ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಇಂದು ಮಡಿಕೇರಿಯಲ್ಲಿ ಜಾಗೃತಿ ಜಾಥಾ

KannadaprabhaNewsNetwork | Published : Jun 20, 2024 1:06 AM

ಸಾರಾಂಶ

ಅಂತಾರಾಷ್ಟ್ರೀಯ 10 ನೇ ಯೋಗ ದಿನಾಚರಣೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅಧ್ಯಕ್ಷತೆಯಲ್ಲಿ ವಿಡಿಯೋ ಸಂವಾದದ ಮೂಲಕ ಪೂರ್ವಭಾವಿ ಸಭೆ ಬುಧವಾರ ನಡೆಯಿತು. ಶುಕ್ರವಾರ ನಡೆಯುವ 10ನೇ ಯೋಗ ದಿನ ಆಚರಿಸುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಕೋರಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಂತಾರಾಷ್ಟ್ರೀಯ 10 ನೇ ಯೋಗ ದಿನಾಚರಣೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅಧ್ಯಕ್ಷತೆಯಲ್ಲಿ ವಿಡಿಯೋ ಸಂವಾದದ ಮೂಲಕ ಪೂರ್ವಭಾವಿ ಸಭೆ ಬುಧವಾರ ನಡೆಯಿತು.

ಶುಕ್ರವಾರ ನಡೆಯುವ 10ನೇ ಯೋಗ ದಿನ ಆಚರಿಸುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಕೋರಿದರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮಹತ್ವ ಅರಿತು ಸಂಬಂಧಪಟ್ಟ ವಿವಿಧ ಇಲಾಖೆಗಳು ಕಾರ್ಯಕ್ರಮ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡಬೇಕು. ಶಾಲಾ ಕಾಲೇಜು ಹಾಗೂ ಹಾಸ್ಟೆಲ್‌ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಮತ್ತು ಬರಲು ಅಗತ್ಯ ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸುವಂತೆ ವೀಣಾ ನಿರ್ದೇಶನ ನೀಡಿದರು.

ಸ್ವಚ್ಚತೆ ಕಾಪಾಡುವುದು ಮತ್ತು ಕುಡಿಯುವ ನೀರು ಕಲ್ಪಿಸುವುದು ಮತ್ತಿತರ ಸಂಬಂಧ ನಗರಸಭೆ ಅಧಿಕಾರಿಗಳು ಅಗತ್ಯ ಸಹಕಾರ ನೀಡುವಂತೆ ಸೂಚಿಸಿದರು.

ಜಿಲ್ಲಾ ಆಯೂಷ್ ಅಧಿಕಾರಿ ಡಾ.ರೇಣುಕಾ ದೇವಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಶುಕ್ರವಾರ 10 ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಆಯುಷ್ ಇಲಾಖೆ ವತಿಯಿಂದ ಹಾಗೂ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ಆಚರಿಸಲಾಗುತ್ತಿದೆ ಎಂದರು.

ಇಂದು ಜಾಗೃತಿ ಜಾಥಾ: ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಗುರುವಾರ ಬೆಳಗ್ಗೆ 8 ಗಂಟೆಗೆ ಯೋಗ ಜಾಥಾವನ್ನು ನಗರದ ಗಾಂಧಿ ಮೈದಾನದಿಂದ ಜನರಲ್ ತಿಮ್ಮಯ್ಯ ವೃತ್ತ, ಅಜ್ಜಮಾಡ ದೇವಯ್ಯ ವೃತ್ತ ಹಾಗೂ ಇಂದಿರಾಗಾಂಧಿ ವೃತ್ತ ಮೂಲಕ ಕಾವೇರಿ ಕಲಾಕ್ಷೇತ್ರದ ವರೆಗೆ ಯೋಗ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿದ್ಯಾರ್ಥಿಗಳಿಗೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಜೂ.10 ರಿಂದ 20 ರವರೆಗೆ ಯೋಗೋತ್ಸವ ಕಾರ್ಯಕ್ರಮದ ಮೂಲಕ ಯೋಗ ತರಬೇತಿ ಆಯೋಜಿಸಲಾಗಿದೆ ಎಂದು ಡಾ.ರೇಣುಕಾದೇವಿ ತಿಳಿಸಿದರು.

ಎನ್‌ಸಿಸಿ. ಘಟಕ ಮತ್ತು ಎನ್‌ಎಸ್‌ಎಸ್ ಘಟಕಗಳ ವಿದ್ಯಾರ್ಥಿಗಳಿಗೂ ಯೋಗೋತ್ಸವ ಕಾರ್ಯಕ್ರಮದ ಮೂಲಕ ಯೋಗ ತರಬೇತಿ ನಿಡಲಾಗಿದೆ ಎಂದು ಜಿಲ್ಲಾ ಆಯೂಷ್ ಅಧಿಕಾರಿ ವಿವರಿಸಿದರು.

ಆಯುಷ್ ಆರೋಗ್ಯ ಕ್ಷೇಮಕೇಂದ್ರಗಳ ಯೋಗ ತರಬೇತಿದಾರರಿಂದ ಜಿಲ್ಲೆಯ ಬೇರೆ ಬೇರೆ ಶಾಲೆಗಳಲ್ಲಿ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪೌರಾಯುಕ್ತರಾದ ವಿಜಯ್ ಸಹಿತ ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

Share this article