ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಿಎಂ ಸಿದ್ದರಾಮಯ್ಯನವರು ಇತ್ತೀಚೆಗೆ ಹಿಂದೂ ಧರ್ಮದಲ್ಲಿ ಅಸಹಿಷ್ಣತೆ ಇದೆ ಎಂದು ದೊಡ್ಡ ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಹೇಳಿಕೆ ನೀಡಿರುವುದು ನೋವಿನ ಸಂಗತಿಯಾಗಿದೆ ಎಂದು ಶಿವಮೊಗ್ಗದ ಸಂಸದ ಬಿ.ವೈ.ರಾಘವೇಂದ್ರ ವಿಷಾದ ವ್ಯಕ್ತಪಡಿಸಿದರು.ಪಟ್ಟಣದ ಹಿರೇಕಲ್ಮಠದಲ್ಲಿ ಶುಕ್ರವಾರ 5ನೇ ದಿನದ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳಿಗೂ ತಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದ್ದು, ಈಗಿನ ಶ್ರೀಗಳು ಲಿಂ.ಶ್ರೀಗಳವರ ಪರಂಪರೆಯನ್ನು ತುಂಬಾ ಅಚ್ಚುಕಟ್ಟಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದು, ಎಲ್ಲರ ಸಲಹೆ-ಸಹಕಾರ ಮಠದ ಮೇಲಿರಲಿ ಎಂದು ವಿನಂತಿಸಿದರು.ನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ಮರ್ದನ ಮಾಡಿಕೊಂಡು ಮನುಷ್ಯರಾಗಿ ಬದುಕುವ ನಿಟ್ಟಿನಲ್ಲಿ ದಸರಾ ಹಬ್ಬದಂದು ಸಂಕಲ್ಪ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಸಿಎಂ ಸಿದ್ದರಾಮಯ್ಯನವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಿಂದೂ ಧರ್ಮವನ್ನು ಕೀಳಾಗಿ ನೋಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿ, ನ್ಯಾಮತಿ ಅವಳಿ ತಾಲ್ಲೂಕುಗಳ ಸಮಸ್ಯೆಗಳನ್ನು ತಮ್ಮ ತಂದೆ ಬಿ.ಎಸ್.ವೈ. ಸಿ.ಎಂ. ಆಗಿದ್ದಾಗ ಸರ್ಕಾರದ ಗಮನಕ್ಕೆ ತಂದು ಹಠ ಬಿಡದೇ ಅವಳಿ ತಾಲ್ಲೂಕುಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಅನುದಾನದ ಹೊಳೆಯನ್ನೇ ಹರಿಸಿ ಮಾದರಿ ತಾಲ್ಲೂಕುಗಳನ್ನಾಗಿಸಲು ಅವಿರತ ಶ್ರಮಿಸಿದ್ದಾರೆ ಎಂದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಶ್ರೀಮಠದ ಸುಭದ್ರೆ ಆನೆಯನ್ನು ಉಡುಪಿಯ ಶ್ರೀ ಕೃಷ್ಣ ಮಠದವರು ತಮಗೇ ಬೇಕೆಂದು ಪಟ್ಟು ಹಿಡಿದು, ಮುಖ್ಯಮಂತ್ರಿಗೆ ತಪ್ಪು ಮಾಹಿತಿ ಕೊಟ್ಟು ಅವರಿಂದ ಪತ್ರಕ್ಕೆ ಸಹಿ ಹಾಕಿಸಿಕೊಂಡು ಪೊಲೀಸ್ ಫೋರ್ಸ್ ಮತ್ತು ಅರಣ್ಯಾಧಿಕಾರಿಗಳ ಸಮೇತ ಮಠಕ್ಕೆ ಬಂದು ಒತ್ತಡ ಹೇರಿದ್ದರು. ಮಾಹಿತಿ ತಿಳಿದು ತಾವು ಧಾವಿಸಿ ಬಂದು ಈ ಸಂಬಂಧ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರ ಹತ್ತಿರ ಮಾತಾಡಿ, ಶ್ರೀ ಕೃಷ್ಣ ಮಠದವರಿಗೆ ಯಾವುದೇ ಕಾರಣಕ್ಕೂ ಆನೆ ಹಿರೇಕಲ್ಮಠದಿಂದ ಒಂದು ಹೆಜ್ಜೆಯೂ ಹೊರಹೋಗಲು ಬಿಡುವುದಿಲ್ಲವೆಂದು ಹೇಳಿದ್ದು, ಅವರು ಸಂಘರ್ಷಕ್ಕೆ ಇಳಿದರೆ ತಾವು ಹಿರೇಕಲ್ಮಠದ ಭಕ್ತವೃಂದದೊಂದಿಗೆ ಅನಿವಾರ್ಯವಾಗಿ ಸಂಘರ್ಷಕ್ಕಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.ಬಿಜೆಪಿ ಮುಖಂಡ ಶಾಂತರಾಜ್ ಪಾಟೀಲ್ ಉಪನ್ಯಾಸ ನೀಡಿದರು. ಚನ್ನಗಿರಿ ವಿರಕ್ತಮಠದ ಡಾ.ಬಸವಜಯಚಂದ್ರ ಸ್ವಾಮೀಜಿ ಧರ್ಮಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು, ಡಾ.ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಧರ್ಮಸಭೆಯ ಸಾನಿಧ್ಯ ವಹಿಸಿದ್ದರು. ಬಿಜೆಪಿ ಮುಖಂಡರಾದ ಅರಕೆರೆ ನಾಗರಾಜ್, ಹೊಸೂರು ರುದ್ರೇಶ್, ಎ.ಬಿ.ಹನುಮಂತಪ್ಪ, ಎಂ.ಆರ್.ಮಹೇಶ್, ನೆಲಹೊನ್ನೆ ಮಂಜುನಾಥ್, ಮುಖಂಡರಾದ ಎಚ್.ಎ.ಗದ್ದಿಗೇಶ್, ಕತ್ತಿಗೆ ನಾಗರಾಜ್, ಸಾಹಿತಿ ಚನ್ನಪ್ಪ ಬಿಸ್ಠಾಳ್, ಎಚ್.ಆರ್.ಗಂಗಾಧರ್, ಶಿಕಾರಿಪುರದ ಸುಧೀರ್, ರಾಮಣ್ಣ,ಮಠದ ಧರ್ಮ ಪ್ರವರ್ತಕ ಅನ್ನದಾನಯ್ಯ ಶಾಸ್ತ್ರಿ ಮತ್ತಿತರರು ಹಾಜರಿದ್ದರು.
ಪಟ್ಟಣದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಆಂಗ್ಲಮಾಧ್ಯಮ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಕಾರ್ಯಕ್ರಣಮದಲ್ಲಿ ಮಂಜುನಾಥ ದೇವರು ಅವರು ದೇವಿ ಪುರಾಣ ಪ್ರವಚನ ಮಾಡಿದರು.