ಹುಬ್ಬಳ್ಳಿ: ನಗರದ ವಿವಿಧೆಡೆ ವಿವಿಧ ಸಂಘ ಸಂಸ್ಥೆಗಳು ಯೋಗಾಭ್ಯಾಸ ಶಿಬಿರಗಳನ್ನು ಏರ್ಪಡಿಸುವ ಮೂಲಕ ವಿಶ್ವ ಯೋಗ ದಿನ ಆಚರಿಸಿದವು. ಮಹಿಳೆಯರು, ಮಕ್ಕಳು, ಯುವಕರು ಸೇರಿದಂತೆ ಎಲ್ಲ ವಯೋಮಾನದ ಜನರು ಭಾನುವಾರ ಬೆಳಗ್ಗೆ ಯೋಗಪಟುಗಳ ದಿರಿಸಿನಲ್ಲಿ ಕಾಣಿಸಿಕೊಂಡರು. ಅತ್ಯಂತ ಉತ್ಸಾಹದಿಂದ ಯೋಗಾಭ್ಯಾಸ ಮಾಡಿದರು. ಪ್ರತಿನಿತ್ಯ ಯೋಗ ಮಾಡಿ; ಯೋಗದಿಂದ ರೋಗ ದೂರ. ಪ್ರತಿಯೊಬ್ಬರ ಜೀವನದ ಅಂಗವಾಗಲಿ ಯೋಗ. ಯೋಗದ ಮೂಲಕವೇ ದಿನಚರಿ ಪ್ರಾರಂಭವಾಗಲಿ ಎಂದು ಗಣ್ಯರು ಕರೆ ಕೊಟ್ಟರು.
ನ್ಯಾಯಾಲಯ ಆವರಣ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇಲ್ಲಿನ ನ್ಯಾಯಾಲಯಗಳ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಯೋಗಾಭ್ಯಾಸ ಕಾರ್ಯಕ್ರಮವನ್ನು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ವೀಣಾ ನಾಯ್ಕರ ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ರಾಮಚಂದ್ರ ಮಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ರಾಜಕುಮಾರ ಅಮ್ಮಿನಭಾವಿ, ವಿಶ್ವನಾಥ ಯಮಕನಮರಡಿ, ಗುರುರಾಜ ಶಿರೋಳ, ವಕೀಲರು, ಸಿಬ್ಬಂದಿ ಸೇರಿದಂತೆ ಇತರರು ಇದ್ದರು.
ಇಂದಿರಾ ಗಾಜಿನ ಮನೆ: ಇಲ್ಲಿಯ ಇಂದಿರಾ ಗಾಜಿನ ಮನೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್‌ಪಿವೈಎಸ್‌ಎಸ್) ಹಾಗೂ ಯೋಗ ಸ್ಪರ್ಶ ಪ್ರತಿಷ್ಠಾನ ವತಿಯಿಂದ ಭಾನುವಾರ ಏರ್ಪಡಿಸಿದ್ದ ಯೋಗ ದಿನಾಚರಣೆಯನ್ನು ಧಾರವಾಡದ ಐಐಟಿ ನಿರ್ದೇಶಕ ವೆಂಕಪ್ಪಯ್ಯ ಆರ್.ದೇಸಾಯಿ ಉದ್ಘಾಟಿಸಿದರು.ಎಸ್‌ಪಿವೈಎಸ್‌ಎಸ್ ಶಿಕ್ಷಕ ದತ್ತಾತ್ರೇಯ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ವಲಯ ಸಂಚಾಲಕಿ ಅಕ್ಕಮಹಾದೇವಿ ಗಣಾಚಾರಿ ಮಾತನಾಡಿದರು. ಛಾಯಾಗ್ರಾಹಕ ಗೌರವ ಮನೀಶ ಖೋನಾ, ಸಂಚಾಲಕರಾದ ಅನಿಲ ಲದವಾ, ನಿರ್ಮಲಾ ಅಡವಿ, ಯೋಗ ಸ್ಪರ್ಶ ಪ್ರತಿಷ್ಠಾನದ ಅಧ್ಯಕ್ಷ ದಯಾನಂದ ಮಗಜಿಕೊಂಡಿ, ಎಸ್‌ಪಿವೈಎಸ್‌ಎಸ್‌ನ ಜಿಲ್ಲಾ ಸಂಚಾಲಕರಾದ ಗೋಪಾಲಕೃಷ್ಣ ಜೋಶಿ, ಅಮರವಾತಿ ಗಾಣಗಿ ಸೇರಿದಂತೆ ಇತರರು ಇದ್ದರು. ಇದಕ್ಕೂ ಪೂರ್ವದಲ್ಲಿ ಗಾಯತ್ರಿ ಜೋಶಿ ನೇತೃತ್ವದಲ್ಲಿ ನೂರಾರು ಜನರು ಯೋಗಾಭ್ಯಾಸ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಯೋಗ ಭಾರತದ ಅಮೂಲ್ಯ ಪರಂಪರೆ, ಅದರ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಿದ ದಿನವಾದ ಜೂ. 21ಕ್ಕೆ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅನನ್ಯ ಕೊಡುಗೆ ಇದಾಗಿದೆ ಎಂದರು.
ನೃಪತುಂಗ ಬೆಟ್ಟ: ಹು-ಧಾ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಘಟಕದಿಂದ ಇಲ್ಲಿನ ನೃಪತುಂಗ ಬೆಟ್ಟದ ತಪ್ಪಲಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಯೋಗ ಗುರು ವೈದ್ಯ ಚನ್ನಬಸವಣ್ಣವರ ಮಾರ್ಗದರ್ಶನದಲ್ಲಿ ಜನರು ವಿವಿಧ ಯೋಗಾಸನ, ಪ್ರಾಣಾಯಾಮ, ಧ್ಯಾನ ನಡೆಸಿದರು. ಶಾಸಕ ಮಹೇಶ ಟೆಂಗಿನಕಾಯಿ, ಉಪಮೇಯರ್ ಸಂತೋಷ ಚವ್ಹಾಣ, ಉಮೇಶಗೌಡ, ಬೀರಪ್ಪ ಖಂಡೇಕರ, ಉಮಾ ಮುಕುಂದ, ರೂಪಾ ಶೆಟ್ಟಿ, ಈಶ್ವರಗೌಡ ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು.