ಅಂತಾರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನಾಚರಣೆ

KannadaprabhaNewsNetwork | Published : Mar 22, 2024 1:03 AM

ಸಾರಾಂಶ

ಅಂತಾರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನಾಚರಣೆ ಅಂಗವಾಗಿ ಮೂರ್ನಾಡು ರಸ್ತೆಯಲ್ಲಿರುವ ಕಾಫಿ ಕ್ಯಾಸ್ಟಲ್ ಕೂರ್ಗ್ ನಲ್ಲಿ ಕೊಡವ ನ್ಯಾಷನಲ್ ಸಂಘಟನೆ ಕೊಡವ ಲ್ಯಾಂಡ್‌ಗಾಗಿ ಹಕ್ಕೊತ್ತಾಯ ಮಂಡಿಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಲೋಕಸಭಾ ಚುನಾವಣೆಯಲ್ಲಿ ಕೊಡವ ವಿರೋಧಿಗಳಿಗೆ ಮತ ಹಾಕದಂತೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿಅಂತಾರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನಾಚರಣೆ ಅಂಗವಾಗಿ ಕೊಡವ ನ್ಯಾಷನಲ್ ಸಂಘಟನೆ ಕೊಡವ ಲ್ಯಾಂಡ್‌ಗಾಗಿ ಹಕ್ಕೊತ್ತಾಯ ಮಂಡಿಸಿತು. ಮೂರ್ನಾಡು ರಸ್ತೆಯಲ್ಲಿರುವ ಕಾಫಿ ಕ್ಯಾಸ್ಟಲ್ ಕೂರ್ಗ್ ನಲ್ಲಿ ವಿಚಾರ ಮಂಡಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಲೋಕಸಭಾ ಚುನಾವಣೆಯಲ್ಲಿ ಕೊಡವ ವಿರೋಧಿಗಳಿಗೆ ಮತ ಹಾಕದಂತೆ ಕರೆ ನೀಡಿದರು.

ಕೊಡವ ಲ್ಯಾಂಡ್ ಸೇರಿದಂತೆ 9 ಸಾಂವಿಧಾನಿಕ ಬೇಡಿಕೆಗಳು ಮತ್ತು ಕೊಡವ ಜನಾಂಗದ ಗೌರವಾನ್ವಿತ ಗುರಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಅಭ್ಯರ್ಥಿಯನ್ನು ಬೆಂಬಲಿಸುವಂತೆ ತಿಳಿಸಿದರು.

ಆದಿಮ ಸಂಜಾತ ಕೊಡವ ಬುಡಕಟ್ಟು ಜನಾಂಗದ ವಿರುದ್ಧದ ಎಲ್ಲ ರೀತಿಯ ತಾರತಮ್ಯವನ್ನು ತೊಡೆದು ಹಾಕಬೇಕು. ಕೊಡವ ನೀತಿ, ಸ್ವಾಭಿಮಾನ ಮತ್ತು ಹಕ್ಕುಗಳನ್ನು ನುಂಗಲು ಹವಣಿಸುವ ಹಾಗೂ ಕೊಡವ ಜನಾಂಗೀಯ ಗುರುತು ಮತ್ತು ಅಸ್ತಿತ್ವವನ್ನು ಅಮಾನ್ಯಗೊಳಿಸುವ ಮೂಲಕ ಕೊಡವ ಅಸ್ತಿತ್ವ ಮರೆಮಾಚಿ ಆಶ್ರಯ ಪಡೆಯಲು ನಡೆಸುವ ಪ್ರಚೋದನೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

1956ರ ವರೆಗೆ ಕೊಡವ ಹೋಮ್‌ಲ್ಯಾಂಡ್ ಕೂರ್ಗ್ ಪ್ರತ್ಯೇಕ ರಾಷ್ಟ್ರ, ರಾಜ್ಯ, ಸಾಮ್ರಾಜ್ಯ, ಬ್ರಿಟಿಷ್ ಇಂಡಿಯಾ ಪ್ರಾಂತ್ಯವಾಗಿ ಅಸ್ತಿತ್ವದಲ್ಲಿತ್ತು ಮತ್ತು 1952 ರಿಂದ 1956ರ ವರೆಗೆ ಇದು ಸಂವಿಧಾನಾತ್ಮಕ ಸಂಸದೀಯ ಪ್ರಜಾಪ್ರಭುತ್ವದ ಅಡಿಯಲ್ಲಿ ಭಾರತದ ಒಂದು ಭಾಗ ‘ಸಿ’ ರಾಜ್ಯವಾಗಿತ್ತು. ಕೊಡವರ ತಾಯ್ನಾಡು ಕೊಡಗಿನ ವಿಶಾಲ ಮೈಸೂರಿನಲ್ಲಿ ವಿಲೀನಗೊಂಡ ನಂತರ, ರಾಜ್ಯದ ಬಹುಸಂಖ್ಯಾತ ಸಮುದಾಯಗಳಿಂದ ನಮ್ಮ ಎಲ್ಲ ಆಶಯಗಳು ಕಾವೇರಿ ನದಿಯಲ್ಲಿ ಕೊಚ್ಚಿಹೋದವು. ಕೊಡವರಿಗೆ ಮತ್ತು ಅವರ ನ್ಯಾಯಸಮ್ಮತ ಹಕ್ಕುಗಳಿಗೆ ಯಾವಾಗಲೂ ಪ್ರತಿಕೂಲವಾಗಿರುವ ರಾಜ್ಯದ ಎರಡು ಪ್ರಮುಖ ಸಂಕುಚಿತ ಸಮುದಾಯಗಳು ಅಶಾಂತಿಯನ್ನು ಪ್ರಚೋದಿಸುತ್ತಿವೆ ಎಂದು ಆರೋಪಿಸಿದರು.ಕಾನೂನುಗಳನ್ನು ಜಾರಿಗೊಳಿಸುವ, ಸುಗ್ರೀವಾಜ್ಞೆಗಳನ್ನು ನಿಯಂತ್ರಿಸುವ ಮತ್ತು ಕೊಡವ ಬುಡಕಟ್ಟಿನ ನ್ಯಾಯಸಮ್ಮತ ಆಶಯಗಳನ್ನು ನಿರ್ಲಕ್ಷಿಸುವ ಮೂಲಕ ಸಂವಿಧಾನವನ್ನು ಉಲ್ಲಂಘಿಸುತ್ತಿವೆ ಎಂದು ನಾಚಪ್ಪ ಆರೋಪಿಸಿದರು.

ಪ್ರಮುಖರಾದ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಅರೆಯಡ ಸವಿತಾ ಗಿರೀಶ್, ಚೋಳಪಂಡ ಜ್ಯೋತಿ ನಾಣಯ್ಯ, ಬೊಟ್ಟಂಗಡ ಸವಿತಾ ಗಿರೀಶ್, ಅಳ್ಮಂಡ ಜೈ, ಕಾಂಡೇರ ಸುರೇಶ್, ಅಜ್ಜಿಕುಟ್ಟೀರ ಲೋಕೇಶ್, ಚಂಬಂಡ ಜನತ್, ಮಂದಪಂಡ ಮನೋಜ್, ಅರೆಯಡ ಗಿರೀಶ್, ಬೊಟ್ಟಂಗಡ ಗಿರೀಶ್, ಕಿರಿಯಮಡ ಶರೀನ್, ನಂದಿನೆರವಂಡ ಅಪ್ಪಯ್ಯ ಮತ್ತಿತರರು ಹಾಜರಿದ್ದರು.

Share this article