ಉಡುಪಿ: ಕರ್ನಾಟಕ ಕರಾವಳಿ ಜಿಲ್ಲೆಯ ಮೀನುಗಾರರು ಅಂತಾರಾಜ್ಯ ಮೀನುಗಾರಿಕೆ ನಡೆಸುವ ಸಂದರ್ಭದಲ್ಲಿ ಎದುರಿಸುವ ಸಮಸ್ಯೆಗಳ ಬಗ್ಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಮಹಾರಾಷ್ಟ್ರದ ಮೀನುಗಾರಿಕೆ ಮತ್ತು ಬಂದರು ಸಚಿವ ನಿತೇಶ್ ರಾಣೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ದೇಶದ ಪಶ್ಚಿಮ ಹಾಗೂ ಪೂರ್ವ ಕರಾವಳಿಯ ರಾಜ್ಯಗಳಲ್ಲಿ ಮೀನುಗಾರಿಕಾ ಚಟುವಟಿಕೆಗಳಲ್ಲಿ ಸಮನ್ವಯತೆ ಸಾಧಿಸಲು ರಾಷ್ಟ್ರೀಯ ಮೀನುಗಾರಿಕಾ ನೀತಿ ಜಾರಿಗೆ ತರಲು ಸಹಕಾರ ನೀಡುವ ಜೊತೆಗೆ ಎಲ್ಲ ರಾಜ್ಯಗಳ ಮೀನುಗಾರಿಕಾ ಸಚಿವರು ಹಾಗೂ ಮೀನುಗಾರ ಮುಖಂಡರನ್ನೊಳಗೊಂಡ ಸಮನ್ವಯ ಸಮಿತಿ ರಚನೆ ಮಾಡುವ ನಿಟ್ಟಿನಲ್ಲಿ ಕೈಜೋಡಿಸುವಂತೆಯೂ ಯಶ್‌ಪಾಲ್ ಅವರು ಸಚಿವರಿಗೆ ಮನವಿ ಮಾಡಿ ಈಗಾಗಲೇ ಗೋವಾ ಸರ್ಕಾರದ ಮೀನುಗಾರಿಕಾ ಸಚಿವರೊಂದಿಗೆ ಚರ್ಚೆ ನಡೆಸಿರುವ ಮಾಹಿತಿ ನೀಡಿದರು.
ಏಷ್ಯಾದಲ್ಲೇ ಅತಿ ದೊಡ್ಡ ಮೀನುಗಾರಿಕಾ ಬಂದರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಸಾವಿರಾರು ಬೋಟ್‌ಗಳು ದೇಶದಲ್ಲೇ ಅತ್ಯಂತ ವೈಜ್ಞಾನಿಕವಾಗಿ ಅಧುನಿಕ ತಂತ್ರಜ್ಞಾನದ ಮೂಲಕ ಮೀನುಗಾರಿಕೆ ನಡೆಸುತ್ತಿದ್ದು, ಮಹಾರಾಷ್ಟ್ರದ ಮೀನುಗಾರಿಕೆ ಇಲಾಖೆಯ ಉನ್ನತ ಅಧಿಕಾರಿಗಳ ನಿಯೋಗದೊಂದಿಗೆ ಮಲ್ಪೆಗೆ ಭೇಟಿ ನೀಡುವಂತೆ ಸಚಿವ ರಾಣೆಯವರನ್ನು ಆಹ್ವಾನಿಸಿದರು.ಯಶ್ ಪಾಲ್ ಸುವರ್ಣ ಅವರ ಮನವಿಗೆ ಸ್ಪಂದಿಸಿದ ರಾಣೆ, ಅಂತಾರಾಜ್ಯ ಮೀನುಗಾರಿಕೆ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಕ್ರಮ ವಹಿಸುವ ಭರವಸೆ ನೀಡಿ, ರಾಷ್ಟ್ರೀಯ ಮೀನುಗಾರಿಕಾ ನೀತಿಯ ಬಗ್ಗೆ ಸಹಮತ ಸೂಚಿಸಿ, ಅಂತಾರಾಜ್ಯ ಮೀನುಗಾರಿಕಾ ಸಮನ್ವಯ ಸಮಿತಿ ರಚನೆಗೆ ವಿಶೇಷ ಮುತುವರ್ಜಿ ವಹಿಸುವ ಭರವಸೆ ನೀಡಿ, ಮಲ್ಪೆ ಬಂದರಿಗೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮುಂಬೈ ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್ ಅರವಿಂದ ಶೆಟ್ಟಿ, ಉದ್ಯಮಿಗಳಾದ ರಾಜೇಶ್ ಕುಂದರ್, ಕಿಶನ್ ಶೆಟ್ಟಿ, ಅಮಿತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.