ಮಂಗಳೂರಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಸ್ಪರ್ಧೆ: ಗುಂಡೂರಾವ್‌

KannadaprabhaNewsNetwork | Published : Jan 19, 2025 2:18 AM

ಸಾರಾಂಶ

ಗಾಳಿಪಟ ಉತ್ಸವದಲ್ಲಿ ಗ್ರೀಸ್, ಯುಕೆ, ಜರ್ಮನಿ, ಇಂಡೋನೇಷ್ಯಾ, ನೆದರ್ ಲ್ಯಾಂಡ್, ಎಸ್ಟಿನೋವಾ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಿಂದ ನುರಿತ ಗಾಳಿಪಟ ಹಾರಾಟಗಾರರು ಪಾಲ್ಗೊಂಡಿದ್ದಾರೆ. ಅಲ್ಲದೆ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದಲೂ ಕಲಾವಿದರು ಗಾಳಿಪಟ ಹಾರಿಸಲು ಬಂದಿದ್ದಾರೆ. ಭಾರೀ ಗಾತ್ರದ ಗಾಳಿಪಟಗಳು, ವಿವಿಧ ಪ್ರಾಣಿಗಳ ಆಕಾರದೊಂದಿಗೆ ಮನ ಸೆಳೆಯುತ್ತಿವೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಇದುವರೆಗೆ ಮಂಗಳೂರಿನಲ್ಲಿ ಹವ್ಯಾಸದ ರೂಪದಲ್ಲಿ ಗಾಳಿಪಟ ಉತ್ಸವಗಳು ನಡೆಯುತ್ತಿದ್ದವು. ಮುಂದಿನ ವರ್ಷದಿಂದ ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಸ್ಪರ್ಧೆ ಆಯೋಜಿಸಲು ಚಿಂತನೆ ನಡೆಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಕರಾವಳಿ ಉತ್ಸವ ಪ್ರಯುಕ್ತ ನಗರದ ಹೊರವಲಯದ ತಣ್ಣೀರುಬಾವಿ ಬೀಚ್‌ನಲ್ಲಿ ದ.ಕ. ಜಿಲ್ಲಾಡಳಿತ, ಟೀಮ್‌ ಮಂಗಳೂರು, ಒನ್‌ಜಿಸಿ- ಎಂಆರ್‌ಪಿಎಲ್‌ ವತಿಯಿಂದ ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಗಾಳಿಪಟ ಹಾರಿಸಲು ಮಂಗಳೂರಿಗೆ ಬಂದಿರುವ ಬಹುತೇಕ ವಿದೇಶಿ ಕಲಾವಿದರ ಅಭಿಪ್ರಾಯದ ಪ್ರಕಾರ ಗಾಳಿಪಟ ಉತ್ಸವಕ್ಕೆ ಎಲ್ಲೆಡೆಗಿಂತ ಮಂಗಳೂರು ಅತ್ಯಂತ ಸೂಕ್ತ ಪ್ರದೇಶ. ಇಲ್ಲಿನ ಬೀಚ್‌, ಗಾಳಿಪಟ ಹಾರಿಸಲು ಬೇಕಾದ ಗಾಳಿ, ಜನರ ಸಹಕಾರ ಎಲ್ಲವೂ ಇದೆ. ಹಾಗಾಗಿ ಈ ಹವ್ಯಾಸಕ್ಕೆ ಸ್ಪರ್ಧಾರೂಪ ನೀಡುವ ಅಗತ್ಯವಿದೆ. ಇದರಿಂದ ಕರಾವಳಿಯ ಪ್ರತಿಭೆಗಳಿಗೂ ಹೆಚ್ಚೆಚ್ಚು ಅವಕಾಶ ದೊರೆಯಲಿದೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

ಪ್ರತಿವರ್ಷವೂ ಗಾಳಿಪಟ ಉತ್ಸವ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಒಂದೇ ದಿನಾಂಕ ಫಿಕ್ಸ್‌ ಮಾಡಿದರೆ ವಿಶ್ವ ಮಟ್ಟದ ಕಲಾವಿದರಿಗೆ ಆಗಮಿಸಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಗಾಳಿಪಟ ಉತ್ಸವದಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬಲ ಸಿಗುತ್ತದೆ. ಮಂಗಳೂರಿನಲ್ಲಿ ಇಂತಹ ಕಾರ್ಯಕ್ರಮ ನಡೆಯಲು ಜನಪ್ರತಿನಿಧಿಗಳು, ವಿವಿಧ ಇಲಾಖೆಗಳು ಮಾತ್ರವಲ್ಲದೆ ಜನರು ಬೆಂಬಲ ನೀಡಬೇಕು ಎಂದು ಹೇಳಿದರು.

ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್‌, ಮಂಗಳೂರು ಮಹಾನಗರ ಪಾಲಿಕೆ ಮೇಯರ್‌ ಮನೋಜ್‌ ಕುಮಾರ್‌, ವಿಪಕ್ಷ ನಾಯಕ ಅನಿಲ್‌ ಕುಮಾರ್‌, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿಪಂ ಸಿಇಒ ಡಾ.ಆನಂದ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌, ಎಂಆರ್‌ಪಿಎಲ್ ನಿರ್ದೇಶಕ ನಂದಕುಮಾರ್ ಮತ್ತಿತರರಿದ್ದರು.

ಕಡಲ ಕಿನಾರೆಯಲ್ಲಿ ವಿಸ್ಮಯಕಾರಿ ಗಾಳಿಪಟಗಳು!

ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಶನಿವಾರ, ಭಾನುವಾರ ಆಯೋಜನೆಯಾಗಿರುವ ಗಾಳಿಪಟ ಉತ್ಸವಕ್ಕೆ ಮೊದಲ ದಿನವಾದ ಶನಿವಾರವೇ ಸಾವಿರಾರು ಮಂದಿ ಸಾಕ್ಷಿಯಾದರು. ದೇಶ ವಿದೇಶಗಳ ನೂರಾರು ವೈವಿಧ್ಯಮಯ, ಬಹು ಅಪರೂಪದ ಗಾಳಿಪಟಗಳನ್ನು ನೋಡಿ ಜನರು ಪುಳಕಗೊಂಡರು.

ಗಾಳಿಪಟ ಉತ್ಸವದಲ್ಲಿ ಗ್ರೀಸ್, ಯುಕೆ, ಜರ್ಮನಿ, ಇಂಡೋನೇಷ್ಯಾ, ನೆದರ್ ಲ್ಯಾಂಡ್, ಎಸ್ಟಿನೋವಾ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಿಂದ ನುರಿತ ಗಾಳಿಪಟ ಹಾರಾಟಗಾರರು ಪಾಲ್ಗೊಂಡಿದ್ದಾರೆ. ಅಲ್ಲದೆ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದಲೂ ಕಲಾವಿದರು ಗಾಳಿಪಟ ಹಾರಿಸಲು ಬಂದಿದ್ದಾರೆ. ಭಾರೀ ಗಾತ್ರದ ಗಾಳಿಪಟಗಳು, ವಿವಿಧ ಪ್ರಾಣಿಗಳ ಆಕಾರದೊಂದಿಗೆ ಮನ ಸೆಳೆಯುತ್ತಿವೆ.ಉತ್ಸವದಲ್ಲಿ ಪಾಲ್ಗೊಂಡ ಇಂಗ್ಲೆಂಡ್‌ನ ದಂಪತಿ ಕ್ಲೇರಾ ಮತ್ತು ಟೈವ್‌ ಮಾತನಾಡಿ, ನಾವು ಭಾರತವನ್ನು ಅತ್ಯಂತ ಇಷ್ಟಪಡುತ್ತೇವೆ. ಅದರಲ್ಲೂ ಮಂಗಳೂರು ಅತ್ಯಂತ ಸುಂದರವಾಗಿದೆ. 2 ವರ್ಷಗಳ ಹಿಂದೆ ಗುಜರಾತ್‌ಗೆ ಆಗಮಿಸಿದ್ದೆವು. ಆಗಲೇ ಮಂಗಳೂರು ಗಾಳಿಪಟ ಉತ್ಸವಕ್ಕೆ ಆಗಮಿಸಬೇಕು ಎಂಬ ಆಸೆಯಿತ್ತು, ಈಗ ಈಡೇರಿದೆ ಎಂದು ಸಂತಸ ವ್ಯಕ್ತಪಡಿಸಿದರು.

Share this article