇತೃತ್ವದ ಏಳು ಸದಸ್ಯರ ಪೀಠವು 2024 ಆ. 1ರಂದು ಒಳ ಮೀಸಲಾತಿ ಜಾರಿ ಮಾಡುವಂತೆ ಆಯಾಯ ರಾಜ್ಯಗಳಿಗೆ ಆದೇಶ ಮಾಡಿತು. ಹಿಂದಿನ ಆಯೋಗದ ವರದಿಯಲ್ಲಿ ನಿಖರ ದತ್ತಾಂಶಗಳು ಇಲ್ಲದ ಕಾರಣ ಹಿಂದಿನ ಸರ್ಕಾರಗಳು ಇದನ್ನು ಅವೈಜ್ಞಾನಿಕ ಎಂದು ಹೇಳಿ ತಿರಸ್ಕಾರ ಮಾಡಿದವು. ನಂತರ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೋಹನ್ ದಾಸ್ ಆಯೋಗ ನೇಮಿಸಿತು. ಈ ಆಯೋಗ ಸುಮಾರು 6 ತಿಂಗಳ ಕಾಲ ಸುದೀರ್ಘ ಸಮೀಕ್ಷೆ ಮಾಡಿ ವೈಜ್ಞಾನಿಕ ದತ್ತಾಂಶವನ್ನು ಸಂಗ್ರಹಿಸಿ, ಆ. 4 ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತು. ಸರ್ಕಾರವು ಸಚಿವ ಸಂಪುಟದಲ್ಲಿ ಪರಿಷ್ಕರಿಸಿ 5 ವಿಭಾಗಗಳಾಗಿದ್ದ ವರದಿಯನ್ನು 3 ವರ್ಗಗಳಾಗಿ ವಿಂಗಡಿಸಿ ಎಡಗೈ ಸಮುದಾಯ ಹಾಗೂ ಬಲಗೈ ಸಮುದಾಯಕ್ಕೆ ತಲಾ ಶೇ. 6 ರಷ್ಟು ಮೀಸಲಾತಿ ಹಾಗೂ ಇತರೆ ಜಾತಿಗಳಿಗೆ ಶೇ. 5 ರಷ್ಟು ಮೀಸಲಾತಿ ನೀಡಿರುವುದು ಸ್ವಾಗತಾರ್ಹ. ಸಮುದಾಯದ ಪರವಾಗಿ ಈ ಮೂಲಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಸಮುದಾಯದವರು ಒಳ ಮೀಸಲಾತಿಯ ಸವಲತ್ತುಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದರು

ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಬಸವನಪುರ ರಾಜಶೇಖರ್ ಮಾತನಾಡಿ, ಮಾದಿಗ ಸಮುದಾಯ ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸೇರಿ ಎಲ್ಲ ರಂಗದಲ್ಲೂ ಅಭಿವೃದ್ಧಿ ವಂಚಿತರಾಗಿದ್ದೇವೆ. ಹಿಂದಿನ ಸರ್ಕಾರದಲ್ಲಿ ಒಳಮೀಸಲಾತಿ ಜಾರಿಯಾಗಬೇಕಿತ್ತು. ನಿಖರ ದತ್ತಾಂಶ

ಇಲ್ಲ ಎಂದು ಅನ್ಯಾಯ ಮಾಡಿತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಶೇಷ ಕಾಳಜಿ ವಹಿಸಿ ಎರಡು ಸಮುದಾಯಗಳಿಗೆ ತಲಾ ಶೇ.6 ರಷ್ಟು ಒಳಮೀಸಲಾತಿ ನೀಡಿ ಸಾಮಾಜಿಕ ನ್ಯಾಯ ಕಲ್ಪಿಸಿಕೊಟ್ಟಿದ್ದಾರೆ, ಇದು ಸಮುದಾಯಕ್ಕೆ ದೊರೆತ ಜಯವಾಗಿದೆ. ಸಮುದಾಯವು ಒಳಮೀಸಲಾತಿ ಸವಲತ್ತುಗಳನ್ನು ಪಡೆದುಕೊಂಡು ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಸಾಗಬೇಕು ಎಂದರು.

ಸಂಘದ ಅಧ್ಯಕ್ಷ ಡ್ಯಾನ್ಸ್ ಬಸವರಾಜು, ಉಪಾಧ್ಯಕ್ಷ ರಾಜೇಶ್, ನಿವೃತ್ತ ಅಧಿಕಾರಿ ರೇವಣ್ಣ, ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ್, ಸುಂದರ್, ಗಿರೀಶ್, ಸ್ವಾಮಿ, ಲಿಂಗರಾಜು, ತಂಬೂರಿ ಮಹೇಶ್, ಆಕಾಶ್, ಆಟೋ ಮಂಜು, ದೀಪು, ಪ್ರಭುಸ್ವಾಮಿ, ಲಿಂಗಣ್ಣ, ಮರಪ್ಪ ಇತರರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ