ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮೀನುಗಾರಿಕಾ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಎಸ್.ಎಂ. ಶಿವಪ್ರಕಾಶ್ ಅವರು ಈಜುತ್ತಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪೋಸ್ಟ್ ಕಾರ್ಡ್ ಮೂಲಕ ಪತ್ರ ಬರೆದು ಎಲ್ಲರ ಗಮನ ಸೆಳೆದರು.
ಯೋಗ ದಿನಾಚರಣೆಯ ಮಹತ್ವವನ್ನು ಎತ್ತಿಹಿಡಿಯುವ ಸಲುವಾಗಿ ಈ ಪತ್ರ ಬರೆದಿರುವುದಾಗಿ ಶಿವಪ್ರಕಾಶ್ ತಿಳಿಸಿದ್ದಾರೆ. ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ, ‘ಡಿಯರ್ ಮೋದಿಜಿ, ಹ್ಯಾಪಿ ಇಂಟರ್ನ್ಯಾಷನಲ್ ಯೋಗ ಡೇ. ಐ ಯಾಮ್ ರೈಟಿಂಗ್ ದಿಸ್ ಪೋಸ್ಟ್ ಕಾರ್ಡ್ ವೈಲ್ ಸ್ವಿಮ್ಮಿಂಗ್ ಇನ್‌ದ ಪೂಲ್. ಫಿಟ್ ಇಂಡಿಯಾ - ಶಿವಪ್ರಕಾಶ್, ಮಂಗಳೂರು’ ಎಂದು ಈಜುತ್ತಲೇ ಪತ್ರ ಬರೆದಿರುವುದು ಗಮನಾರ್ಹ.ಸುಮಾರು 40 ಮಂದಿ ಹವ್ಯಾಸಿ ಈಜುಗಾರರು ಭಾಗವಹಿಸಿ ನೀರಿನಲ್ಲಿ ಯೋಗಾಸನ ಪ್ರದರ್ಶನ ನೀಡಿದರು.ಏನಿದು ಜಲಯೋಗ?: ಜಲಯೋಗವು ಯೋಗಾಸನ, ಉಸಿರಾಟದ ತಂತ್ರಗಳು ಮತ್ತು ಧ್ಯಾನವನ್ನು ನೀರಿನೊಂದಿಗೆ ಸಂಯೋಜಿಸುವ ಒಂದು ವಿಶೇಷ ಅಭ್ಯಾಸವಾಗಿದೆ. ಈಜುಕೊಳದ 16 ಅಡಿ ಆಳದ ನೀರಿನಲ್ಲಿ ಈಜುಗಾರರು ಪದ್ಮಾಸನ, ಶವಾಸನ ಮುಂತಾದ ಯೋಗಾಸನಗಳ ಕಸರತ್ತು ಪ್ರದರ್ಶಿಸಿದರು. ನೀರಿನಲ್ಲಿ ತೇಲುವುದರಿಂದ ದೇಹದ ಸ್ನಾಯುಗಳ ಮೇಲಿನ ಒತ್ತಡ ಕಡಿಮೆಯಾಗಿ, ಈ ಆಸನಗಳನ್ನು ಸುಲಭವಾಗಿ ಮಾಡಲು ಸಾಧ್ಯವಾಯಿತು. ಜೊತೆಗೆ, ಸ್ನಾಯುಗಳ ಬಲವರ್ಧನೆಯೂ ಆಗುತ್ತದೆ ಎಂಬುದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ತಮ್ಮ ಅನುಭವ ಹಂಚಿಕೊಂಡರು.
-ಎಸ್.ಎಂ. ಶಿವಪ್ರಕಾಶ್, ನಿವೃತ್ತ ಡೀನ್, ಮೀನುಗಾರಿಕಾ ವಿಶ್ವವಿದ್ಯಾಲಯ