ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೇ ತಂತ್ರಜ್ಞಾನ, ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿ ಕ್ಷೇತ್ರದಲ್ಲಿಯೂ ಛಾಪು ಮೂಡಿಸಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಹೇಳಿದರು.ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾ ನ್ಯಾಯಾಲಯ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ತಂತ್ರಜ್ಞಾನ, ಆವಿಷ್ಕಾರಗಳೊಂದಿಗೆ ಅನ್ಯ ಗ್ರಹದಲ್ಲಿ ವಾಸಿಸಲು ಯೋಗ್ಯ ಸ್ಥಳ ಹುಡುಕುತ್ತಿರುವ ಪ್ರಯತ್ನಗಳ ಸಂದರ್ಭದಲ್ಲಿ ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ. ಅವರ ಕೊಡುಗೆ ಸ್ಮರಿಸಲು ಈ ದಿನವನ್ನು ಅವರಿಗೆ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಅತಿಥಿಗಳಾಗಿ ಆಗಮಿಸಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಸನ್ಮಾನ ಸ್ವೀಕರಿಸಿ ಮಾತನಾಡಿ, ಮತ್ತೊಂದು ಜೀವಕ್ಕೆ ಉಸಿರು ನೀಡುವ ಶಕ್ತಿ ಇರುವುದು ಮಹಿಳೆಗೆ ಮಾತ್ರ. ಮಹಿಳಾ ಸಬಲೀಕರಣದಲ್ಲಿ ತೊಗಡಿಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ನಾವು ಹೆಚ್ಚು ಸಮಾನ ಮತ್ತು ಅಂತರ್ಗತ ಜಗತ್ತನ್ನು ಮಾಡಬಹುದು. ಜಾಗತಿಕವಾಗಿ ಮಹಿಳೆಯರ ಧ್ವನಿಯಲ್ಲಿ ವರ್ಧಿಸಲು ನಾವು ಅವರೊಂದಿಗೆ ಒಗ್ಗಟ್ಟಿನಿಂದ ನಿಲ್ಲಬೇಕು. ಮತ್ತು ಅವರಿಗೆ ಅರ್ಥಪೂರ್ಣ ಬದಲಾವಣೆಗಾಗಿ ಪ್ರತಿಪಾದಿಸಬೇಕು ಎಂದರು.ಈಚೆಗೆ ನಡೆದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ನ್ಯಾಯಾಂಗ ಇಲಾಖೆಯ ಶಿಲ್ಪ ನೃತ್ಯ ತಂಡದ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ತಂಡಕ್ಕೆ ಸತ್ಕರಿಸಲಾಯಿತು.
ಅರುಣಾ ರಘುವೀರ ಅವರು ಮಹಿಳೆಯರ ಏಳಿಗೆ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಕೀಲರ ಸಂಘದ ಪಿ.ಎ.ಪಾಟೀಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಪಲ್ಲವಿ ಆರ್, 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹೇಮಾ ಪಸ್ತಾಪೂರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ, ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಪೂಜಾರ, ಕಾರ್ಯದರ್ಶಿ ಶ್ರೀಶೈಲ ಹಾವರಗಿ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ.ರೆಹಮಾನ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ.ಮೂಲಿಮನಿ, ಕುಟುಂಬ ನ್ಯಾಯಾಲಯದ ಮುಖ್ಯ ಪ್ರಧಾನ ನ್ಯಾಯಾಧೀಶ ಕೃಷ್ಣಮೂರ್ತಿ, 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮಹೇಶ ಪಾಟೀಲ, ಮುಖ್ಯ ಆಡಳಿತಾಧಿಕಾರಿ ಎಂ.ಎಚ್.ಕಡಕೋಳ ಸೇರಿದಂತೆ ಇತರರು ಇದ್ದರು.