ಕನ್ನಡಪ್ರಭ ವಾರ್ತೆ ಇಳಕಲ್ಲ
ಇಳಕಲ್ಲ ಪೊಲೀಸ್ ಸಿಬ್ಬಂದಿ ನೆರವಿನೊಂದಿಗೆ ಇಬ್ಬರು ಅಂತಾರಾಜ್ಯ ಮನೆಗಳ್ಳರನ್ನು ಹುನಗುಂದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಮಹಾರಾಷ್ಟ್ರದ ಸೊಲ್ಹಾಪೂರ ಮೂಲದವರಾಗಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಬಂಧಿತರಿಂದ ₹26 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಹುನಗುಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಮನೆ ಕಳ್ಳತನ ಪ್ರಕರಣದ ತನಿಖೆಗೆ ಬಾಗಲಕೋಟೆ ಪೊಲೀಸ್ ಅಧೀಕ್ಷಕ ಅಮರನಾಥ ರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ ಹಾಗೂ ಮಹಾಂತೇಶ ಜಿದ್ದಿ, ಹುನಗುಂದ ಪೊಲೀಸ್ ಉಪಾಧೀಕ್ಷಕ ವಿಶ್ವನಾಥರಾವ್ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ, ಹುನಗುಂದ ವೃತ್ತ ಸಿಪಿಐ ಸುನೀಲ ಸವದಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಒಂದೂವರೆ ತಿಂಗಳಿನಿಂದ ಕಾರ್ಯಾಚರಣೆ ನಡೆಸಿದ ಈ ತಂಡ ಖಚಿತ ಮಾಹಿತಿ ಮೇರೆಗೆ ಮಾ.23 ರಂದು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಇವರಿಂದ ಹುನಗುಂದದ ಮನೆಯಲ್ಲಿ ದರೋಡೆ ಮಾಡಿದ್ದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ತನಿಖಾ ತಂಡದಲ್ಲಿ ಅಮೀನಗಡ ಠಾಣೆ ಪಿಎಸ್‌ಐ ಶಿವಾನಂದ ಸಿಂಗನ್ನವರ, ಇಲಕಲ್ಲ ಶಹರ ಠಾಣೆ ಪಿಎಸ್‌ಐ ಸೊಮೇಶ ಗೆಜ್ಜೆ, ಸಿಬ್ಬಂದಿ ಆನಂದ ಗೋಲಪ್ಪನವರ, ರಜಾಕ ಗುಡದಾರಿ, ಪಿ.ಟಿ.ಪವಾರ, ಮಹಾಂತೇಶ ಬೋಳರೆಡ್ಡಿ, ಎ.ಎಚ್. ಸುತಗುಂಡರ, ರಮೇಶ ಕಂಬಳಿ, ಸಿ.ಐ.ಬಳೇಗಾರ, ಮಲ್ಲು ನಾರಗಲ್ಲ, ಸಂಗಮೇಶ ತೋಟದ, ನಾಗರಾಜ ಕುಂದರಗಿ, ಬಿ.ಎಸ್ ಕಾಸಿನಕುಂಟಿ, ಅಂಬರೀಶ ಗ್ಯಾರಡ್ಡಿ, ಎ.ಎಲ್.ನದಾಪ್, ಗಣೇಶ ಪವಾರ, ಪ್ರದೀಪ ಅಂಬಿಗೇರ, ವಿ.ಡಿ ಗೌಡರ, ಬುಡನಸಾಬ ವಾಲಿಕಾರ, ಸಿ.ಟಿ ರಂಗಾಪೂರ, ಶಾಂತಾ ಮಿಣಜಗಿ, ಮುತ್ತು ಬಿಸನಾಳ, ಬಸವರಾಜ ಜಗಲಿ, ಚಂದ್ರು ಜಟ್ಟೇಪ್ಪನವರ ಇದ್ದರು. ಈ ತಂಡದ ಕಾರ್ಯಕ್ಕೆ ಬಾಗಲಕೋಟೆ ಎಸ್‌ಪಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.