ಏಪ್ರಿಲ್‌ 10ರಿಂದ ಕುವೆಂಪು ವಿವಿಯಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ: ಪ್ರೊ.ವಿ.ಕೃಷ್ಣ

KannadaprabhaNewsNetwork | Published : Apr 8, 2025 12:34 AM

ಸಾರಾಂಶ

ಕುವೆಂಪು ವಿಶ್ವವಿದ್ಯಾಲಯ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ, ವ್ಯಾಲ್ಯೂ ಪ್ರಾಡೆಕ್ಟ್ಸ್ ಸಂಸ್ಥೆಯ ಸಹಯೋಗದಲ್ಲಿ ಏ.10ರಿಂದ12ರ ವರೆಗೆ ಶಂಕರಘಟ್ಟದ ಜ್ಞಾನಸಹ್ಯಾದ್ರಿ ಬಸವ ಸಭಾಭವನದಲ್ಲಿ ‘ನೋನಿಯ ಸಂಶೋಧನಾ ಪ್ರವೃತ್ತಿಗಳು ಮತ್ತು ಆರೋಗ್ಯಕರ ಬದುಕಿಗೆ ಜೀವವೈವಿಧ್ಯತೆಯ ಸುಸ್ಥಿರ ಬಳಕೆ’

ಮೂರು ದಿನ ಸಮಾರಂಭ । ಅಮೃತ್‌ ನೋನಿ ಹಣ್ಣಿನ ಬಹುಪಯೋಗ ಸಂಶೋಧನೆ ಬಗ್ಗೆ ಚರ್ಚೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕುವೆಂಪು ವಿಶ್ವವಿದ್ಯಾಲಯ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ, ವ್ಯಾಲ್ಯೂ ಪ್ರಾಡೆಕ್ಟ್ಸ್ ಸಂಸ್ಥೆಯ ಸಹಯೋಗದಲ್ಲಿ ಏ.10ರಿಂದ12ರ ವರೆಗೆ ಶಂಕರಘಟ್ಟದ ಜ್ಞಾನಸಹ್ಯಾದ್ರಿ ಬಸವ ಸಭಾಭವನದಲ್ಲಿ ‘ನೋನಿಯ ಸಂಶೋಧನಾ ಪ್ರವೃತ್ತಿಗಳು ಮತ್ತು ಆರೋಗ್ಯಕರ ಬದುಕಿಗೆ ಜೀವವೈವಿಧ್ಯತೆಯ ಸುಸ್ಥಿರ ಬಳಕೆ’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಮ್ಮೇಳನದ ಯೋಜನಾ ಕಾರ್ಯದರ್ಶಿ ಪ್ರೊ.ವಿ.ಕೃಷ್ಣ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಇದೊಂದು ಐತಿಹಾಸಿಕ ಮಹತ್ವದ ಸಮ್ಮೇಳನವಾಗಿದ್ದು, 644ಕ್ಕೂ ಹೆಚ್ಚು ಸಂಶೋಧಕರು, 200ಕ್ಕೂ ಹೆಚ್ಚು ಪ್ರಬಂಧ ಮಂಡನೆ ಮಾಡುವರು ಭಾಗವಹಿಸುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯದ ಸಂಶೋಧಕರು ವಿಷಯ ಮಂಡನೆ ಮಾಡುತ್ತಿದ್ದು, ಈಗಾಗಲೇ ಸುಮಾರು 150ಕ್ಕೂ ಹೆಚ್ಚು ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಏ.10ರಂದು ಬೆಳಿಗ್ಗೆ 10ಕ್ಕೆ ಸಮ್ಮೆಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಹೈದರಾಬಾದ್ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಅಪ್ಪಾರಾವ್ ಪೋಡಿಲೆ ಉದ್ಘಾಟಿಸಲಿದ್ದಾರೆ. ಥೈಲ್ಯಾಂಡ್‌ನ ವಿವಿ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಸುಖಾಡಾ ಸುಕ್ರೋಂಗ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅಮೆರಿಕದ ಆಲಬಾಮಾ ವಿವಿ ಡಾ.ದರ್ಶನ್, ಕೆಳದಿ ಕೃಷಿ ವಿವಿ ಕುಲಪತಿ ಪ್ರೊ.ಆರ್.ಸಿ.ಜಗದೀಶ್, ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ವ್ಯಾಲ್ಯೂ ಪ್ರಾಡಕ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಎ.ಕೆ.ಶ್ರೀನಿವಾಸಮೂರ್ತಿ ಮುಂತಾದವರು ಇರುವರು ಎಂದರು.

ಕುವೆಂಪು ವಿವಿಯ ಕುಲಸಚಿವ ಗೋಪಿನಾಥ್ ಮಾತನಾಡಿ, ಪಶ್ಚಿಮ ಘಟ್ಟದಲ್ಲಿ ಹಲವು ಔಷಧಿ ಸಸ್ಯಗಳಿವೆ. ಈ ಔಷಧಿಯ ಸಸ್ಯಗಳಿಂದ ಹಲವು ರೋಗಗಳ ಚಿಕಿತ್ಸೆಗೆ ರಾಮಬಾಣದ ಗುಣಗಳಿವೆ. ಇದನ್ನು ಅಭಿವೃದ್ಧಿಪಡಿಸಿ ಸಮುದಾಯಕ್ಕೆ ತಿಳಿಸಿಕೊಡುವುದು ವಿವಿಗಳ ಕರ್ತವ್ಯವವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅನೇಕ ಸಂಶೋಧನೆಗಳು ನಡೆದಿವೆ ಎಂದರು.

ವ್ಯಾಲ್ಯೂ ಪ್ರಾಡಕ್ಟ್ಸ್‌ ಕಂಪನಿ ಜಿಎಂ ಪ್ರಾಮಾಣೀಕೃತ ಸಂಸ್ಥೆಯಾಗಿದ್ದು, ನೋನಿ ಹಣ್ಣಿನಲ್ಲಿರುವ ಔಷಧಿಯ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅಮೃತ್ ನೋನಿ ಉತ್ಪನ್ನದ ಮೂಲಕ ಆರೋಗ್ಯಕರ ಜೀವನಶೈಲಿಗೆ ತನ್ನ ಕೊಡುಗೆ ನೀಡಿದೆ. ಈ ಸಂಸ್ಥೆಯ ಸಹಕಾರದಲ್ಲಿ ನೋನಿ ಸಂಶೋಧನಾ ಪ್ರವೃತ್ತಿಗಳು ಸೇರಿದಂತೆ ಮಾನವನ ಆರೋಗ್ಯಕರ ಬದುಕಿಗೆ ಜೀವ ವೈವಿಧ್ಯತೆಯ ಸುಸ್ಥಿರ ಬಳಕೆ ಕುರಿತು ಈ ಸಮ್ಮೇಳನ ಆಯೋಜಿಸಲಾಗಿದೆ ಎಂದು ಹೇಳಿದರು.

ವ್ಯಾಲ್ಯೂ ಪ್ರಾಡಕ್ಟ್ಸ್‌ನ ಎಂಡಿ ಡಾ.ಎ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಕಳೆದ 14 ವರ್ಷಗಳಿಂದ ನಾವು ಸಮಾಜಮುಖಿ ಕೆಲಸ ಮಾಡುತ್ತಾ ಬಂದಿದ್ದೇವೆ. ಶಿವಮೊಗ್ಗದಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ಇದು. ಹಾಗಾಗಿ ಶ್ರೇಷ್ಠ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಮಾಜದಲ್ಲಿ ಸಾರ್ವಜನಿಕರು ಉತ್ತಮ ಆರೋಗ್ಯವನ್ನು ಉತ್ತೇಜಿಸುವಲ್ಲಿ ಜಾಗೃತಿ ಮೂಡಿಸುತ್ತ ಬಂದಿದೆ. ಅಮೃತ್ ನೋನಿ ಉತ್ಪನ್ನವೇ ಇದಕ್ಕೆ ಉದಾಹರಣೆಯಾಗಿದೆ ಎಂದರು.

ಸಂಚಾಲಕ ಪ್ರೊ.ಬಿ.ತಿಪ್ಪೇಸ್ವಾಮಿ, ಡಾ.ಡಿ.ತಿಪ್ಪೇಶ್, ಕುವೆಂಪು ವಿವಿ ಕುಲಸಚಿವ ಎ.ಎಲ್.ಮಂಜುನಾಥ್, ಎಂ.ಆರ್‌.ಸತ್ಯಪ್ರಕಾಶ್, ಇಂಚರಾ ನಾಡಿಗ್, ಸಿ.ಎಸ್. ಶಶಿಕಾಂತ್ ನಾಡಿಗ್ ಮತ್ತಿತರರು ಇದ್ದರು.

ಅನುದಾನ ಕೊರತೆಯಿಂದ ಖಾಸಗಿ ಸಂಸ್ಥೆಗಳ ಸಹಭಾಗಿತ್ವ

ವ್ಯಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆಯಂತ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಸಮ್ಮೇಳನ ಆಯೋಜನೆ ಅಗತ್ಯದ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುವೆಂಪು ವಿವಿ ಕುಲಸಚಿವ ಗೋಪಿನಾಥ್, ಕುವೆಂಪು ವಿವಿಯಲ್ಲಿ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತ್ತು ಇತರ ಕಾರ್ಯಗಳಿಗೆ ಅನುದಾನದ ಕೊರತೆ ಇದೆ. ಹಾಗಾಗಿ ಖಾಸಗಿ ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ಪ್ರತಿಕ್ರಿಯಿಸಿದರು.

Share this article