ಹೊನ್ನಾಳಿ, ನ್ಯಾಮತಿ ಪೊಲೀಸರ ಕಾರ್ಯ । ದುರುಳರೊಂದಿಗೆ ಗುಂಡಿನ ಚಕಮಕಿ । 7ರಲ್ಲಿ ನಾಲ್ವರು ವಂಚಕರ ಬಂಧನ
ಸಿನಿಮೀಯ ರೀತಿಯಲ್ಲಿ ದರೋಡೆ ಗ್ಯಾಂಗ್‌ನ್ನು ಹೊನ್ನಾಳಿ ಮತ್ತು ನ್ಯಾಮತಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕ್ರಾಸ್ ಬಳಿ ಭಾನುವಾರ ನಸುಕಿನ ಜಾವ ನಡೆದಿದೆ.
ಆರೋಪಿಗಳ ಬಂಧಿಸುವ ಯತ್ನದಲ್ಲಿ ಪೊಲೀಸರ ನಡುವೆ ಘರ್ಷಣೆ ಉಂಟಾಗಿದೆ. ತಪ್ಪಿಸಿಕೊಳ್ಳಲು ದರೋಡೆಕೋರ ಪೊಲಿಸ್ ಪೇದೆ ಮೇಲೆ ಮಚ್ಚಿನಿಂದ ದಾಳಿ ಮಾಡಿದ್ದಾನೆ. ಈ ವೇಳೆ ನ್ಯಾಮತಿ ಪೊಲೀಸ್ ಇನ್‌ಸ್ಪೆಕ್ಟರ್ ರವಿ ಆತ್ಮರಕ್ಷಣೆಗೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.ಉತ್ತರ ಪ್ರದೇಶದ ಬಾದಾಯ್ ಜಿಲ್ಲೆಯ ಕಕ್ರಾಳ ಗ್ರಾಮದ ಗುಡ್ಡು ಆಲಿಯಸ್ ಕಾಲಿಯಾ (45). ಹಜರತ್ ಆಲಿ (50). ಅಸ್ಲಾಂ ಆಲಿಯಾಸ್ ಟನ್ ಟನ್ (55). ಕಮರುದ್ದಿನ್ ಆಲಿಯಾಸ್ ಬಾಬು ಸೆರೆಲಿ (40) ಬಂಧಿತರು. ಇನ್ನು ಉತ್ತರ ಪ್ರದೇಶದ ಬಚೌರ ಗ್ರಾಮದ ರಾಜಾರಾಮ್, ಉತ್ತರ ಪ್ರದೇಶದ ನೌಲಿ ಗ್ರಾಮದ ಬಾಬುಷಾ, ಕರ್ನಾಟದ ಕೋಲಾರ ಜಿಲ್ಲೆ ಮಾಲೂರಿನ ಅಪೀಜ್ ಪಾರಾರಿಯಾಗಿರುವ ಆರೋಪಿಗಳು. ಇವರ ಪತ್ತೆಗೆ ಪೊಲೀಸರ ತಂಡಗಳನ್ನು ರಚಿಸಲಾಗಿದೆ.
ಏತನ್ಮಧ್ಯೆ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಘಟನೆ ನಡೆದ ತಾಲೂಕಿನ ಅರಬಗಟ್ಟೆ ಕ್ರಾಸ್‌ಗೆ ಭೇಟಿ ನೀಡಿ ಪರಿಶೀಲಿಸಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬೆನ್ನಟ್ಟಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ನ್ಯಾಮತಿ ಪೊಲೀಸ್ ಇನ್‌ನ್‌ಸ್ಪೆಕ್ಟರ್ ರವಿ ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಾಳುವನ್ನು ದಾವಣಗೆರೆ ಆಸ್ಪತ್ರೆ ಸೇರಿಸಲಾಗಿದ್ದು ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ತಂಡದಲ್ಲಿ ಒಟ್ಟು 7 ಜನರಿರುವ ಬಗ್ಗೆ ಮಾಹಿತಿ ಇದ್ದು ಇನ್ನುಳಿದ ಮೂರು ಜನ ಆರೋಪಿಗಳು ತಪ್ಪಿಸಿಕೊಂಡಿದ್ದು ಇವರ ಪತ್ತೆಗಾಗಿ ಪೊಲೀಸರ 2 ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ಸವಳಂಗ ಎಸ್‌ಬಿಐ ಬ್ಯಾಂಕ್ ದರೋಡೆಗೆ ಸ್ಕೆಚ್:
ಭಾನುವಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಆರೋಪಿಗಳ ವಿರುದ್ಧ ಈಗಾಗಲೇ ದೇಶದ ವಿವಿಧೆಡೆಯ ಪೊಲೀಸ್‌ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ, ಜಾರ್ಖಂಡ್, ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ವಿಚಾರಣೆ ವೇಳೆ ಬೆಚ್ಚಿ ಬೀಳಿಸುವ ಮಾಹಿತಿ
ದರೋಡೆಗೆ ಬ್ಯಾಂಕ್‌ಗಳನ್ನು ಹುಡುಕುತ್ತಿರುವಾಗ ಕಳೆದ 2 ದಿನಗಳಿಂದ ಸವಳಂಗ ಗ್ರಾಮದಲ್ಲಿರುವ ಎಸ್‌ಬಿಐ ಬ್ಯಾಂಕ್ ಬಳಿ ತಿರುಗಾಡಿ, ದರೋಡೆಕೋರರ ತಂಡವು ಮಾಹಿತಿ ತಿಳಿದುಕೊಂಡಿತ್ತು. ಶನಿವಾರ ತಡರಾತ್ರಿ ಸವಳಂಗ ಗ್ರಾಮದ ಎಸ್‌ಬಿಐ ಬ್ಯಾಂಕ್ ದರೋಡೆಗೆ ಪೂರ್ವ ತಯಾರಿ ಮಾಡಿಕೊಂಡು, ಹರಿಹರ-ಶಿವಮೊಗ್ಗ ರಸ್ತೆಯಲ್ಲಿ ಎರಡು ಕಾರುಗಳಲ್ಲಿ ಬಂದಿದ್ದಾಗಿ ಬಂಧಿತರು ಬಾಯಿ ಬಿಟ್ಟಿದ್ದಾರೆ. ಬಂಧಿತರು ಭಾಗಿಯಾದ ಸ್ವತ್ತು ಕಳವು ಪ್ರಕರಣ
ಬಂಧಿತ ನಾಲ್ವರಿಂದ ಪತ್ತೆಯಾದ ಹೊಸ ಕೇಸ್
-ಶಿವಮೊಗ್ಗ ಜಿಲ್ಲೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ನಂ 152/2024 ಕಲಂ 331 (3),331(4),305(ಎ) ಬಿಎನ್ಎಸ್ ರೀತ್ಯಾ ದಾಖಲಾದ ಎಸ್‌ಬಿಐ ಬ್ಯಾಂಕ್ ಕಳ್ಳತನ ಪ್ರಕರಣದಲ್ಲಿ 1,25,000 ರು. ಮೌಲ್ಯದ ಕ್ಯಾಮೆರಾ, ಡಿವಿಆರ್, ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತು ಕಳ್ಳತನ ಮಾಡಿದ್ದಾರೆ. ಹಲವು ಜಿಲ್ಲೆ, ರಾಜ್ಯಗಳಲ್ಲಿ ಆರೋಪಿಗಳು ದರೋಡೆ ಮಾಡಿರುವುದು ತಿಳಿದು ಬಂದಿದೆ.