ಹಳಿಯಾಳ: ತಾಲೂಕಿನ ಬಿದ್ರೊಳ್ಳಿ ಗ್ರಾಮದಲ್ಲಿ ಕಳೆದ ವಾರದಿಂದ ವಾಂತಿ-ಭೇದಿ ಪತ್ತೆಯಾಗಿದ್ದು, ಐದು ದಿನಗಳ ಅವಧಿಯಲ್ಲಿ ಗ್ರಾಮದಲ್ಲಿ ಇಬ್ಬರು ಮೃತಪಟ್ಟಿದ್ದರಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಆದರೆ ವೈದ್ಯಾಧಿಕಾರಿಗಳು ಬೇರೆ ಅನಾರೋಗ್ಯದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಗ್ರಾಮಕ್ಕೆ ತಾಲೂಕಾಡಳಿತ ಮತ್ತು ತಾಲೂಕು ವೈದ್ಯಾಧಿಕಾರಿಗಳ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿತು.ಮೊದಲಗೇರಾ ಗ್ರಾಪಂ ವ್ಯಾಪ್ತಿಯಲ್ಲಿ ವಾರದ ಹಿಂದೆಯೇ ಬಿದ್ರೊಳ್ಳಿ ಗ್ರಾಮದಲ್ಲಿ ವಾಂತಿ- ಭೇದಿ ಕಂಡುಬಂದಿದ್ದು, ವಾಂತಿ-ಭೇದಿಯಿಂದ ಇಪ್ಪತ್ತಕ್ಕೂ ಹೆಚ್ಚೂ ಜನರು ಅಸ್ವಸ್ಥರಾಗಿದ್ದರೆ. ಈ ಮಧ್ಯೆ ಗ್ರಾಮದ ಹಿರಿಯ ವ್ಯಕ್ತಿ ಹಾಗೂ ಓರ್ವ ಮಹಿಳೆಯು ಮೃತಪಟ್ಟಿದ್ದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಗ್ರಾಮದಲ್ಲಿ ಒಟ್ಟು 20 ಮಂದಿ ವಾಂತಿ- ಭೇದಿಯಿಂದ ಬಳಲುತ್ತಿದ್ದು, ಅವರನ್ನು ಸಮೀಪದ ಯಡೋಗಾ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಧಿಕಾರಿಗಳ ಭೇಟಿ: ಗ್ರಾಮದಲ್ಲಿ ಪರಿಶೀಲನೆ ನಡೆಸಿದ ತಂಡವು ಗ್ರಾಮಸ್ಥರು ಭಯಭೀತಗೊಳ್ಳುವ ಅವಶ್ಯಕತೆಯಿಲ್ಲ ಎಂದು ಧೈರ್ಯ ತುಂಬಿದ್ದು, ಗ್ರಾಮದಲ್ಲಿ ಆರೋಗ್ಯ ಸುರಕ್ಷತೆ ಸ್ವಚ್ಛತೆಯ ಬಗ್ಗೆ ಜಾಗೃತೆ ಮೂಡಿಸುತ್ತಿದ್ದಾರೆ. ಅಲ್ಲದೇ ಘಟನೆಯ ಗಂಭೀರತೆಯನ್ನು ಅರಿತ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರಬಾಬು ಅವರು ಪ್ರಕರಣವನ್ನು ತಾಪಂ ಹಾಗೂ ತಹಸೀಲ್ದಾರ್ ಮತ್ತು ತಾಲೂಕು ಆರೋಗ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.ತಾಲೂಕು ವೈದ್ಯಾಧಿಕಾರಿ ಡಾ. ಅನಿಲಕುಮಾರ, ಯಡೋಗಾ ಆರೋಗ್ಯ ಘಟಕದ ವೈದ್ಯ ಡಾ. ಸ್ಟೇನ್ಲಿ, ಮೊದಲಗೇರಾ ಗ್ರಾಪಂ ಪಿಡಿಒ ರವೀಂದ್ರ ಬಾಬು ಸೇರಿದಂತೆ ಇನ್ನುಳಿದ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ತಂಡವು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಚರಂಡಿ ಶುಚಿ: ಗ್ರಾಮದಲ್ಲಿ ಮಳೆ ಆರಂಭಗೊಳ್ಳುವ ಮುನ್ನವೇ ಚರಂಡಿಯನ್ನು ಶುಚಿಗೊಳಿಸಲಾಗಿದ್ದು, ಸ್ವಚ್ಛತೆಗೆ ಬೇಕಾಗಿರುವ ಎಲ್ಲ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ. ಗ್ರಾಮಕ್ಕೆ ಸರಬರಾಜಾಗುವ ನೀರನ್ನು ಧಾರವಾಡ, ಕಾರವಾರ ಹಾಗೂ ಹಳಿಯಾಳ ಪ್ರಯೋಗಾಲಯದಲ್ಲಿ ತಪಾಸಣೆ ಮಾಡಲಾಗಿದ್ದು, ವರದಿಯು ನಾರ್ಮಲ್ ಬಂದಿದೆ. ಗ್ರಾಮದಲ್ಲಿ ಕಂಡು ಬಂದಿರುವ ಈ ವಾಂತಿ-ಭೇದಿ ಪ್ರಕರಣವನ್ನು ತಾಪಂ, ತಹಸೀಲ್ದಾರ್ ಮತ್ತು ತಾಲೂಕು ಆರೋಗ್ಯ ಇಲಾಖೆಯ ಗಮನಕ್ಕೆ ತಂದಿದ್ದೇನೆ ಎಂದು ಮೊದಲಗೇರಾ ಪಿಡಿಒ ರವೀಂದ್ರಬಾಬು ತಿಳಿಸಿದರು.