ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಆದಿವಾಸಿಗಳು ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಬೇಕು ಎಂದು ನಿಸರ್ಗ ಸಂಸ್ಥೆಯ ನಿರ್ದೇಶಕ ಪ್ರಭು ಹೇಳಿದರು.ಪಟ್ಟಣದ ನಿಸರ್ಗ ಫೌಂಡೇಷನ್ ಕಚೇರಿಯಲ್ಲಿ ನಡೆದ ಆದಿವಾಸಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಸಮಾನತೆ ಹೊಂದಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಹಾಗೆಯೇ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ನಾವೇ ಹೊರಾಟ ಮಾಡಬೇಕೆಂದು ಕರೆ ನೀಡಿದರು.ಮೈಸೂರು ಜೆ.ಎಸ್.ಎಸ್ ಕಾಲೇಜಿನ ಉಪನ್ಯಾಸಕಿ ಕುಮುದಿನಿ ಸ್ಟ್ಯಾನ್ಲಿ ಮಾತನಾಡಿ, ಮೊದಲು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು 125 ವರ್ಷಗಳ ಹಿಂದೆ ಇಂಗ್ಲೆಂಡ್ ಹಾಗೂ ಅಮೇರಿಕಾ ದೇಶಗಳಲ್ಲಿ ಮಾತ್ರ ಆಚರಿಸುತ್ತಿದ್ದರು. ಹೆಣ್ಣು ಮಕ್ಕಳ ಸಾಧನೆಯನ್ನು ಕಂಡು 51 ವರ್ಷಗಳ ನಂತರ ಭಾರತದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಪ್ರಾರಂಭ ಮಾಡಲಾಯಿತು. ಮಹಿಳೆಯರು ಸರ್ಕಾರದಿಂದ ಸಿಗುವ ಸೌಲಭ್ಯದಿಂದ ವಂಚಿತರಾಗದೆ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ಬಾಲ್ಯವಿವಾಹವನ್ನು ಮಾಡದೇ, ಅವರಿಗೆ ಉತ್ತಮ ಶಿಕ್ಷಣವನ್ನು ಕೊಡಿಸಬೇಕು. ಹಾಗೇಯೆ ಮಹಿಳೆಯರು ನಮ್ಮ ಸಂಸ್ಕೃತಿಯನ್ನು ಮರೆಯಬಾರದು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ನಿಸರ್ಗ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಮಾರನ ಹಾಡಿಯ ದೇವಮ್ಮ ವಹಿಸಿದ್ದರು.ಅಂಗನವಾಡಿ ಮೇಲ್ವಿಚಾರಕಿ ಚಿನ್ನಮ್ಮ ಮಾತನಾಡಿ, ತಮ್ಮ ಇಲಾಖೆಯಿಂದ ಸಿಗುವ ಯೋಜನೆಗಳ ಬಗ್ಗೆ ತಿಳಿಸಿದರು.
ನಿಸರ್ಗ ಸಂಸ್ಥೆಯ ನಡೆಸುತ್ತಿರುವ ಚಿಗುರು ಶಾಲಾ ಮಕ್ಕಳಾದ ನಿಶ್ಚಿತ, ಪೂರ್ವಿಕ, ಲಿಖಿತಾ ಎಂಬ ಮಕ್ಕಳು ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ದಿ ಫಾರೆಸ್ಟ್ ಫಾರ್ ಲೈಫ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಬಂಧದಲ್ಲಿ ವಿಜೇತರಾಗಿದ್ದು, ಪ್ರಶಸ್ತಿ ಪತ್ರ ವಿತರಿಸಲಾಯಿತು. ಅರಳಿಕಟ್ಟೆಯ ಕೆಂಪಮ್ಮ, ಸಣ್ಣಮ್ಮ, ಚಿಕ್ಕಮ್ಮ ಎಂಬವವರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು.ಹಿರಿಯ ಮಹಿಳಾ ಹೋರಾಟಗಾರರಾದ ಅರಳಿಕಟ್ಟೆ ಹಾಡಿಯ ಜವರಮ್ಮ, ಅಣ್ಣೂರು ಹಾಡಿಯ ಅಮ್ಮಣಮ್ಮ, ನಿಸರ್ಗ ಸಂಸ್ಥೆಯ ಕಾರ್ಯಕರ್ತರಾದ ಚಿಕ್ಕತಿಮ್ಮನಾಯ್ಕ, ಕನ್ಯಾಕುಮಾರಿ, ಜ್ಯೋತಿ, ತಂಝಿಲ ನಾಜ್, ಶ್ರುತಿ, ಆದಿವಾಸಿ ಮಹಿಳೆಯರು ಹಾಗೂ ಮುಖಂಡರು ಭಾಗವಹಿಸಿದ್ದರು.