ಜಾಲತಾಣ ಬಳಕೆಯಿಂದ ಕೌಟುಂಬಿಕ ಸಾಮರಸ್ಯ ಹಾಳು

KannadaprabhaNewsNetwork | Published : Mar 28, 2025 12:31 AM

ಸಾರಾಂಶ

ಸಾಮಾಜಿಕ ಜಾಲತಾಣಗಳ ಹೆಚ್ಚು ಬಳಕೆ ಕೌಟುಂಬಿಕ ಸಾಮರಸ್ಯವನ್ನು ಹಾಳುಗೆಡವುತ್ತಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಸಾಮಾಜಿಕ ಜಾಲತಾಣಗಳ ಹೆಚ್ಚು ಬಳಕೆ ಕೌಟುಂಬಿಕ ಸಾಮರಸ್ಯವನ್ನು ಹಾಳುಗೆಡವುತ್ತಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ತಿಳಿಸಿದರು.

ರೋಟರಿ ಸಿದ್ಧಗಂಗಾ, ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆ, ಸಂಕಲ್ಪ ಚಾರಿಟಬಲ್ ಟ್ರಸ್ಟ್, ಜೀವನ ಜ್ಯೋತಿ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಬಡ್ಡಿಹಳ್ಳಿಯ ಅಭಿವೃದ್ಧಿ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು

ಬಹಳಷ್ಟು ಕುಟುಂಬಗಳು ಸಾಮಾಜಿಕ ಜಾಲತಾಣದಿಂದಲೇ ಹಾಳಾಗುತ್ತಿವೆ. ಮೊಬೈಲ್‌ನ ಅತಿಯಾದ ಬಳಕೆ ಅನಾಹುತಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದರು.

ಹಿಂದೆ ಕೌಟುಂಬಿಕ ಸಮಸ್ಯೆಗಳು ನ್ಯಾಯಾಲಯಗಳಿಗೆ ಹೆಚ್ಚು ದಾಖಲಾಗುತ್ತಿರಲಿಲ್ಲ. ಈಗ ಈ ಪ್ರಕರಣಗಳು ಹೆಚ್ಚುತ್ತಿವೆ. ಕೌಟುಂಬಿಕ ದರ‍್ಜನ್ಯ ಹಾಗೂ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆಲ್ಲಾ ಮೊಬೈಲ್ ಬಳಕೆ, ಸಾಮಾಜಿಕ ತಾಣಗಳ ಬಳಕೆಯೂ ಕಾರಣವಾಗುತ್ತಿದೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದರು.

ವಿಶ್ವ ಮಹಿಳಾ ದಿನಾಚರಣೆಗೆ ಒಂದು ವಿಶೇಷ ಹಿನ್ನೆಲೆ ಇದೆ. ಆರಂಭವಾಗಿರುವ ಮಹಿಳೆಯರ ಹಕ್ಕುಗಳ ಹೋರಾಟಕ್ಕೆ ಮನ್ನಣೆ ಸಿಕ್ಕಿದ ದಿನ ಇದು ಎಂದರು.

ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲಿಯೂ ಸಾಧನೆ ಮಾಡಲು ಇಂತಹ ಹೋರಾಟಗಳೇ ಪ್ರಮುಖ ಕಾರಣವಾಗಿದೆ. ಮಹಿಳೆ ಇಂದು ಕೇವಲ ಮನೆಯೊಳಗಿನ ಮಹಿಳೆಯಲ್ಲ. ಪುರುಷನಂತೆಯೇ ಸಬಲೀಕರಣಗೊಂಡಿದ್ದಾಳೆ. ಆರ್ಥಿಕವಾಗಿಯೂ ದುಡಿಯುತ್ತಿದ್ದಾಳೆ. ಮಹಿಳೆ ಆರ್ಥಿಕವಾಗಿ ಸಬಲೀಕರಣಗೊಂಡಾಗ ನಿಜವಾದ ಅರ್ಥದಲ್ಲಿ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕೆ ಅರ್ಥ ಬರುತ್ತದೆ ಎಂದರು.

ಅಧ್ಯಕ್ಷತೆಯನ್ನು ರೋಟರಿ ಸಿದ್ಧಗಂಗಾ ಅಧ್ಯಕ್ಷ ಸಿ.ನರಸಿಂಹಮೂರ್ತಿ ವಹಿಸಿದ್ದರು. ಕಾರ‍್ಯಕ್ರಮದಲ್ಲಿ ಅಭಿವೃದ್ಧಿ ಸೇವಾ ಸಂಸ್ಥೆಯ ಕಾರ್ಯದರ್ಶಿ ಮಂಜುಳಾ ನರಸಿಂಹಮೂರ್ತಿ, ನಿವೃತ್ತ ಪ್ರಾಚಾರ‍್ಯ ಮರಿಬಸಪ್ಪ, ನಾಗರಿಕ ಸಮಿತಿ ಉಪಾಧ್ಯಕ್ಷೆ ಚಂದ್ರಕಲಾ, ರೋಟರಿ ಸಿದ್ಧಗಂಗಾ ಕರ‍್ಯರ‍್ಶಿ ಎಂ.ಎನ್.ಚಂದ್ರಶೇಖರ್, ವಕೀಲರಾದ ಚೆಲುವರಾಜು, ಲಕ್ಷ್ಮೀಪತಿ ಬಿ., ರತ್ನಮ್ಮ ಮುಂತಾದವರು ಉಪಸ್ಥಿತರಿದ್ದರು.

Share this article