ಮುಂಬಡ್ತಿ ಪರೀಕ್ಷೆ ನಡೆಯದಿದ್ದರೆ ಕನ್ನಡಿಗರಿಗೆ ಅನ್ಯಾಯ!

KannadaprabhaNewsNetwork |  
Published : Jun 22, 2026, 02:15 AM IST
ಮನವಿ | Kannada Prabha

ಸಾರಾಂಶ

ರೈಲ್ವೆ ನೌಕರರು, ಈ ಬಾರಿ ಪರೀಕ್ಷೆ ರದ್ದಾದರೆ ಕನ್ನಡಿಗರಿಗೆ ಅನ್ಯಾಯವಾಗುತ್ತದೆ. ಪರೀಕ್ಷೆ ನಡೆಸಲು ಬಿಡಿ ಎಂದು ಕರವೇಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಮೂರು ತಿಂಗಳ ಹಿಂದೆ ಕನ್ನಡಪರ ಸಂಘಟನೆಗಳ ಹೋರಾಟದಿಂದ ರದ್ದಾಗಿದ್ದ ರೈಲ್ವೆಯ ಕೆಲ ಬಡ್ತಿ ಪರೀಕ್ಷೆಗಳಿಗೆ ಜೂ. 25ರಂದು ಮತ್ತೆ ಪರೀಕ್ಷೆ ನಡೆಸಲಾಗುತ್ತಿದೆ. ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಷ್ಟೇ ಪರೀಕ್ಷೆ ನಡೆಸಲು ಮುಂದಾಗಿದೆ. ಇದನ್ನು ಖಂಡಿಸಿ ಕರವೇ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಆದರೆ ರೈಲ್ವೆ ನೌಕರರು, ಈ ಬಾರಿ ಪರೀಕ್ಷೆ ರದ್ದಾದರೆ ಕನ್ನಡಿಗರಿಗೆ ಅನ್ಯಾಯವಾಗುತ್ತದೆ. ಪರೀಕ್ಷೆ ನಡೆಸಲು ಬಿಡಿ ಎಂದು ಕರವೇಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.

ನೈಋತ್ಯ ರೈಲ್ವೆಯ ವಿವಿಧ ವಿಭಾಗಗಳಲ್ಲಿ ಈ ಮೊದಲು ಬಡ್ತಿ ಹುದ್ದೆಗಳ ನೇಮಕಾತಿಗೆ ಆಂಗ್ಲ, ಹಿಂದಿ ಹಾಗೂ ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಿ ಅಧಿಸೂಚನೆ ಹೊರಡಿಸಿತ್ತು. ಆದರೆ, ಪರೀಕ್ಷೆ 4 ದಿನ ಇರುವಾಗಲೇ ಕನ್ನಡಕ್ಕೆ ಕೋಕ್ ನೀಡಿ ಕೇವಲ ಆಂಗ್ಲ, ಇಂಗ್ಲಿಷ್‌ನಲ್ಲಿ ಪರೀಕ್ಷೆ ನಡೆಸುವುದಾಗಿ ಹೊಸದಾಗಿ ಅಧಿಸೂಚನೆ ಹೊರಡಿಸಿತ್ತು.‌ ಈ ಪರೀಕ್ಷೆ ಮಾ. 17ರಂದು ಇತ್ತು. ಆಗ ಕನ್ನಡಪರ ಸಂಘಟನೆಗಳು ಕೇಂದ್ರಗಳಿಗೆ ಮುತ್ತಿಗೆ ಹಾಕಿದ್ದರಿಂದ ಪರೀಕ್ಷೆ ರದ್ದಾಗಿತ್ತು. ಆಗ ರದ್ದುಗೊಂಡಿದ್ದ ಹುದ್ದೆಗಳ ಬಡ್ತಿಗಾಗಿನ ಪರೀಕ್ಷೆ ಜೂ. 25ರಂದು ನಡೆಯಲಿದೆ. ಇದು ಕೂಡ ಆಂಗ್ಲ ಮತ್ತು ಹಿಂದಿಯಲ್ಲಿ.

ಶೇ. 90ರಷ್ಟು ಕನ್ನಡಿಗರು:

ವಲಯದ 430 ನೌಕರರು ಜೂ. 25ರಂದು ನಡೆಯಲಿರುವ ಪರೀಕ್ಷೆ ಬರೆಯಲಿದ್ದಾರೆ. 430ರಲ್ಲಿ 368 ಜನ (ಶೇ.90) ಕನ್ನಡಿಗರೇ ಇದ್ದಾರೆ. ಹುಬ್ಬಳ್ಳಿ ವಿಭಾಗದ 6 ಡಿಪಾರ್ಟ್ಮೆಂಟ್‌ಗಳಿಗೆ ನಡೆಯುತ್ತಿರುವ ಪರೀಕ್ಷೆಯಲ್ಲಿ ಒಟ್ಟು 179 ಅಭ್ಯರ್ಥಿಗಳ ಪೈಕಿ 150 ಕನ್ನಡಿಗರಿದ್ದಾರೆ. ಬೆಂಗಳೂರು ವಿಭಾಗದ 2 ಡಿಪಾರ್ಟ್ಮೆಂಟ್‌ಗಳಿಗೆ ನಡೆಯುತ್ತಿರುವ ಪರೀಕ್ಷೆಯಲ್ಲಿ 112 ಅಭ್ಯರ್ಥಿ ಪರೀಕ್ಷೆ ಬರೆಯುತ್ತಿದ್ದು, 93 ಜನ ಕನ್ನಡಿಗರಿದ್ದಾರೆ.

ಮೈಸೂರು ವಿಭಾಗದ 3 ಡಿಪಾರ್ಟ್ಮೆಂಟ್‌ಗಳ ಪರೀಕ್ಷೆಯಲ್ಲಿ 139 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು,125 ಜನ ಕನ್ನಡಿಗರಿದ್ದಾರೆ.

ಉದಾಹರಣೆಗೆ ಜೂ. 25ರಂದು ಮೈಸೂರು ವಿಭಾಗದಲ್ಲಿ ನಡೆಯುವ LDCE ಗೂಡ್ಸ್ ಟ್ರೈನ್ ಮ್ಯಾನೇಜರ್‌ನ 56 ಹುದ್ದೆಗಳಿಗೆ 77 ನೌಕರರು ಪರೀಕ್ಷೆ ಬರೆಯುತ್ತಿದ್ದಾರೆ. ಇವರಲ್ಲಿ ಕೇವಲ 6 ಜನ ಮಾತ್ರ ಅನ್ಯ ಭಾಷಿಕರಿದ್ದು, ಉಳಿದ 71 ಜನರು ಕನ್ನಡಿಗರಿದ್ದಾರೆ. ಈ ಪರೀಕ್ಷೆ ಏನಾದರೂ ರದ್ದಾದರೆ ಮತ್ತು ಮುಂದೆ ಯಾವುದೇ ರೀತಿಯ ಟ್ರೈನ್ ಮ್ಯಾನೇಜರ್ ಹುದ್ದೆಗೆ ನೋಟಿಫಿಕೇಶನ್ ಕರೆದರೆ 300ಕ್ಕೂ ಹೆಚ್ಚು ಜನ ಅನ್ಯಭಾಷಿಕರು ಪರೀಕ್ಷೆಗೆ ಅರ್ಹತೆ ಪಡೆದುಕೊಳ್ಳಲಿದ್ದಾರೆ.

ಈ ಪರೀಕ್ಷೆ ನಡೆದರೆ ಮುಂದೆ ಅಧಿಸೂಚನೆ

ಜೂ. 25ರಂದು ಬಡ್ತಿ ಪರೀಕ್ಷೆ ಸರಾಗವಾಗಿ ನಡೆದರೆ ಮಾತ್ರ ಮುಂದಿನ ದಿನಗಳಲ್ಲಿ ಈ ಹಿಂದೆ ರದ್ದಾಗಿರುವ ಎಲ್ಲ ಪರೀಕ್ಷೆ ನಡೆಸುವುದಾಗಿ ರೈಲ್ವೆ ಹಿರಿಯ ಅಧಿಕಾರಿಗಳು ಪರೀಕ್ಷಾರ್ಥಿಗಳಿಗೆ ತಿಳಿಸಿದ್ದಾರೆ.

ಈ ಹಿಂದೆ ಹುಬ್ಬಳ್ಳಿ ವಿಭಾಗದಲ್ಲಿ ಕರೆದಿರುವ 15% ಪರ್ಸೆಂಟ್ LDCE ಒಂದಕ್ಕೆ 101 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಪ್ರಸ್ತುತ 152 ನೌಕರರು ಈಗಾಗಲೇ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಇವರಲ್ಲಿ ಕೇವಲ 11 ನೌಕರರು ಅನ್ಯಭಾಷಿಕರಾಗಿದ್ದು, 141 ನೌಕರರು ಕನ್ನಡಿಗರಿದ್ದಾರೆ. ಒಂದು ವೇಳೆ ಈ ಪರೀಕ್ಷೆ ನಡೆಯದಿದ್ದರೆ ಈ ಎಲ್ಲ ನೌಕರರು ಮುಂಬಡ್ತಿಯಿಂದ ವಂಚಿತರಾಗಲಿದ್ದಾರೆ.

ಪ್ರತಿಭಟನೆ ನಡೆಸದಂತೆ 200ಕ್ಕೂ ಅಧಿಕ ಮನವಿ ಪತ್ರ: ಕನ್ನಡ ಭಾಷೆ ಕಡೆಗಣಿಸಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಜೂ. 25ರಂದು ನಡೆಯಲಿರುವ ಪರೀಕ್ಷೆ ಕೇಂದ್ರಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿವೆ. ಪ್ರತಿಭಟನೆಯಿಂದ ಪರೀಕ್ಷೆ ರದ್ದಾದರೆ ವಯೋಮಿತಿ ಮುಗಿಯುವ ಹಂತದಲ್ಲಿರುವ ನೂರಾರು ಜನರು ಬಡ್ತಿಯಿಂದ ವಂಚಿತರಾಗಲಿದ್ದಾರೆ. ಹೀಗಾಗಿ, ಹುಬ್ಬಳ್ಳಿ- 100, ಮೈಸೂರು - 70, ಬೆಂಗಳೂರು ವಿಭಾಗದ 50ಕ್ಕೂ ಹೆಚ್ಚು ಕನ್ನಡ ಅಭ್ಯರ್ಥಿಗಳು ಕರವೇ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರಿಗೆ ಪ್ರತಿಭಟನೆ ನಡೆಸಬೇಡಿ. ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಿಕೊಡುವಂತೆ ಅಂಚೆ ಮೂಲಕ ಮನವಿ ಸಲ್ಲಿಸಿದ್ದಾರೆ. ಹಿಂದೆ ಕನ್ನಡಿಗರ ಹೋರಾಟಕ್ಕೆ ಪರೀಕ್ಷೆಗಳೆ ರದ್ದು

ಮೈಸೂರು ವಿಭಾಗದಲ್ಲಿ 2025ರ ಸೆ. 25ರಂದು ಗೂಡ್ಸ್ ಟ್ರೇನ್ ಮ್ಯಾನೇಜರ್ 194 Costly ಹಾಗೂ 2025ರ ನ. 5ರಂದು ಹುಬ್ಬಳ್ಳಿ ವಿಭಾಗದಲ್ಲಿ ಎಲ್‌ ಡಿಸಿಇ (Limited departmental compitetive examination 101 ಬಡ್ತಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಈ ಪರೀಕ್ಷೆ ಮಾ.17ರಂದು ನಿಗದಿಗೊಳಿಸಲಾಗಿತ್ತು.

ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ ನೀಡಿರುವುದಕ್ಕೆ ಸಂತಸಗೊಂಡಿದ್ದ ಕನ್ನಡಿಗರು ಕನ್ನಡ ಭಾಷೆಯಲ್ಲಿಯೇ ಓದಿ ಪರೀಕ್ಷೆಗೆ ಸಿದ್ದರಾಗಿದ್ದರು. ಆದರೆ, ರೈಲ್ವೆ ಮಂಡಳಿಯು ಪರೀಕ್ಷೆಗೆ ಕೇವಲ 4 ದಿನ ಮುಂಚಿತವಾಗಿ ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಮಾ. 12ರಂದೇ ಅಧಿಸೂಚನೆ ಹೊರಡಿಸಿರುವಂತೆ ಶುಕ್ರವಾರ (ಮಾ.13) ಸಂಜೆ ಹೊಸ ಅಧಿಸೂಚನೆಯ ಪ್ರತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು. ಇದಕ್ಕೆ ರೊಚ್ಚಿಗೆದ್ದ ಕನ್ನಡಪರ ಸಂಘಟನೆಗಳು ಮಾ. 17 ರಂದು ಪರೀಕ್ಷೆ ನಡೆಯುತ್ತಿದ್ದ ಬೆಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರು ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕಿ ಪರೀಕ್ಷೆಗಳನ್ನೇ ರದ್ದುಗೊಳಿಸಿ ಮುಂದೂಡುವಂತೆ ಮಾಡಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತ ಜಗತ್ತಿಗೆ ಯೋಗ ಗುರು: ಅಭಿನವ ಕರಿಬಸವ ಶ್ರೀಗಳು
ನಿಯಮಿತ ಯೋಗಾಭ್ಯಾಸದಿಂದ ಆರೋಗ್ಯಕರ ಜೀವನ