ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಬಿಜೆಪಿ ದಲಿತ ನಾಯಕರ ನಿಯೋಗವು ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ವಿಳಂಬ ಕುರಿತು ಸೋಮವಾರ ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರವು ಆರ್ಥಿಕವಾಗಿ ದಿವಾಳಿ ಆಗಿದೆ. ಸರ್ಕಾರದಲ್ಲಿ 2.85 ಲಕ್ಷ ಹುದ್ದೆಗಳು ಖಾಲಿ ಇದ್ದು, ಹಣ ಇಲ್ಲದ ಕಾರಣಕ್ಕೆ ಒಳ ಮೀಸಲಾತಿಯ ಗೊಂದಲ ಸೃಷ್ಟಿಸಿ ನೇಮಕಾತಿ ಮುಂದೂಡಿದೆ ಎಂದು ಕಿಡಿಕಾರಿದರು.
ನೇಮಕಾತಿ ಇಲ್ಲದೇ ವಿದ್ಯಾವಂತ ಯುವಜನತೆ ನಿರಾಸೆ ಹಾಗೂ ಹತಾಶರಾಗಿದ್ದಾರೆ. ಒಳ ಮೀಸಲಾತಿ ಕುರಿತ ಸುಪ್ರೀಂ ಕೋರ್ಟಿನ ಆದೇಶ ಪಾಲಿಸಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರವು ವರದಿಗಳನ್ನು ಗಮನಿಸಿ ಬಳಿಕ ಒಳ ಮೀಸಲಾತಿ ಜಾರಿ ಮಾಡಬೇಕಿತ್ತು. ತರಾತುರಿಯಲ್ಲಿ ಸದನದಲ್ಲಿ ಒಳ ಮೀಸಲಾತಿ ಮಸೂದೆ ಮಂಡಿಸಿ ಚರ್ಚೆ ಇಲ್ಲದೆ ಅಂಗೀಕರಿಸಿಕೊಂಡು ಓಡಿ ಹೋದರು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಪರಿಶಿಷ್ಟ ಸಮುದಾಯಗಳಿಗೆ ಮೀಸಲಾದ 39 ಸಾವಿರ ಕೋಟಿ ರು. ಹಣವನ್ನು ಸಿದ್ದರಾಮಯ್ಯ ಸರ್ಕಾರ ಬೇರೆ ಉದ್ದೇಶಗಳಿಗೆ ಬಳಸಿರುವುದು ಖಂಡನೀಯ. ಮುಂಬರುವ ಬಜೆಟ್‌ನಲ್ಲಿ ನೀಡಲಾಗುವ 42 ಸಾವಿರ ಕೋಟಿ ರು. ಅನುದಾನವನ್ನು ಗ್ಯಾರಂಟಿಗಳು ಹಾಗೂ ಅನ್ಯ ಉದ್ದೇಶಗಳಿಗೆ ಬಳಸಬಾರದು. ಒಂದು ವೇಳೆ ಬಳಸಿದರೆ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಒಳ ಮೀಸಲಾತಿ ಮಸೂದೆ ಮಂಡನೆಗೂ ಮುನ್ನ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಸರ್ವ ಪಕ್ಷಗಳ ಅಭಿಪ್ರಾಯ ಪಡೆಯದೆ ಏಕಪಕ್ಷೀಯ ನಿರ್ಣಯ ಕೈಗೊಂಡಿತು. ಬಳಿಕ ಶಾಸನಬದ್ಧ, ಸಂವಿಧಾನ ಆಶಯಕ್ಕೆ ಅನುಗುಣ ಅಥವಾ ಮಾಧುಸ್ವಾಮಿ ಸಮಿತಿ ಅಥವಾ ನಾಗಮೋಹನ್ ದಾಸ್ ಸಮಿತಿ ವರದಿಯಂತೆಯೂ ಒಳ ಮೀಸಲಾತಿ ಜಾರಿ ಮಾಡಲಿಲ್ಲ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.